ಸಿರುಗುಪ್ಪ: ರೈತರು ಉತ್ತಮ ಇಳುವರಿ ಪಡೆಯಬೇಕಾದರೆ ತಾವು ಬೆಳೆಯುವ ಬೆಳೆಗೆ ಭೂಮಿಯಿಂದ ಸಮೃದ್ಧ ಪೋಷಕಾಂಶಗಳು ಲಭ್ಯವಾದಾಗ ಮಾತ್ರ ಬೆಳೆ ಚೆನ್ನಾಗಿ ಬೆಳೆಯುವುದಲ್ಲದೇ ಉತ್ತಮ ಇಳುವರಿ ದೊರೆಯುತ್ತದೆ ಎಂದು ಕೃಷಿ ವಿಜ್ಞಾನಿ ಡಾ| ವಿಜಯಕುಮಾರ್ ತಿಳಿಸಿದರು.
ತಾಲೂಕಿನ 64-ಹಳೇಕೋಟೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ರಾಯಚೂರು ಕೃಷಿ ವಿವಿ ವತಿಯಿಂದ ಹಮ್ಮಿಕೋಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಮಾತನಾಡಿದ ಅವರು ರೈತರು ತಮ್ಮ ಬೆಳೆಗಳಿಗೆ ನೇರ ಪೋಷಕಾಂಶಗಳ ಜೊತೆಗೆ ಲಘು ಪೋಷಕಾಂಶಗಳು ಕೊಡಬೇಕು. ಪೋಷಕಾಂಶಗಳ ಕೊರತೆಯಿದ್ದರೆ ಇಳುವರಿ ಕಡಿಮೆಯಾಗುತ್ತದೆ ಎಂದರು.
ರೈತರು ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿಕೊಂಡರೆ ಲಭ್ಯವಿರುವ ಪೋಷಕಾಂಶಗಳ ವಿವರ ದೊರೆಯುತ್ತದೆ. ಮಣ್ಣಿನ ಫಲಿತಾಂಶದ ಆಧಾರದ ಮೇಲೆ ರೈತರು ತಾವು ಬೆಳೆಯುವ ಬೆಳೆಗೆ ಅಗತ್ಯವಿರುವ ಪೋಷಕಾಂಶಗಳ ಕೊರತೆಯನ್ನು ತಿಳಿದುಕೊಂಡು ಅವಶ್ಯವಿರುವಷ್ಟು ಮಾತ್ರ ಪೋಷಕಾಂಶಗಳನ್ನು ಜಮೀನಿಗೆ ನೀಡಿದರೆ ಹಣ ಉಳಿತಾಯವಾಗುತ್ತದೆ. ಸಸ್ಯಕ್ಕೆ ಬೇಕಾಗುವ ಪೋಷಕಾಂಶ ನೀಡಿದಂತಾಗುತ್ತದೆ ಎಂದು ತಿಳಿಸಿದರು. ಅತಿ ಹೆಚ್ಚು ನೀರನ್ನು ಬೆಳೆಗೆ ಹರಿಸುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ಕೊಚ್ಚಿ ಹೋಗುತ್ತವೆ. ಆದ್ದರಿಂದ ಬೆಳೆಗೆ ಬೇಕಾದಷ್ಟು ಪ್ರಮಾಣದ ನೀರು ಮಾತ್ರ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಪದ್ಧತಿಯಲ್ಲಿ ನೀಡಬೇಕು. ರೈತರೇ ಸ್ವತಃ ಬೀಜಗಳ ಮಾದರಿ ತಯಾರಿಸಿಕೊಳ್ಳುವುದರಿಂದ ಬೀಜದಲ್ಲಿ ಸ್ವಾವಲಂಬನೆ ಸಾಧಿಸಬಹುದು ಎಂದು ಮಾಹಿತಿ ನೀಡಿದರು.
ರಾಯಚೂರು ಕೃಷಿ ವಿವಿ ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ರೈತರಿಗೆ ಮಣ್ಣು, ಬೀಜ, ನೀರು ಕುರಿತು ಉಪಯುಕ್ತ ಮಾಹಿತಿ ನೀಡಿದರು. ಪ್ರಗತಿಪರ ರೈತ ಕೆ.ಶಾಂತನಗೌಡ ಇದ್ದರು.