Advertisement

ಹೊಸದಾಗಿ ಬೆಳೆಸಾಲ ನೀಡಿ: ಸಿಎಂ

12:18 PM May 26, 2017 | |

ಬೆಂಗಳೂರು: ಬರದಿಂದ ತತ್ತರಿಸಿರುವ ರೈತರಿಗೆ ಹೊಸದಾಗಿ ಬೆಳೆ ಸಾಲ ನೀಡುವ ಬಗ್ಗೆ ಹೆಚ್ಚು ಒತ್ತು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯಾಂಕ್‌ಗಳಿಗೆ ಮನವಿ ಮಾಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ನಡೆದ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಕಾರ್ಯಕ್ರಮದಲ್ಲಿ 2017-18ನೇ ಸಾಲಿನ ವಾರ್ಷಿಕ ಸಾಲ ಯೋಜನೆ ಬಿಡುಗಡೆಗೊಳಿಸಿ ಮಾತನಾಡಿದರು.

Advertisement

ರಾಜ್ಯದ ಬಹುಪಾಲು ಪ್ರದೇಶ ಬರಕ್ಕೆ ತುತ್ತಾಗಿದೆ. ಬರಪೀಡಿತ  160 ತಾಲೂಕುಗಳ ವಿವರವನ್ನು ಬ್ಯಾಂಕ್‌ಗಳಿಗೆ ಸಲ್ಲಿಸಲಾಗಿದೆ. ಬ್ಯಾಂಕುಗಳು ಪರಿಷ್ಕೃತ ಮಾರ್ಗಸೂಚಿಯನ್ವಯ ಹೊಸದಾಗಿ ಸಾಲ ವಿತರಣೆಗೆ ಆದ್ಯತೆ ನೀಡಿ ತಕ್ಷಣದ ಪರಿಹಾರ ಕ್ರಮಗಳನ್ನು ವಿಸ್ತರಿಸುವ ಮೂಲಕ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ನೆರವಿಗೆ ಮುಂದಾಗಬೇಕು ಎಂದು ತಿಳಿಸಿದರು.

ಕೃಷಿಗೆ ಉತ್ತೇಜನ ನೀಡುವ ಜತೆಗೆ ಮಳೆಯಾಶ್ರಿತ ಪ್ರದೇಶದ ರೈತರ ಸ್ಥಿತಿಗತಿ ಸುಧಾರಿಸುವ ಸಲುವಾಗಿ “ಕೃಷಿ ಭಾಗ್ಯ’ ಹಾಗೂ “ಪಶುಭಾಗ್ಯ’ ಯೋಜನೆ ಸರ್ಕಾರ ಜಾರಿಗೊಳಿಸಿದೆ. ಸಬ್ಸಿಡಿ ಸೌಲಭ್ಯವಿರುವ ಸ್ವ ಉದ್ಯೋಗದ ನಾನಾ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಕ್ಷೇತ್ರದಲ್ಲಿ ಸಾಲ ಸೌಲಭ್ಯ ಒದಗಿಸುವತ್ತ ಬ್ಯಾಂಕ್‌ಗಳು ಗಮನ ಹರಿಸಬೇಕು ಎಂದರು.

“ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳು ರಾಜ್ಯದಲ್ಲಿ 1,60,020 ಕೋಟಿ ರೂ. ಸಾಲ ನೀಡುವ ಗುರಿ ಹೊಂದಿರುವುದು ಸ್ವಾಗತಾರ್ಹ. ಅದರಲ್ಲೂ ಕೃಷಿ ಕ್ಷೇತ್ರಕ್ಕೆ 86,690 ಕೋಟಿ ರೂ. (ಶೇ.54.17) ಸಾಲ ಒದಗಿಸಲು ವ್ಯವಸ್ಥೆ ಮಾಡಿಕೊಂಡಿರುವುದು ಸಂತಸ ತಂದಿದೆ. ಕೃಷಿ ಕ್ಷೇತ್ರಕ್ಕೆ ಕಾಯ್ದಿರಿಸಿರುವ ಸಾಲ ಪ್ರಮಾಣದಲ್ಲಿ ಶೇ.67.55 (58,563 ಕೋಟಿ ರೂ.) ಬೆಳೆ ಉತ್ಪಾದನಾ ಸಾಲ ರೂಪದಲ್ಲಿ ನೀಡಲು ಗುರಿ ಹೊಂದಿರುವುದು ಉತ್ತಮವಾಗಿದೆ.

ಹಾಗೆಯೇ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಕ್ಷೇತ್ರಕ್ಕೆ 34,703 ಕೋಟಿ ರೂ. (ಶೇ.21.68), ವಸತಿ ಕ್ಷೇತ್ರಕ್ಕೆ 16,977 ಕೋಟಿ ರೂ. (ಶೇ.10.6) ಹಾಗೂ ಶಿಕ್ಷಣ ಕ್ಷೇತ್ರಕ್ಕೆ 3,857 ಕೋಟಿ ರೂ. (ಶೇ. 2.4) ಸಾಲವನ್ನು ಆದ್ಯತೆ ಮೇರೆಗೆ ನೀಡಿರುವ ಗುರಿ ಹಾಕಿಕೊಂಡಿರುವುದು ಸೂಕ್ತವಾಗಿದೆ ಎಂದು ತಿಳಿಸಿದರು.

Advertisement

ಸಾಲ ಪ್ರಮಾಣ ಶೇ.16.3 ಏರಿಕೆ: ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕ್‌ಗಳು 1,37,393 ಕೋಟಿ ರೂ. ಸಾಲ ನೀಡಿದ್ದವು. ಆದರೆ ಪ್ರಸಕ್ತ ಸಾಲಿನಲ್ಲಿ 1.60 ಲಕ್ಷ ಕೋಟಿ ರೂ.ಸಾಲ ನೀಡುವ ಗುರಿ ಹೊಂದುವ ಮೂಲಕ ಸಾಲ ವಿತರಣೆ ಪ್ರಮಾಣ ಶೇ.16.3 ಏರಿಕೆಯಾದಂತಾಗಿದೆ ಎಂದು ಹೇಳಿದರು. ಕಳೆದ ಸಾಲಿನಲ್ಲಿ ಬೆಳೆ ಉತ್ಪಾದನೆಗೆ ನೀಡಲು ಉದ್ದೇಶಿಸಿದ್ದ ಸಾಲ ವಿತರಣೆ ಪ್ರಮಾಣವು ನಿಗದಿತ ಗುರಿಯ ಶೇ.80ರಷ್ಟು ಮಾತ್ರ ತಲುಪಿದೆ. ರಾಜ್ಯ ಮಟ್ಟದ ಬ್ಯಾಂಕರ್‌ ಸಮಿತಿಯು ಇತ್ತ ಗಮನ ಹರಿಸಿ ಪ್ರಸಕ್ತ ವರ್ಷದ ಸಾಲ ವಿತರಣೆ ಗುರಿ ತಲುಪಲು ಆದ್ಯತೆ ನೀಡಬೇಕು ಎಂದು ಹೇಳಿದರು.

ವಸತಿ ಕ್ಷೇತ್ರದಡಿ 2015-16ರಲ್ಲಿ 9,061 ಕೋಟಿ ರೂ. ಸಾಲ ವಿತರಿಸಿದ್ದರೆ, 2016-17ನೇ ಸಾಲಿನಲ್ಲಿ ಸಾಲ ಪ್ರಮಾಣ 5,916 ಕೋಟಿ ರೂ.ಗೆ ಇಳಿಕೆಯಾಗಿದೆ.   ಶಿಕ್ಷಣ ಸಾಲ ವಿತರಣೆ ಪ್ರಮಾಣವು 2015-16ರಲ್ಲಿ 2,248 ಕೋಟಿ ರೂ. ಇದ್ದುದು, 2016-17ನೇ ಸಾಲಿನಲ್ಲಿ 1,639 ಕೋಟಿ ರೂ.ಗೆ ಇಳಿಕೆಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಎರಡು ಕ್ಷೇತ್ರಗಳಲ್ಲಿ ನಿಗದಿತ ಸಾಲ ವಿತರಣೆ ಗುರಿ ತಲುಪುವಲ್ಲಿ ವಿಫ‌ಲವಾಗಿರುವುದು ಕಂಡುಬಂದಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ, ರಾಜ್ಯ ಬ್ಯಾಂಕರ್‌ ಸಮಿತಿ ಅಧ್ಯಕ್ಷ ಅರುಣ್‌ ಶ್ರೀವಾಸ್ತವ, ಅಭಿವೃದ್ಧಿ ಆಯುಕ್ತ ಟಿ.ಎಂ.ವಿಜಯಭಾಸ್ಕರ್‌, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎನ್‌.ಎಸ್‌.ಪ್ರಸಾದ್‌, ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕ ಇಗುನ್‌ ಕರ್ತಕ್‌, ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಐ.ಗಣಗಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next