ಬಳ್ಳಾರಿ: ನೋಂದಾಯಿತ ಕಟ್ಟಡ ಕಾರ್ಮಿಕರು ವೃತ್ತಿ ಕೌಶಲ್ಯ ಕುರಿತು ಅತ್ಯಂತ ಸಮರ್ಪಕವಾಗಿ ತರಬೇತಿ
ಪಡೆದುಕೊಂಡು ಅದನ್ನು ತಮ್ಮ ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು. ವೃತ್ತಿಯಲ್ಲಿ ನಿರತರಾಗಿದ್ದಾಗ ಜೀವ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ.ಎನ್.ಐಲಿ ಹೇಳಿದರು.
ನಗರದ ನಿರ್ಮಿತಿ ಕೇಂದ್ರದ ಕಚೇರಿ ಆವರಣದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಮತ್ತು ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ನಡೆದ ಶ್ರಮ ಸಾಮರ್ಥ್ಯ ಯೋಜನೆ ಅಡಿ ಟ್ರೈನಿಂಗ್ ಕಂ ಟೂಲ್ ಕಿಟ್’ ಕಾರ್ಯಕ್ರಮ ಮತ್ತು ಎಲೆಕ್ಟ್ರಿಕಲ್ ವೃತ್ತಿ ಕೌಶಲ್ಯ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರು ಹಾಗೂ ನೋಂದಾಯಿತ ಕಾರ್ಮಿಕರಿಗಾಗಿ ಸರ್ಕಾರದಿಂದ ವಿವಿಧ ಸೌಲಭ್ಯಗಳಿದ್ದು, ಅವುಗಳ ಬಗ್ಗೆ ತಿಳಿದುಕೊಂಡು ಸೌಲಭ್ಯ ಪಡೆಯಲು ಮುಂದಾಗಬೇಕು. ಎಲೆಕ್ಟ್ರಲ್ ತರಬೇತಿ ಪಡೆದ ನೋಂದಾಯಿತ ಕಾರ್ಮಿಕರು ತಾವು ಕೆಲಸ ಮಾಡುವ ಸಂದರ್ಭದಲ್ಲಿ ಜೀವ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಕೋರಿದರು. ಕಾರ್ಮಿಕ ನಿರೀಕ್ಷಕ ರವಿದಾಸ್ ಅವರು ಕಾರ್ಮಿಕ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿದರು.
ನಿರ್ಮಿತಿ ಕೇಂದ್ರದ ಅಧಿಕಾರಿ ಡಿ.ವಿ.ಮಂಜುಳಾ ಮಾತನಾಡಿದರು. ಜಿಲ್ಲಾ ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜ ನಿರೂಪಿಸಿ ವಂದಿಸಿದರು. ಮಿತಿಲಾ ರೆಡ್ಡಿ, ನಡ್ಲಿಕೇರಿ ನಾಗರಾಜ, ಶ್ರೀಧರ್, ಯಶವಂತ್ ಸೇರಿದಂತೆ ನೋಂದಾಯಿತ ಕಟ್ಟಡ ಕಾರ್ಮಿಕರು ಇದ್ದರು. ಈ ಸಂದರ್ಭದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಪರಿಕರಗಳನ್ನು ವಿತರಿಸಲಾಯಿತು.