Advertisement

ಇತರರಿಗೆ ಗೌರವ ಕೊಟ್ಟು ಗೌರವ ಸ್ವೀಕರಿಸೋಣ

11:40 PM Oct 11, 2022 | Team Udayavani |

ಮಾತೃದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎಂಬ ಸೂಕ್ತಿಯು ಈ ಜಗತ್ತಿನ ಎಲ್ಲ ಜನರಿಗೆ ಅನ್ವಯಿಸಬಹುದು. ಇವರು ನಮಗೆ ಕಣ್ಣಿಗೆ ಕಾಣುವ ದೇವರಾಗಿದ್ದಾರೆ. ನಮ್ಮನ್ನು ಹೆತ್ತು ಹೊತ್ತು ಸಲಹಿ ಸಾಕಿದ ತಾಯಿ-ತಂದೆ ನಮಗೆ ಮೊದಲು ದೇವರಾಗಿದ್ದಾರೆ. ಇವರಿಗೆ ಗೌರವ ಕೊಡುವುದು ನಮ್ಮ ಮೊದಲ ಕರ್ತವ್ಯವಾಗಿದೆ. ಮನೆಯೇ ಮೊದಲ ಪಾಠ ಶಾಲೆ, ಜನನಿಯೇ ಮೊದಲ ಗುರು, ಉತ್ತಮ ಸಂಸ್ಕಾರ, ಸಂಸ್ಕೃತಿ ಮನೆಯಲ್ಲಿ ತಾಯಿಯ ಮೂಲಕ ಆರಂಭ ವಾಗುತ್ತದೆ. ಮುಂಜಾನೆ ಎದ್ದು ನಮ್ಮನ್ನು ಹೊತ್ತು ಹೆತ್ತ ಮಾತೆಗೆ ಮೂರು ಪ್ರದಕ್ಷಿಣೆಗೈದು ನಮಸ್ಕರಿಸಿದರೆ ನಾವು ಭೂಮಂಡಲದಲ್ಲಿನ ಪುಣ್ಯಕ್ಷೇತ್ರಗಳಿಗೆ ತೀರ್ಥಯಾತ್ರೆ ಗೈದ ಪುಣ್ಯ ಲಭಿಸುತ್ತದೆ ಎಂದು ಬಲ್ಲವರು ಹೇಳುತ್ತಾರೆ. ಆದ್ದರಿಂದ ಹೆತ್ತವರಿಂದ ನಾವು ಗೌರವವನ್ನು ಆಶಿಸದೆ ನಾವೇ ಗೌರವವನ್ನು ಕೊಡಬೇಕಾದುದು ನಮ್ಮ ಆದ್ಯ ಕರ್ತವ್ಯ ವಾಗಿದೆ. ಹಿಂದಿನ ಕಾಲದಲ್ಲಿ ಗುರುಗಳ ಮನೆಯಲ್ಲಿದ್ದು ಗುರುಗಳ ಸೇವೆ ಮಾಡಿ ವಿದ್ಯೆ ಕಲಿತು ಪರಿಪೂರ್ಣ ವಿದ್ಯೆ ಕಲಿತ ಮೇಲೆಯೇ ಗುರುಗಳ ಆಶ್ರಮದಿಂದ ಬರಬೇಕಿತ್ತು. ಆದ್ದರಿಂದ ನಮ್ಮ ನಮ್ಮ ಗುರುಗಳಿಗೂ ಗೌರವ ಕೊಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಇವರೆಲ್ಲರಲ್ಲಿಯೂ ಪ್ರತಿಗೌರವವನ್ನು ಬಯಸಬಾರದು. ಅವರೇ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಗೌರವವನ್ನು ನಮಗೆ ಕೊಡುತ್ತಾರೆ.

Advertisement

ಇನ್ನು ಸಮಾಜದಲ್ಲಿರುವ ಎಲ್ಲರೂ ನಮ್ಮ ಅತಿಥಿಗಳು. ನಾವು ಸಮಾಜದಲ್ಲಿ ಬೆರೆಯುವಾಗ ಒಬ್ಬರಿಗೊಬ್ಬರು ಪರಸ್ಪರ ಮಾತು, ಸಂವಹನ, ಪರೋಪಕಾರ, ಪ್ರೀತಿ, ಪ್ರೇಮ, ತ್ಯಾಗ, ಸೇವೆ ಮೊದಲಾದ ಚಟುವಟಿಕೆಗಳನ್ನು ಮಾಡುತ್ತಿರುತ್ತೇವೆ. ಸಮಾಜದ ಅತಿಥಿಗಳಿಗೆ ಗೌರವವನ್ನು ಕೊಡಬೇಕಾದದ್ದು ನಮ್ಮ ಕರ್ತವ್ಯ. ನಾವು ಯಾರನ್ನೂ ಅವಗಣಿ ಸಬಾರದು, ಪ್ರತಿಯೊಬ್ಬರಿಗೂ ಅವರದೇ ಆದ ಸ್ಥಾನ ಮಾನ, ಅಂತಸ್ತು ಇರುತ್ತದೆ. ನಾವು ಯಾರನ್ನೂ ಕೀಳಾಗಿ ನೋಡಬಾರದು. ಸಣ್ಣ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ ನಾವು ಗೌರವವನ್ನು ಕೊಡಬೇಕು. ಅವರವರ ಅನುಭವದ ಮಾತು ನಮಗೆ ಒಂದಲ್ಲ ಒಂದು ದಿನ ನಮಗೆ ಉಪಕಾರವಾಗಬಹುದು. ನಾವು ಅವರಿಗೆ ಗೌರವ ಕೊಟ್ಟರೆ ಅವರು ನಮಗೆ ಗೌರವ ಕೊಡುತ್ತಾರೆ. ವ್ಯಕ್ತಿಗೆ ವ್ಯಕ್ತಿಯೇ ಗೌರವ ಕೊಡದಿದ್ದರೆ ಮತ್ತೆ ಯಾರಿಗೆ ಗೌರವ ನೀಡುವುದು. ನಮ್ಮ ಎದುರಿದ್ದವನೇ ಮೊದಲು ನನ್ನನ್ನು ಮಾತನಾಡಿಸಬೇಕು. ಗೌರವವನ್ನು ಕೊಡ ಬೇಕೆಂದು ಕಾಯದೇ ನಾವೇ ಮುಂದಾಗಿ ಗೌರವ ವನ್ನು ಕೊಡಬೇಕು.

ಭಾರತೀಯ ಸಂಸ್ಕೃತಿಯಂತೆ ಅವರವರ ಮತ ಧರ್ಮಕ್ಕೆ ಅನುಗುಣವಾಗಿ ಗೌರವವನ್ನು ಸೂಚಿಸಬಹುದು ನಾವು ದೇವ ಸ್ಥಾನದ ಒಳಗೆ ಇರುವಾಗ ದೇವರೇ ದೊಡ್ಡವರು ಅಲ್ಲಿ ವ್ಯಕ್ತಿಗೆ ನಮಸ್ಕರಿಸಬೇಕಾಗಿಲ್ಲ. ಊಟ ಮಾಡುತ್ತಿರುವಾಗ, ಆಪತ್ತಿನಲ್ಲಿರುವಾಗ ಅಂದರೆ ಮರದಲ್ಲಿ ಇರು ವಾಗ, ವಾಹನ ಚಲಿಸುವಾಗ ನಮ ಸ್ಕರಿ ಸಬೇಕಾಗಿಲ್ಲ. ನಮಗಿಂತ ಹಿರಿಯರು, ಯಾರೇ ಸಿಗಲಿ ಅವರಿಗೆ ಗೌರವ ಕೊಟ್ಟು ಅವರಿಂದ ಆಶೀರ್ವಾದ ಪಡೆಯುವುದು ಶ್ರೇಯಸ್ಕರ. ನಮ್ಮ ಮನೆಗೆ ಬಂದ ಅತಿಥಿಗಳನ್ನು ಯಾವ ರೀತಿ ಸತ್ಕರಿಸಬೇಕು. ಹೇಗೆ ಗೌರವಿಸಬೇಕೆಂದು ಬಸವಣ್ಣನವರು ತಮ್ಮ ವಚನದಲ್ಲಿ ಈ ರೀತಿ ಹೇಳುತ್ತಾರೆ.

ಏನ ಬಂದಿರಿ? ಹದುಳವಿದ್ದಿರೆ? ಎಂದರೆ ನಿಮ್ಮ ಮೈಸಿರಿ ಹಾರಿ ಹೋಗುವುದೇ? ಕುಳ್ಳಿರೆಂದರೆ ನೆಲ ಕುಳಿ ಹೋಹುದೇ? ಒಡನೆ ನುಡಿದರೆ ಶಿರಹೊಟ್ಟೆ ಯೊಡೆವುದೇ? ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿದ್ದರೆ, ಕೆಡ ಹಿ ಮೂಗ ಕೊಯ್ಯದೆ ಮಾಣ್ವನೇ ಕೂಡಲ ಸಂಗಮದೇವನು?

ನಮಗೆ ಕೊಡಲು ಏನು ಇಲ್ಲದಿದ್ದರೆ ತೊಂದರೆ ಇಲ್ಲ ಒಳ್ಳೆಯ ಮಾತುಗಳನ್ನು ಆಡಬೇಕು ಎನ್ನುತ್ತಾರೆ. ಒಂದು ಮಾತು ಅಂತೂ ನಿಜ ಈ ಪ್ರಪಂಚದಲ್ಲಿ ಯಾರು ದೊಡ್ಡವರಿಲ್ಲ ದೇವರು ಮಾತ್ರ ದೊಡ್ಡವರು. ಜನರಲ್ಲಿ ಅಧಿಕಾರಬಲ, ಧನಬಲ, ಜನಬಲದಿಂದ ಯಾರು ದೊಡ್ಡವರೆನಿಸುವುದಿಲ್ಲ. ಯಾರು ಯಾರಿಗೂ ಗೌರವವನ್ನು ಕೊಡಬಹುದು ಅವರಿಂದ ಪ್ರತಿ ಗೌರವವನ್ನು ಪಡೆಯಬಹುದು.

Advertisement

-ದೇವರಾಜ ರಾವ್‌ ಮಟ್ಟು, ಕಟಪಾಡಿ

Advertisement

Udayavani is now on Telegram. Click here to join our channel and stay updated with the latest news.

Next