ಮಂಡ್ಯ: ನೀರಿಲ್ಲದೆ ಒಣಗಿಹೋದ ಕಬ್ಬಿಗೆ ಕನಿಷ್ಠ ಎಕರೆಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ವಿವಿಧ ಸಂಘಟನೆಗಳ ಮುಖಂಡರು, ಜಿಲ್ಲೆಯಲ್ಲಿ ಬೆಳೆದ ನಿಂತ ಬೆಳೆಗೆ ಕಾವೇರಿ ಜಲಾಶಯಗಳಿಂದ ನೀರು ಹರಿಸಲು ಸಾಧ್ಯವಾಗದೆ ಒಣಗಿಹೋಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರ ಸಂಕಷ್ಟ ದೂರ ಮಾಡಲು ಎಕರೆಗೆ ಕನಿಷ್ಠ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಸುಮಾರು 70 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಕಬ್ಬನ್ನು ಅರೆಯಲು ತಕ್ಷಣವೇ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಜೊತೆಗೆ ಮಂಡ್ಯದ ಭಾವನಾತ್ಮಕ ಆಸ್ತಿಯಾದ ಪಿಎಸ್‌ಎಸ್‌ಕೆ ಹಾಗೂ ಮೈಷುಗರ್ ಕಾರ್ಖಾನೆಗಳನ್ನು ಉಳಿಸಿಕೊಂಡು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು. ಪಾಂಡವಪುರ ಸಕ್ಕರೆ ಕಾರ್ಖಾನೆ ಆರಂಭಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಈ ವ್ಯಾಪ್ತಿಯಲ್ಲಿ ಬೆಳೆದು ನಿಂತ ಕಬ್ಬನ್ನು ಬೇರೆಡೆಗೆ ಸಾಗಿಸಲು ಅವಕಾಶ ಕಲ್ಪಿಸಿಕೊಡಬೇಕು.
ಇಲ್ಲದಿದ್ದರೆ ರೈತರು ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಬಾಕಿ ಪಾವತಿಗೆ ಕ್ರಮ-ಸ್ವಾಗತ: ರೈತರು, ವಿವಿಧ ಸಂಘಟನೆಗಳ ಮುಖಂಡರ ಒತ್ತಾಯದ ಮೇರೆಗೆ ಜಿಲ್ಲಾಡಳಿತ ರೈತರ ಬಾಕಿ ಪಾವತಿಸಲು ಸಂಬಂ—ಸಿದ ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆದು ಚರ್ಚಿಸಿ ಶೀಘ್ರ ಬಾಕಿ ಪಾವತಿಗೆ ಸೂಚನೆ ನೀಡಿರುವುದನ್ನು ಸ್ವಾಗತಿಸಿದರು. ಮಳೆ ಬಾರದೆ, ನಾಲೆಗಳಲ್ಲೂ ನೀರು ಹರಿಸದೆ ಜಿಲ್ಲೆಯಲ್ಲಿ ಬೆಳೆದು ನಿಂತ ಬೆಳೆ ಒಣಗುತ್ತಿದೆ. ಈಗಾಗಲೇ ಸಾಲಬಾಧೆಯಿಂದಾಗಿ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಕಬ್ಬಿನ ಬಾಕಿ ಹಣವನ್ನು ಶೀಘ್ರವೇ ರೈತರಿಗೆ ಕೊಡಿಸಿಕೊಟ್ಟಲ್ಲಿ ರೈತರಿಗೆ ಅನುಕೂಲವಾಗುತ್ತದೆ.
ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಹಣ ಕೊಡಿಸುವಂತೆ ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡ ಡಾ. ರವೀಂದ್ರ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಂಭೂನಹಳ್ಳಿ ಸುರೇಶ್, ವಿವಿಧ ಸಂಘಟನೆಗಳ ಮುಖಂಡರಾದ ಎಂ.ಬಿ. ನಾಗಣ್ಣ, ಸಿದ್ದರಾಜುಗೌಡ, ನಿತ್ಯಾನಂದ, ಲತಾಶಂಕರ್, ಸಿ.ಟಿ. ಮಂಜುನಾಥ್, ಎಂ. ಚಂದ್ರಶೇಖರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.