ರಬಕವಿ ಬನಹಟ್ಟಿ: ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಾಲೇಜಿನಲ್ಲಿ ನಿರಂತರವಾಗಿ ನಡೆಸುವುದರ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆಡಳಿತ ಮಂಡಳಿಯ ಸದಸ್ಯರು ಮತ್ತು ಉಪನ್ಯಾಸಕರು ಗಮನ ನೀಡಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಮಂಗಳವಾರ ಇಲ್ಲಿನ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಅಣುಕು ವಿಧಾನ ಸಭೆಯ ಕಾರ್ಯಕಲಾಪಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಕೂಡಾ ಮುಖ್ಯವಾಗಿದೆ. ದೇಶ ಮತ್ತು ವಿದೇಶಗಳ ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಗಮನ ನೀಡಬೇಕು. ಅಣುಕು ವಿಧಾನ ಸಭೆಯ ಕಾರ್ಯಾಕಲಾಪಗಳನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ತಿಳಿಸುತ್ತಿರುವುದು ಸ್ತುತ್ಯವಾದ ಸಂಗತಿಯಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅಣುಕು ವಿಧಾನ ಸಭೆಯಲ್ಲಿ ರಾಜ್ಯ ಪಾಲರ ಭಾಷಣದ ನಂತರ ನಡೆದ ಕಾರ್ಯಕಲಾಪದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳು ಸಮರ್ಪಕವಾದ ಬಸ್ ಸೌಲಭ್ಯ, ಕಿತ್ತೂರ ಕರ್ನಾಟಕದ ಅಭಿವೃದ್ಧಿಯ ನಿಟ್ಟಿನಲ್ಲಿ ಸರ್ಕಾರ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು, ಕೆರೆ ತುಂಬಿಸುವ ಕಾರ್ಯ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆಯ ಕುರಿತು ಮತ್ತು ಮುಂಗಡ ಪತ್ರದ ಕುರಿತು ಚರ್ಚೆ ಗಮನ ಸೆಳೆಯಿತು.
ರಾಜ್ಯ ಶಾಸ್ತ್ರದ ಉಪನ್ಯಾಸಕ ಮನೋಹರ ಶಿರಹಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಅಣುಕು ವಿಧಾನ ಸಭೆಯ ಮೂಲಕ ನಾಡಿನ ಸಮಸ್ಯೆಗಳ ನಡೆಸಿದ ಚರ್ಚೆ ನಿಜಕ್ಕೂ ಮೆಚ್ಚುವಂತಹದು ಎಂದು ತಿಳಿಸಿದರು. ಪ್ರಾಚಾರ್ಯ ಜಿ.ಆರ್. ಜುನ್ನಾಯ್ಕರ್ ಮಾತನಾಡಿದರು.
ಜೆಎಸ್‌ಎಸ್ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ವಿ.ಆರ್.ಕುಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಂಘದಅಧ್ಯಕ್ಷ ಬಸವರಾಜ ಭದ್ರನವರ, ಶಂಕರ ಜಾಲಿಗಿಡದ, ಶ್ರೀಶೈಲ ಯಾದವಾಡ, ಓಂಪ್ರಕಾಶ ಕಾಬರಾ, ದುಂಡಪ್ಪ ಮಾಚಕನೂರ, ಮಂಜುನಾಥ ಬೆನ್ನೂರ, ವೈ.ಬಿ.ಕೊರಡೂರ, ಪ್ರಕಾಶ ಕೆಂಗನಾಳ, ಸುನಂದಾ ಭಜಂತ್ರಿ, ರೇಶ್ಮಾ ಗಜಾಕೋಶ, ಸುರೇಶ ನಡೋಣಿ, ಗೀತಾ ಸಜ್ಜನ ಇದ್ದರು.