ಸಾಮಾನ್ಯವಾಗಿ ಕನ್ನಡದ ಕೆಲವು ನಿರ್ದೇಶಕರು, ನಿರ್ಮಾಪಕರು ತಮ್ಮ ಚಿತ್ರಕ್ಕೆ ಆ ಭಾಷೆಯ ಹೀರೋಯಿನ್ ಬರ್ತಾರೆ, ಈ ಭಾಷೆಯ ಹೀರೋಯಿನ್ ಬರ್ತಾರೆ ಅಂಥ, ಸಿನಿಮಾ ಸೆಟ್ಟೇರುವ ಮೊದಲೇ ಒಂದಷ್ಟು ಸುದ್ದಿ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳುವುದನ್ನ ನೀವು ಆಗಾಗ್ಗೆ ನೋಡಿರುತ್ತೀರಿ. ಕೊನೆಗೆ ನೋಡಿದ್ರೆ ಅಂಥ ಚಿತ್ರಗಳಿಗೆ ಪರಭಾಷಾ ನಾಯಕಿಯರು ಬರೋದಿರಲಿ, ಎಷ್ಟೋ ಚಿತ್ರಗಳು ಸೆಟ್ಟೇರುವುದರ ಬಗ್ಗೆಯೇ ಖಾತ್ರಿ ಇರುವುದಿಲ್ಲ.
ಇಂಥ ಸಂಗತಿಗಳು ಚಿತ್ರರಂಗದಲ್ಲಿ ಕಾಮನ್. ಆದರೆ ಇದೇ ವಿಷಯ ಅದೆಷ್ಟೋ ಬಾರಿ ನಟ ಯಶ್ ಅವರ ಕೋಪಕ್ಕೂ ಕಾರಣವಾಗಿವೆಯಂತೆ. ಹೌದು, ಈ ಬಗ್ಗೆ ಮಾತನಾಡುವ ಯಶ್, “ಕನ್ನಡದದಲ್ಲಿ ಎಷ್ಟೋ ನಟರ ಸಿನಿಮಾಗಳು ಅನೌನ್ಸ್ ಆದಾಗ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ, ಚಿತ್ರಕ್ಕೆ ಆ ಭಾಷೆಯ ಹೀರೋಯಿನ್ ಬರ್ತಾರೆ, ಈ ಹೀರೋಯಿನ್ ಬರ್ತಾರೆ ಅಂತ ಹೇಳ್ಳೋದನ್ನ ನೋಡಿದ್ದೀನಿ. ಒಂದು ವಾರ ಇದೇ ಸುದ್ದಿ ಆದ್ರೂ, ಅವರು ಬರಲ್ಲ, ಅದು ಆಗಲ್ಲ ಅನ್ನುವಂತಿರುತ್ತದೆ. ಇದನ್ನ ನೋಡಿದಾಗ ಕೆಟ್ಟ ಕೋಪ ಬರ್ತಿತ್ತು’ ಎಂದಿದ್ದಾರೆ.
“ಸಾಮಾನ್ಯವಾಗಿ ಹೊರಗಿನ ಹೀರೋಯಿನ್ಸ್‌ಗೆ ಇಲ್ಲಿ ಡಿಮ್ಯಾಂಡ್ ಜಾಸ್ತಿ. ಅಲ್ಲಿಯವರು ಇಲ್ಲಿ ಬರೋದಕ್ಕಿಂತ, ಇಲ್ಲಿಯ ಪ್ರತಿಭೆಗಳು ಅಲ್ಲಿಗೆ ಹೋಗ್ಬೇಕು. ಅಲ್ಲಿರುವವರು ಸ್ವಲ್ಪ ಖಾಲಿ ಕೂರಬೇಕು. ನಮ್ ಇಂಡಸ್ಟ್ರಿ ಅಂದ ಮೇಲೆ ಅವರು ಕೂಡ ಗೌರವದಿಂದ ಬರಬೇಕು ಎಂಬ ಆಸೆ ಇತ್ತು. ಆದ್ರೆ, ಈಗ ಆ ಟ್ರೆಂಡ್ ಸ್ವಲ್ಪ ಬದಲಾಗ್ತಿದೆ’ ಎನ್ನುವುದು ಯಶ್ ಮಾತು. ಇನ್ನು ಇದೇ ವೇಳೆ ಕನ್ನಡದ ನಟಿಯರು ಬೇರೆ ಭಾಷೆಗಳಲ್ಲಿ ನಿಧಾನವಾಗಿ ಮಿಂಚುತ್ತಿರುವುದರ ಬಗ್ಗೆಯೂ ಮಾತನಾಡಿರುವ ಯಶ್, “ಕನ್ನಡದ ಕಲಾವಿದರು ಬೇರೆ ಭಾಷೆಯಲ್ಲಿ ಕೆಲಸ ಮಾಡಿದ್ರೂ ತಪ್ಪಿಲ್ಲ.
ಆದರೆ, ಅವರು ಮೊದಲ ಕನ್ನಡಕ್ಕೆ ಆದ್ಯತೆ ಗೌರವ ಕೊಡಬೇಕು’ ಎಂದು ಹೇಳುವ ಮೂಲಕ ಪರಭಾಷೆಗಳಲ್ಲಿ ಮಿಂಚುತ್ತಿರುವ ಕೆಲವು ನಾಯಕಿಯರಿಗೆ ಕಿವಿಮಾತು ಕೂಡ ಹೇಳಿದ್ದಾರೆ. ಅಂದಹಾಗೆ, ಯಶ್ ತಮ್ಮ ಮನದಾಳದ ಮಾತುಗಳನ್ನು ಮುಕ್ತವಾಗಿ ಹೇಳಿಕೊಳ್ಳಲು ವೇದಿಕೆಯಾಗಿದ್ದು, ಎ.ಪಿ ಅರ್ಜುನ್ ನಿರ್ದೇಶನದ “ಕಿಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭ. ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯಶ್, ಚಿತ್ರತಂಡಕ್ಕೆ ಶುಭ ಕೋರಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.