ಚನ್ನರಾಯಪಟ್ಟಣ: ತಾಲೂಕಿಗೆ ರಾಜ್ಯ ಸರ್ಕಾರದಿಂದ 6 ಸಾವಿರ ರ್ಯಾಪಿಡ್ ಆ್ಯಂಟಿಜೆನ್ ಕಿಟ್ ವಿತರಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ ಆಗ್ರಹಿಸಿದ್ದಾರೆ.
ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಈವರೆಗೆ ಸರ್ಕಾರ ಕೇವಲ 200 ರ್ಯಾಪಿಡ್ ಆ್ಯಂಟಿಜೆನ್ ಕಿಟ್ ನೀಡಿದೆ, ಇದರೊಂದಿಗೆ ಹೆಚ್ಚುವರಿಯಾಗಿ ಕಿಟ್ ನೀಡಿದರೆ, ಆರ್ಥಿಕ ಹೊರೆ ತಪ್ಪಿಸಲು ಅನುಕೂಲವಾಗಲಿದೆ. ತಾಲೂಕಿನಲ್ಲಿ ದಿನೇ ದಿನೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಿಟ್ ಅಗತ್ಯವಿದೆ ಎಂದರು. ಸರ್ಕಾರಿ ಅಧಿಕಾರಿಗಳಿಂದ ಕೋವಿಡ್ ನಿಯಂತ್ರಣ ಸಾಧ್ಯವಿಲ್ಲ. ಅಧಿಕಾರಿಗಳ ಜೊತೆಯಲ್ಲಿ ಜನಪ್ರತಿನಿಧಿಗಳ ಬಳಕೆ ಮಾಡಿಕೊಳ್ಳಲು ಸರ್ಕಾರ ಮುಂದಾಗಬೇಕು, ರಸ್ತೆಯಲ್ಲಿ ಸಂಚಾರ ಮಾಡುವ ವ್ಯಕ್ತಿ ಮಾಸ್ಕ್ ಧರಿಸದಿದ್ದರೆ ಅವರಿಗೆ ಕಡ್ಡಾಯವಾಗಿ ದಂಡ ವಿಧಿಸಬೇಕು ಎಂದು ತಿಳಿಸಿದರು.
ಮಾನವರಲ್ಲಿ ರೋಗ ನಿರೋಧ ಶಕ್ತಿ ಹೆಚ್ಚಿಸುವ ಆಯುಷ್ ಔಷಧಿಯನ್ನು ರಾಜ್ಯದ ಪ್ರತಿ ಮನೆಗೆ ಉಚಿತವಾಗಿ ವಿತರಣೆ ಮಾಡುವ ಮೂಲಕ ಮುಂದಿನ ತಲೆಮಾರಿಗೆ ಆಯುಷ್ ಚಿಕಿತ್ಸೆ ಬಗ್ಗೆ ಮನವರಿಗೆ ಮಾಡಬೇಕಾಗಿದೆ ಎಂದು ಹೇಳಿದರು.
ಆಯುಷ್ ಔಷಧಿಯನ್ನು ಸರ್ಕಾರಿ ಇಲಾಖೆಗಳಾದ ನ್ಯಾಯಾಬೆಲೆ ಅಂಗಡಿ, ಸರ್ಕಾರಿ ಸ್ವಾಮ್ಯದ ಹಾಲು ಉತ್ಪಾದಕರ ಸಹಕಾರ ಸಂಘ, ಕೃಷಿ ಪತ್ತಿನ ಸಹಕಾರ ಸಂಘ, ಅಂಗನವಾಡಿಗಳ ಮೂಲಕ ರಾಜ್ಯದ ಪ್ರತಿ ಕುಟುಂಬದ ಎಲ್ಲಾ ಸದಸ್ಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಲು ಆಯುಷ್ ಔಷಧಿ ನೀಡಲಿ ಎಂದರು.
ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಆ್ಯಂಬುಲೆನ್ಸ್ ಕೊರತೆ ಉಂಟಾಗಲಿದೆ. ಹಾಗಾಗಿ ಖಾಸಗಿ ಶಾಲಾ ಕಾಲೇಜುಗಳ ವಾಹನವನ್ನು ಜಿಲ್ಲಾಡಳಿತ ಪಡೆದು ಅವುಗಳ ಮೂಲಕ ರೋಗಿಗಳನ್ನು ಆಸ್ಪತ್ರೆಗೆ ಕರೆ ತರುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು. ತಹಶೀಲ್ದಾರ್ ಜೆ.ಬಿ.ಮಾರುತಿ, ತಾಪಂ ಇಒ ಚಂದ್ರಶೇಖರ್ ಇದ್ದರು.