Advertisement

ಲೋಕಸಭೆಗೆ ಶಕ್ತಿ ತುಂಬಲು ನನ್ನನ್ನು ಗೆಲ್ಲಿಸಿ: ಮಧು

05:23 PM Oct 22, 2018 | |

ಸಾಗರ: ಲೋಕಸಭೆಗೆ ಶಕ್ತಿ ತುಂಬಲು, ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಲು, ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ನನ್ನ ಗೆಲುವು ಕಾರಣವಾಗಲಿದೆ ಎಂದು ಶಿವಮೊಗ್ಗ ಲೋಕಸಭೆಯ ಜೆಡಿಎಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

Advertisement

ನಗರದ ರಾಘವೇಶ್ವರ ಸಭಾಭವನದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಜಂಟಿ ಕಾರ್ಯಕರ್ತರ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗಿಂತಲೂ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರ ಸೋಲು ನನಗೆ ಬಹಳ ದೊಡ್ಡ ನೋವಿನ ಸಂಗತಿಯಾಗಿತ್ತು. ತಂದೆ ಸ್ಥಾನದಲ್ಲಿರುವ ಕಾಗೋಡು ಮಾರ್ಗದರ್ಶನದಿಂದ ಶಾಸಕನಾಗಿದ್ದ ಸಂದರ್ಭದಲ್ಲಿ ಜನಪರ ಕೆಲಸ ಮಾಡಲು
ಸಾಧ್ಯವಾಗಿದೆ. ನಾನು ಪರೀಕ್ಷೆಗಳಲ್ಲಿ ನಪಾಸಾದಾಗ ನನ್ನ ತಂದೆ ಬಂಗಾರಪ್ಪ ಅವರು ಪೂರಕ ಪರೀಕ್ಷೆಗಳಿರುತ್ತವೆ. ಅವುಗಳನ್ನು ಬರೆದು ಪಾಸಾಗು ಎನ್ನುತ್ತಿದ್ದರು. ಈಗಲೂ ನನಗೆ ಲೋಕಸಭೆ ಚುನಾವಣೆ ಎಂಬ ಸಪ್ಲಿಮೆಂಟರಿ ಪರೀಕ್ಷೆ ಎದುರಾಗಿದೆ. ಈ ಚುನಾವಣೆಯಲ್ಲಿ ಸೋತರೆ ಆ ಸೋಲು ಮಧು ಹೆಸರಿಗಿರಲಿ. ಅಲ್ಲಿ ಬಂಗಾರಪ್ಪ ಅವರ ಹೆಸರೂ ಬೇಡ. ಅದೇ ನಾನು ಗೆದ್ದರೆ ನನ್ನ ಗೆಲುವು ಕಾಗೋಡು ಅವರ ಹೆಸರಿಗಿರಲಿ ಎಂದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಲೋಕಸಭೆ ಚುನಾವಣೆಗೆ ಕಾರಣರಾಗಿರುವ ಬಿ.ಎಸ್‌. ಯಡಯೂರಪ್ಪ ಅವರು ಮತದಾರರಿಗೆ ಮೋಸ ಮಾಡಿದ್ದಾರೆ. 5 ವರ್ಷಗಳ ಅವಧಿಗೆ ಸಂಸದನಾಗಿ ಆಯ್ಕೆ ಮಾಡಿದ ಮತದಾರರನ್ನು ವಂಚಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಮತದಾರರೇ ನಿಜವಾದ ಪ್ರಭುಗಳು. ಅಂತಹ ಪ್ರಭುಗಳನ್ನು ಕಸಕ್ಕಿಂತಲೂ ಕಡೆ ಮಾಡಿದ ಅಪ್ಪ- ಮಗನನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕು. ರಾಜ್ಯದ ರಾಜಕಾರಣಕ್ಕೆ ಹೊಸ ತಿರುವು ನೀಡುವಲ್ಲಿ ಶಿವಮೊಗ್ಗ ಲೋಕಸಭೆ ಚುನಾವಣೆ ಕಾರಣವಾಗಬೇಕು. 4 ತಿಂಗಳ ಅವಧಿಗೆ ಮಗನನ್ನು ತಂದು ನಿಲ್ಲಿಸಿ ಆಟವಾಡುವ ಮನಃಸ್ಥಿತಿಗೆ ಮತದಾರರು ಸಂಕೋಲೆ ಹಾಕಬೇಕು. 

Advertisement

ಚುನಾವಣೆಗೆ ನೀತಿ ಮತ್ತು ಶ್ರದ್ಧೆ ಅಗತ್ಯ. ಸವಾಲಿನ ಸಂಕೇತವಾಗಿರುವ ಚುನಾವಣೆಯಲ್ಲಿ ಜಾತಿ, ಧರ್ಮ ಇನ್ನಾವುದೋ ಕಾರಣವಾಗಬಾರದು. ಸಮ್ಮಿಶ್ರ ಸರ್ಕಾರದ ತೀರ್ಮಾನದ ಹಿನ್ನೆಲೆಯಲ್ಲಿ ಹೊಂದಾಣಿಕೆಯ ರಾಜಕಾರಣವನ್ನು ನಾವು ಮಾಡಬೇಕಾಗಿದೆ ಎಂದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಯಡಿಯೂರಪ್ಪ ಅವರು ಯಾವತ್ತೂ ರೈತರ ಪರ ಧ್ವನಿಯಾಗಿಲ್ಲ. 10 ವರ್ಷಗಳ ಅವಧಿಯಲ್ಲಿ ಅಧಿಕಾರವಿದ್ದರೂ ಜಿಲ್ಲೆಯ ಎಂಪಿಎಂ., ವಿಐಎಸ್‌ ಎಲ್‌ ಉಳಿಸಲು ಏನೂ ಮಾಡದಿರುವುದು ಅಪ್ಪ ಮಕ್ಕಳ ಸಾಧನೆಯಾಗಿದೆ. ಸಾಗರದಲ್ಲಿ ಭ್ರಷ್ಟಾಚಾರದ ಹಣದಿಂದ ಗೆದ್ದು ಬಂದವರು, ಮರಳುಗಾಡಿ ಲೆಕ್ಕ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.
 
ರಾಜ್ಯದ ಸಮ್ಮಿಶ್ರ ಸರ್ಕಾರ ಪತನ ಎಂಬ ಬಿಎಸ್‌ವೈ ಹೇಳಿಕೆಗಳು ಠುಸ್‌ ಪಟಾಕಿಗಳಾಗಿವೆ. ಮಧು ಅವರನ್ನು ಶಿವಮೊಗ್ಗ ಲೋಕಸಭೆಯಲ್ಲಿ ಗೆಲ್ಲಿಸಿದರೆ ರಾಷ್ಟ್ರಕ್ಕೆ ಸೂಕ್ತ ಸಂದೇಶ ಹೋಗುತ್ತದೆ. ರಾಜ್ಯ ಸರ್ಕಾರ ಮತ್ತಷ್ಟು ಭದ್ರವಾಗುತ್ತದೆ. ಜಿಲ್ಲೆಯಲ್ಲಿ ಬಿಜೆಪಿಗೆ ಹೊಸ ಶಕ್ತಿ ಬರಲು ಬಂಗಾರಪ್ಪ ಕಾರಣ ಎಂಬುದನ್ನು ಆ ಪಕ್ಷದವರು ಮರೆತಿದ್ದಾರೆ.

ಮತ ಹಾಕಲು ಮಾತ್ರ ಬಿಜೆಪಿಗೆ ಬ್ರಾಹ್ಮಣರು ಬೇಕು. ಆದರೆ ಬ್ರಾಹ್ಮಣರಿಗೆ ಎಲ್ಲಿಯೂ ಸೂಕ್ತ ಅವಕಾಶವನ್ನು ಬಿಜೆಪಿ ನೀಡುವುದಿಲ್ಲ. ಆವಿನಹಳ್ಳಿ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಭೀಮನೇರಿ ಶಿವಪ್ಪ ಅವರನ್ನು ಗೆಲ್ಲಿಸುವ ಮೂಲಕ ಲೋಕಸಭೆ ಚುನಾವಣೆಯ ಗೆಲುವಿಗೆ ನಾಂದಿಯಾಗಬೇಕು ಎಂದರು.

ವಿ.ಪ. ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀ.ನ. ಶ್ರೀನಿವಾಸ, ರವಿ ಕುಗ್ವೆ ಮತ್ತಿತರರು ಮಾತನಾಡಿದರು. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪದಾಧಿ ಕಾರಿಗಳಾದ ಮಕೂಲ್‌ ಅಹಮ್ಮದ್‌, ಬಿ.ಆರ್‌. ಜಯಂತ್‌, ಜಾಕೀರ್‌. ಕನ್ನಪ್ಪ ಬೆಳಲಮಕ್ಕಿ, ಆವಿನಹಳ್ಳಿ ಜಿಪಂ ಅಭ್ಯರ್ಥಿ
ಭೀಮನೇರಿ ಶಿವಪ್ಪ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಕೆ.ಜಿ. ಪ್ರಶಾಂತ್‌, ಹೊಳಿಯಪ್ಪ, ಜಯಲಕ್ಷ್ಮೀ ನಾರಾಯಣ ಮುಂತಾದ ಮುಖಂಡರು ಇದ್ದರು. ಎಲ್‌.ಟಿ. ತಿಮ್ಮಪ್ಪ ಸ್ವಾಗತಿಸಿದರು. ಅನ್ವರ್‌ ವಂದಿಸಿದರು. ಕಲಸೆ ಚಂದ್ರಪ್ಪ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next