Advertisement

ಮೇವು ದಾಸ್ತಾನಿಗೆ ನೀಡಿ ಮೊದಲ ಆದ್ಯತೆ

01:13 PM Jul 12, 2019 | Team Udayavani |

ಕುಂದಗೋಳ: ಈಗತಾನೇ ಮಳೆ ಆರಂಭವಾಗಿದ್ದು, ಸುಮಾರು ಎರಡು ತಿಂಗಳು ಕಾಲ ಮೇವಿನ ಅವಶ್ಯಕತೆ ಇರಲಿದೆ. ರೈತರ ಜಾನುವಾರುಗಳಿಗೆ ಅಗತ್ಯ ಮೇವು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸದಸ್ಯ ಭರಮಪ್ಪ ಮುಗಳಿ ಪಶು ವೈದ್ಯಾಧಿಕಾರಿ ತಿರ್ಲಾಪುರ ಅವರಿಗೆ ಸೂಚನೆ ನೀಡಿದರು.

Advertisement

ಪಟ್ಟಣದ ತಾಪಂ ಸಭಾಭವನದಲ್ಲಿ ಗುರುವಾರ ಜರುಗಿದ ಕೆಡಿಪಿ ಸಭೆಯಲ್ಲಿ ತಿರ್ಲಾಪುರ ಅವರು ವರದಿ ಮಂಡಿಸುವಾಗ ಜಿಪಂ ಸದಸ್ಯ ಭರಮಪ್ಪ ಮುಗಳಿ ಮಧ್ಯ ಪ್ರವೇಶಿಸಿ ಮೇವು ಸಂಗ್ರಹ ಮಾಹಿತಿ ಕೇಳಿದರು. ರೈತರ ಬೇಡಿಕೆ ಮೇರೆಗೆ ಮೇವು ಸಂಗ್ರಹಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡಿದಾಗ ಸಿಡಿಮಿಡಿಗೊಂಡ ಸದಸ್ಯ ಮುಗಳಿ, ಮೇವು ಕೇಂದ್ರದಲ್ಲಿ ಸದಾ ಮೇವು ಇದ್ದರೆ ರೈತರು ತಮಗೆ ಬೇಕಾದಾಗ ಒಯ್ಯುತ್ತಾರೆ ಎಂದು ತಾಕೀತು ಮಾಡಿದರು.

ಬೀಜಗಳ ಮಾಹಿತಿ ನೀಡಿದ್ದೀರಾ?: ಕೃಷಿ ಸಹಾಯಕ ಪ್ರಭಾರಿ ಅಧಿಕಾರಿ ಎಸ್‌.ಎಫ್‌. ರಾಯನಗೌಡ್ರ ಮಾತನಾಡುತ್ತಿರುವ ಮಧ್ಯ ಜಿಪಂ ಸದಸ್ಯ ಉಮೇಶ ಹೆಬಸೂರ ಮಾತನಾಡಿ, ಬಿತ್ತನೆ ಹಂಗಾಮಿನ ಈ ವೇಳೆ ಬೀಜಗಳ ಕುರಿತು ಮಾಹಿತಿ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಮಾಹಿತಿ ನೀಡಿದ್ದೇವೆ ಎಂದು ಅಧಿಕಾರಿ ಹಾರಿಕೆ ಉತ್ತರ ನೀಡಿದಾಗ, ಈಗ ಯಾವ ಬಿಟಿ ಬೀಜ ಊರಬೇಕು, ಅದಕ್ಕೆ ಯಾವ ಔಷಧಿ ಮತ್ತು ಗೊಬ್ಬರ ನೀಡಬೇಕು ಎಂಬುದರ ಬಗ್ಗೆ ತಿಳಿವಳಿಕೆ ನೀಡಿಲ್ಲ. ಕಳೆದ ವರ್ಷ ಗುಡಗೇರಿಯಲ್ಲಿ ಅನೇಕ ರೈತರು ಬಿಟಿ ಬೀಜ ಊರಿ ಕೈಸುಟ್ಟುಕೊಂಡಿದ್ದಾರೆ. ಕಂಪನಿಯವರು ತಮ್ಮ ಲಾಭಕ್ಕಾಗಿ ರೈತರಿಗೆ ಮೋಸಗೊಳಿಸುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಮಾಹಿತಿ ನೀಡಲೇಬೇಕು ಎಂದು ಎಚ್ಚರಿಕೆ ನೀಡಿದರು.

ಅರಣ್ಯ ಸಹಾಯಕ ಅಧಿಕಾರಿ ಬಸವರಾಜ ಬೆನಕಟ್ಟಿ ವರದಿ ಮಂಡಿಸುತ್ತಿರುವಾಗ ಭರಮಪ್ಪ ಮುಗಳಿ ಮಾತನಾಡಿ, ಒಂದು ಸಸಿ ಬೆಳೆಸಲು ಎಷ್ಟು ಖರ್ಚು ಆಗುತ್ತದೆ ಎಂದು ಪ್ರಶ್ನಿಸಿದರು. ಎನ್‌ಆರ್‌ಜಿಯಡಿ 300, ಸಾಗಾಣಿಕೆಗೆ 150, ನೀರು ಹಾಕಿ ಬೆಳೆಸಲು 50 ರೂ. ಸೇರಿ ಒಟ್ಟು 500 ರೂ. ಖರ್ಚಾಗುತ್ತದೆ ಎಂದು ಉತ್ತರಿಸಿದರು. ಮೂರು ವರ್ಷದಲ್ಲಿ ಎಷ್ಟು ಸಸಿ ಬೆಳೆಸಿದ್ದೀರಿ ಎಂದು ಪ್ರಶ್ನಿಸಿದಾಗ ಬೆನಕಟ್ಟಿ ಮಾತನಾಡಿ, ಹಿಂದಿನದು ನನಗೆ ಗೊತ್ತಿಲ್ಲ. ನನ್ನ ಅವಧಿಯಲ್ಲಿ ಸರಿಯಾಗಿ ಬೆಳೆಸುತ್ತೇನೆ ಎಂದರು.

ಸಿಡಿಪಿಒ ಅನುಪಮಾ ಅಂಗಡಿ ಮಾತನಾಡಿ, ತಾಲೂಕಿನ 212 ಅಂಗನವಾಡಿ ಕೇಂದ್ರಗಳಲ್ಲಿ 76 ಬಾಡಿಗೆ ಕಟ್ಟಡದಲ್ಲಿವೆ. ಇದರಿಂದ ಮೂಲಸೌಲಭ್ಯ ಒದಗಿಸಲು ತೊಂದರೆಯಾಗುತ್ತಿದ್ದು, ನಿವೇಶನ ನೀಡಬೇಕು ಎಂದು ಮನವಿ ಮಾಡಿದರು.

Advertisement

ಭೂಸೇನಾ ನಿಗಮದ ಸಹಾಯಕ ಅಧಿಕಾರಿ ವರದಿ ಮಂಡಿಸುವಾಗ ಉಮೇಶ ಹೆಬಸೂರ ಮಾತನಾಡಿ, ಪೌರಾಡಳಿತ ಸಚಿವರಾಗಿದ್ದ ಶಿವಳ್ಳಿ ಅವರು ಚಾಲನೆ ನೀಡಿದ ಕಾಮಗಾರಿಗಳಿಗೆ ಯಾಕೆ ಅಡೆತಡೆಯಾಗುತ್ತಿದೆ ಎಂದಾಗ ತ್ವರಿತವಾಗಿ ಮುಗಿಸುತ್ತೇನೆ ಎಂದು ಹಾರಿಕೆ ಉತ್ತರ ನೀಡಿದರು. ಶಾಸಕಿ ಕುಸುಮಾವತಿ ಶಿವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಉಮೇಶ ಹೆಬಸೂರ, ಎನ್‌.ಎನ್‌. ಪಾಟೀಲ, ಭರಮಪ್ಪ ಮುಗಳಿ, ಇಒ ಎಂ.ಎಸ್‌. ಮೇಟಿ ಮೊದಲಾದವರು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next