Advertisement

ಆ್ಯಪ್‌ ಮೂಲಕವೇ ಪ್ರಗತಿ ವಿವರ ನೀಡಿ

09:04 AM Jul 29, 2019 | Suhan S |

ಹಾವೇರಿ: ಪ್ರತಿ ತಿಂಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಶೇಷ ಯೋಜನೆಯಡಿ ಸಾಧಿಸಿರುವ ಪ್ರಗತಿಯ ಆರ್ಥಿಕ ಮತ್ತು ಭೌತಿಕ ಸಾಧನೆ ವಿವರವನ್ನು ಆ್ಯಪ್‌ ಮೂಲಕವೇ ಮಾಹಿತಿ ನೀಡಬೇಕು ಎಂದು ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ 2013ರನ್ವಯ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಸಕ್ತ ಸಾಲಿನ ಜೂನ್‌ ತಿಂಗಳಿನ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆಗಳ ಜಿಲ್ಲೆಯಲ್ಲಿ ಸಾಧಿಸಿದ ಪ್ರಗತಿ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಯ ಗೂಗಲ್ಶೀಟನಲ್ಲಿ ಅಪ್‌ಲೋಡ್‌ ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು ಎಂದರು.

ಇಲಾಖಾವಾರು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪಯೋಜನೆಗಳಡಿ ಬಿಡುಗಡೆಯಾದ ಅನುದಾನ, ಅನುಷ್ಠಾನಗೊಂಡಿರುವ ಕಾಮಗಾರಿವಾರು ವಿವರ, ಫಲಾನುಭವಿವಾರು ಮಾಹಿತಿ ಸಲ್ಲಿಸಬೇಕು. ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗಬಾರದು ಎಂದು ಸೂಚಿಸಿದರು.

ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ತುಂಗಾ ಮೇಲ್ದಂಡೆ ಯೋಜನೆ, ಪಂಚಾಯತರಾಜ್‌ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಕೈಗೊಳ್ಳುವ ರಸ್ತೆ, ಕಟ್ಟಡ ಕಾಮಗಾರಿಗಳ ಪ್ರಗತಿ ಮಾಹಿತಿ ಸಂದರ್ಭದಲ್ಲಿ ಕಾಮಗಾರಿ ಕೈಗೊಂಡ ಸ್ಥಳದ ಮಾಹಿತಿ, ಭೌತಿಕ ಮತ್ತು ಆರ್ಥಿಕ ವಿವರವನ್ನು ಸಲ್ಲಿಸಬೇಕು. ಕಾಮಗಾರಿಯ ಗುಣಮಟ್ಟ ಹಾಗೂ ಅನುಷ್ಠಾನಗೊಂಡಿರುವ ಸ್ಥಳ ಪರಿಶೀಲನೆ ನಡೆಸುವಂತೆ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಯೋಜನೆಯ ಅನುಷ್ಠಾನ ಕುರಿತ ಪರಿಶೀಲನೆಗೆ ಪ್ರತ್ಯೇಕ ಸಭೆ ನಿಗದಿಪಡಿಸಲು ಸೂಚಿಸಿದರು.

1704 ಕೃಷಿ ಹೊಂಡ: ಕೃಷಿ ಭಾಗ್ಯ ಯೋಜನೆಯಡಿ ಕಳೆದ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ 1704 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ತುಂಗಾ ಮೇಲ್ದಂಡೆ ಯೋಜನೆಯಡಿ ವಿಶೇಷ ಘಟಕ ಯೋಜನೆಯಡಿ ಕಳೆದ ಸಾಲಿನಲ್ಲಿ 12 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಮೂರು ಕಾಮಗಾರಿಗಳು ಮುಕ್ತಾಗೊಂಡಿವೆ. 353.43 ಲಕ್ಷ ರೂ. ಆರ್ಥಿಕ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.

ಜೂನ್‌ ತಿಂಗಳಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಸಣ್ಣ ನೀರಾವರಿ ಇಲಾಖೆಯಲ್ಲಿ ಶೇ.100ರಷ್ಟು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಶೇ. 87ರಷ್ಟು, ಕೃಷಿ ಇಲಾಖೆ ಶೇ. 60 ರಷ್ಟು ಸಾಧನೆ ಮಾಡಿರುವುದಾಗಿ ಅಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಕೆ.ವಾಸಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ಎಸ್‌. ಶೆಟ್ಟೆಪ್ಪನವರ ಒಳಗೊಂಡಂತೆ ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next