ಜಗಳೂರು: ಮಹಿಳೆಯರನ್ನು ಗೌರವದಿಂದ ಕಾಣುವುದರ ಮೂಲಕ ಸ್ತ್ರೀಯರ ಸ್ಥಾನ ಮಾನಕ್ಕೆ ಮನ್ನಣೆ ನೀಡಬೇಕೆಂದು ಉಜ್ಜಯಿನಿ ಪೀಠದ ಶ್ರೀಮದ್ ಜಗದ್ಗುರು ಸಿದ್ಧಲಿಂಗರಾಜದೇಶಿ ಕೇಂದ್ರ ಶಿವಾಚಾರ್ಯರು ಕರೆ ನೀಡಿದರು. ತಾಲೂಕಿನ ಭರಮಸಮುದ್ರ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಶ್ರಾವಣ ಮಾಸದ ಪಂಚಾಮೃತ ಅಭಿಷೇಕದ ಪ್ರಯುಕ್ತ ಏರ್ಪಡಿಸಲಾಗಿದ್ದ ಉಜ್ಜಯಿನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಕುಂಬಾಭಿಷೇಕ ಸಮಾರಂಭದಲ್ಲಿ ಅವರು ಆಶೀರ್ವಾಚನ ನೀಡಿದರು. ಪ್ರತಿಯೊಬ್ಬ ಪುರುಷ ವ್ಯಕ್ತಿಯ ಹಿಂದೆ ಮಹಿಳೆ ಇರುತ್ತಾಳೆ. ತಾಯಿಯಂತಹ ತ್ಯಾಗಮಯಿಯೂ ಕೂಡಾ ಮಹಿಳೆ. ತಾಯಿಯ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬ ತಾಯಿಯೂ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಒಳ್ಳೆಯದನ್ನೇ ಬಯಸುವಂತವಳಾಗಿದ್ದಾಳೆ. ಜನನ ಮತ್ತು ಜನ್ಮಭೂಮಿ ಇವೆರಡು ಸ್ವರ್ಗಕ್ಕೆ ಸಮಾನ ಎಂದು ಶ್ಲೋಕ ಹೇಳುತ್ತದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಯಲ್ಲಿರುವ ಮಹಿಳೆಯರನ್ನು ನೋವಾಗದಂತೆ ನೋಡಿಕೊಂಡಲ್ಲಿ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು ಎಂದು ವಿಶ್ಲೇಷಿಸಿದರು. ಮುಸ್ಟೂರು ಓಂಕಾರ ಹಚ್ಚನಾಗಲಿಂಗ ಸ್ವಾಮಿ ಮಠದ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಬದಲಾದ ಕಾಲಘಟ್ಟದಲ್ಲಿ ಜನರಲ್ಲಿ ಧಾರ್ಮಿಕ ಭಾವನೆ ಕಡಿಮೆಯಾಗುತ್ತಿದೆ. ಹೀಗಾಗಿ ಯಾರಲ್ಲೂ ನೆಮ್ಮದಿ ಇಲ್ಲದಂತಾಗಿ ತೊಳಲಾಡುತ್ತಿದ್ದಾರೆ. ಶಾಂತಿ ನೆಮ್ಮದಿ ಇಲ್ಲದ ಬದುಕು ದುರ್ಬರ ಎಂದು ವಿಷಾದ ವ್ಯಕ್ತಪಡಿಸಿದರು. ಕಾನಾಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಹನುಮಂತಾಪುರ ಗ್ರಾಪಂ ಪ್ರಬಾರಿ ಅಧ್ಯಕ್ಷ ಚಿತ್ತಪ್ಪ, ಸದಸ್ಯರಾದ ವೀರಣ್ಣ, ಅನಸೂಯಮ್ಮ, ಎಪಿಎಂಸಿ ಅಧ್ಯಕ್ಷ ಯು.ಜಿ. ಶಿವಕುಮಾರ್, ತಾಪಂ ಸದಸ್ಯೆ ಶಿಲ್ಪಾ, ಮುಖಂಡರಾದ ವಕೀಲ ಮಂಜಣ್ಣ, ರೂಡಪ್ಳವೀರಣ್ಣ, ಮಲ್ಲಿಕಾರ್ಜುನ, ಮಂಜಣ್ಣ ಸೇರಿದಂತೆ ಭಕ್ತಾದಿಗಳು ಹಾಜರಿದ್ದರು. ಧರ್ಮ ಸಭೆಯ ಮುನ್ನ ನಡೆದ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಉಜ್ಜಯಿನಿ ಶ್ರೀಗಳಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭಗಳೊಂದಿಗೆ ಮೆರವಣಿಗೆ ನಡೆಸಲಾಯಿತು.