ಮುದ್ದೇಬಿಹಾಳ: ಪ್ರವಾಹ ಪೀಡಿತ ಗ್ರಾಮ ವ್ಯಾಪ್ತಿಯಲ್ಲಿ ಆಗಿರುವ ಜಮೀನುಗಳಲ್ಲಿನ ಬೆಳೆ ಹಾನಿಗೆ ಸರ್ಕಾರಿ ಎಕರೆಗೆ ತಲಾ 50,000 ರೂ. ಪರಿಹಾರ ಧನ ವಿತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಸಚಿವ ಸಿ.ಎಸ್. ನಾಡಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾಹದಿಂದ ಆಗಿರುವ ಹಾನಿ ಸಮೀಕ್ಷೆಯಲ್ಲಿ ಪ್ರವಾಹ ಇಳಿದ 30 ದಿನಗಳೊಳಗಾಗಿ ಸಮರೋಪಾದಿಯಲ್ಲಿ ನಡೆಸಿ ಸಂತ್ರಸ್ತರ ಜೀವನ ಮೊದಲಿನಂತೆ ನಡೆಯಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸುನೀಲಗೌಡ ಮಾತನಾಡಿ, ಕೆಲವು ಪರಿಹಾರ ಕೇಂದ್ರಗಳಲ್ಲಿ ಹಸುಗೂಸುಗಳಿಗೆ ತೊಟ್ಟಿಲು ಕೊಡದಿರುವುದರಿಂದ ಅವುಗಳನ್ನು ನೆಲದ ಮೇಲೆ ಮಲಗಿಸುತ್ತಿರುವುದು ಕಂಡು ಬಂತು. ದನಕರುಗಳಿಗೆ ಮೇವು ಇಲ್ಲದಿರುವುದನ್ನು ಗಮನಿಸಿದ್ದೇನೆ. ಕೇಂದ್ರಗಳಲ್ಲಿ ವಿದ್ಯುತ್‌ಗಾಗಿ ಜನರೇಟರ್ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿಯನ್ನು ಉತ್ತಮವಾಗಿ ಎದುರಿಸಿದ್ದರೂ ಇಂಥ ಸಣ್ಣ ಪುಟ್ಟ ಕೊರತೆಗಳನ್ನೂ ನಿವಾರಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಪ್ರವಾಹದಿಂದ ಟಿಸಿ, ವಿದ್ಯುತ್ ಕಂಬ, ರಸ್ತೆಗಳು ಹಾಳಾಗಿದ್ದು ಸೊಳ್ಳೆಗಳ ಹಾವಳಿಯಿಂದ ಸಾಂಕ್ರಾಮಿಕ ರೋಗದ ಭೀತಿ ಉಂಟಾಗಿದ್ದು ಇವೆಲ್ಲವನ್ನು ಸರಿಪಡಿಸಬೇಕು. ಪರಿಸ್ಥಿತಿ ಪೂರ್ತಿ ನಿಯಂತ್ರಣಕ್ಕೆ ಬರುವ ತನಕ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿಯೇ ಇರಲು ಅವಕಾಶ ಮಾಡಿಕೊಡಬೇಕು. ಮಕ್ಕಳು ಶಾಲೆಗೆ ಹೋಗಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ವಿಶೇಷ ಯೋಜನೆ ಆರಂಭಿಸಿ ಉತ್ತಮ ಮನೆ ಜೊತೆ ಮೂಲಭೂತ ಸೌಕರ್ಯ ಒದಗಿಸಬೇಕು. ನೀರಲ್ಲಿ ಮುಳುಗಿದ ರೈತರ ಪಂಪ್‌ಸೆಟ್‌ಗೂ ಪರಿಹಾರ ಕೊಡಬೇಕು. ರೈತರ ಜಾನುವಾರುಗಳಿಗೆ 60 ದಿನಗಳ ಕಾಲ ಮೇವು ಪೂರೈಸಬೇಕು. ನೀರು ಇಳಿದ ಮೇಲೆ ಜನ ಮರಳಿ ತಮ್ಮ ಗ್ರಾಮಕ್ಕೆ ಹೋಗಿ ವಾಸಿಸುವಂತಹ ವಾತಾವರಣ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ನನ್ನ ಒಂದು ತಿಂಗಳ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದೇನೆ. ವೈಯಕ್ತಿಕವಾಗಿ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಸಂತ್ರಸ್ತರಿಗೆ ಎರಡು ಸಾವಿರ ಹೊದಿಕೆ ವಿತರಿಸಲು ವ್ಯವಸ್ಥೆ ಮಾಡಿದ್ದೇನೆ. ವಿಜಯಪುರದ ಬಿಎಲ್ಡಿಇ ಸಂಸ್ಥೆಯ ನಿರ್ದೇಶಕನೂ ಆಗಿರುವುದರಿಂದ ಅಲ್ಲಿನ ವೈದ್ಯರ ತಂಡ ರಚಿಸಿ ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ಸಂತ್ರಸ್ತರಿಗೆ ಉಚಿತ ಆರೋಗ್ಯ ಸೇವೆಗೆ ಕಳಿಸಿದ್ದೇನೆ ಎಂದು ತಿಳಿಸಿದರು.
ಮಾಜಿ ಸಚಿವ ಸಿ.ಎಸ್. ನಾಡಗೌಡ ಮಾತನಾಡಿ, ಜಿಲ್ಲಾಡಳಿತದ ಪ್ರಾಥಮಿಕ ವರದಿಗಳ ಪ್ರಕಾರ ತಾಲೂಕಿನಲ್ಲಿ ಪ್ರವಾಹದಿಂದಾಗಿ 3 ಸಾವಿರ ಹೆಕ್ಟೇರ್ ಬೆಳೆ ಹಾನಿ ಸೇರಿ ನೂರಾರು ಕೋಟಿ ಹಾನಿ ಸಂಭವಿಸಿದೆ. ರೈತರ ಸಜ್ಜೆ, ಜೋಳ, ತೊಗರಿ, ಕಬ್ಬು, ಸೂರ್ಯಕಾಂತಿ, ಮುಂತಾದವುಗಳು ಹಾನಿ ಆಗಿದ್ದು ಈ ಬಗ್ಗೆ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಪ್ರವಾಹ ಪರಿಸ್ಥಿತಿಯನ್ನು ತುರ್ತು ಆದ್ಯತೆ ಎಂದು ಪರಿಗಣಿಸಬೇಕು ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ಪುರಸಭೆ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ಎಪಿಎಂಸಿ ನಿರ್ದೇಶಕ ವೈ.ಎಚ್. ವಿಜಯಕರ, ರಾಯನಗೌಡ ತಾತರಡ್ಡಿ, ಗೋವಾ ಕನ್ನಡಿಗರ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ಮೇಟಿ, ನಾಗರಾಜ ತಂಗಡಗಿ,ಬಸವರಾಜ ಇಬ್ರಾಹಿಂಪುರ, ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.
ಪತ್ರಿಕಾಗೋಷ್ಠಿಗೂ ಮುನ್ನ ಎಂಎಲ್ಸಿ ಪಾಟೀಲ, ಮಾಜಿ ಸಚಿವ ನಾಡಗೌಡ ಅವರು ತಾಲೂಕಿನ ಕೃಷ್ಣಾ ನದಿ ದಂಡೆ ಪ್ರವಾಹ ಪೀಡಿತ ತಂಗಡಗಿ, ಕಮಲದಿನ್ನಿ, ಕುಂಚಗನೂರ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ, ಆಯಾ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರನ್ನು ಭೇಟಿ ನೆರವು ವಿತರಿಸಿದರು. ಸಂತ್ರಸ್ತರ ಅಳಲು ಆಲಿಸಿ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು.