ನವದೆಹಲಿ: ಪರೀಕ್ಷೆ ಎಂದರೆ ವಿದ್ಯಾರ್ಥಿಗಳಲ್ಲಿ ಒತ್ತಡ, ಆತಂಕದಲ್ಲಿರುವಂತೆ ಮಾಡುತ್ತದೆ. ವಿದ್ಯಾರ್ಥಿಗಳು ಕೆಲವೊಮ್ಮೆ ತಯಾರಿ ಇಲ್ಲದೇ ಪರೀಕ್ಷೆಗೆ ಹಾಜರಾಗುತ್ತಾರೆ. ಹೌದು ಇಂತಹ ಸಂದರ್ಭದಲ್ಲಿ ಪ್ರಶ್ನೆಗಳಿಗೆ ಉತ್ತರವೇ ತಿಳಿದಿಲ್ಲ ಎಂದಾದರೆ ಪರೀಕ್ಷೆ ಹಾಲ್ ನಲ್ಲಿ ಅನಿವಾರ್ಯವಾಗಿ ಏನಾದರೂ ಬರೆಯಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅದೇ ರೀತಿ ಚಂಡೀಗಢ್ ಯೂನಿರ್ವಸಿಟಿಯ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆ ಭರ್ಜರಿ ವೈರಲ್ ಆಗಿದೆ.
ಇದನ್ನೂ ಓದಿ:ಡಿಕೆಶಿ ವಿರುದ್ಧದ ಸಿಬಿಐ ವಿಚಾರಣೆಗೆ ಎಪ್ರಿಲ್ 6ರವರೆಗೆ ತಡೆ ನೀಡಿ ಹೈಕೋರ್ಟ್ ಆದೇಶ
ಚಂಡೀಗಢ್ ಯೂನಿರ್ವಸಿಟಿ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬಾಲಿವುಡ್ ಹಾಡನ್ನು ಬರೆದು, ಉಪನ್ಯಾಸಕರಿಗೆ ಕಿರು ಟಿಪ್ಪಣಿಯೊಂದನ್ನು ಬರೆದಿದ್ದಾನೆ. ಎಂಜಿನಿಯರಿಂಗ್ ವಿದ್ಯಾರ್ಥಿಯ ಉತ್ತರ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಚಂಡೀಗಢ್ ಯೂನಿರ್ವಸಿಟಿ ಮೇಮ್ಸ್ ಪೇಜ್ ನಲ್ಲಿ ಶೇರ್ ಮಾಡಿದ್ದು, ವಿದ್ಯಾರ್ಥಿ ಶೂನ್ಯ ಅಂಕವನ್ನು ಪಡೆದಿದ್ದಾನೆ. ಉತ್ತರಪತ್ರಿಕೆಯಲ್ಲಿ ಈ ವಿದ್ಯಾರ್ಥಿ, ತ್ರಿ ಈಡಿಯಟ್ಸ್ ಸಿನಿಮಾದ “ಗೀವ್ ಮಿ ಸಮ್ ಸನ್ ಶೈನ್” ಹಾಡನ್ನು ಉತ್ತರವಾಗಿ ಬರೆದಿದ್ದಾನೆ.
ಸಿನಿಮಾದ ಹಾಡು ಬರೆದ ನಂತರ ವಿದ್ಯಾರ್ಥಿ ಉತ್ತರಪತ್ರಿಕೆಯಲ್ಲಿ ನೈತಿಕ ಪಾಠದ ಅಣಿಮುತ್ತನ್ನು ಉಲ್ಲೇಖಿಸಿದ್ದಾನೆ. ಇಂಜಿನಿಯರ್ ಜೀವನ ತುಂಬಾ ಕಷ್ಟ. ಕಷ್ಟಪಟ್ಟು ಕಲಿಯುವ ವಿದ್ಯಾರ್ಥಿಗಳನ್ನು ಮೀರಿಸುವುದು ತುಂಬಾ ಕಷ್ಟ. ಆದರೆ ಮುಂದೊಂದು ದಿನ ನಾನು ಏನಾದರು ದೊಡ್ಡ ಸಾಧನೆಯನ್ನು ಮಾಡುತ್ತೇನೆ.
ನೀತಿಪಾಠ: ಸಮುದ್ರದ ಶಾಂತ ಅಲೆಗಳು ಪ್ರತಿಭಾವಂತ ನಾವಿಕರನ್ನು ಸೃಷ್ಟಿಸುವುದಿಲ್ಲ ಎಂಬುದಾಗಿ ವಿದ್ಯಾರ್ಥಿ ಬರೆದಿರುವುದಾಗಿ ವರದಿ ತಿಳಿಸಿದೆ.
ಕುತೂಹಲಕಾರಿ ಅಂಶವೆಂದರೆ ಎರಡನೇ ಉತ್ತರದಲ್ಲಿ ವಿದ್ಯಾರ್ಥಿ ಉಪನ್ಯಾಸಕಿಗೆ ಕಿರು ಟಿಪ್ಪಣಿಯೊಂದನ್ನು ಬರೆದಿದ್ದು, “ಮೇಡಂ ನೀವು ತುಂಬಾ ಬುದ್ಧಿವಂತ ಉಪನ್ಯಾಸಕಿ. ನಿಜಕ್ಕೂ ಇದು ನನ್ನ ತಪ್ಪು, ಯಾಕೆಂದರೆ ಇಂತಹ ಕಠಿಣ ಶ್ರಮವಹಿಸಿ ಓದಲು ನನ್ನಿಂದ ಸಾಧ್ಯವಿಲ್ಲ. ಓ ದೇವರೆ, ನನಗೆ ಕಲಿಯಲು ಸ್ವಲ್ಪ ಪ್ರತಿಭೆಯನ್ನು ಕರುಣಿಸು” ಎಂದು ಮನವಿ ಮಾಡಿಕೊಂಡಿದ್ದಾನೆ.
ಇದರೊಂದಿಗೆ ಮೂರನೇ ಪ್ರಶ್ನೆಗೆ ಈ ವಿದ್ಯಾರ್ಥಿ ದೇವರಲ್ಲಿ ಹತಾಶೆಯ ಮನವಿಯನ್ನು ಮಾಡಿಕೊಂಡಿದ್ದು, ಓ ದೇವರೇ ನೀನು ಎಲ್ಲಿದ್ದೀಯಾ? ಎಂದು ಉತ್ತರ ಬರೆದಿರುವ ಪೋಸ್ಟ್ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ಈ ಉತ್ತರ ಪತ್ರಿಕೆಯನ್ನು ಪರಿಶೀಲಿಸಿದ ಉಪನ್ಯಾಸಕಿ, ಆತನ ಎಲ್ಲಾ ಉತ್ತರಕ್ಕೂ ಕೆಂಪು ಗೆರೆಯನ್ನು ಎಳೆದು, ಆಲೋಚನೆ ತುಂಬಾ ಚೆನ್ನಾಗಿದೆ. ಆದರೆ ಈ ಉತ್ತರ ಇಲ್ಲಿ ಯಾವುದೇ ಪ್ರಯೋಜನಕ್ಕೆ ಬಾರದು” ಎಂದು ಉಲ್ಲೇಖಿಸಿ, ವಿದ್ಯಾರ್ಥಿಯನ್ನು ಅಣಕಿಸುವ ನಿಟ್ಟಿನಲ್ಲಿ ಉತ್ತರ ಪತ್ರಿಕೆಯ ಮತ್ತೊಂದು ಶೀಟ್ ನಲ್ಲಿ ….ನೀನು ಇನ್ನೂ ಹೆಚ್ಚು ಉತ್ತರ ಬರೆಯಬೇಕು (ಸಿನಿಮಾ ಹಾಡು) ಎಂದು ಷರಾ ಬರೆದಿದ್ದಾರೆ!
ಸಾಮಾಜಿಕ ಜಾಲತಾಣದಲ್ಲಿ ಎಂಜಿನಿಯರ್ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಓದಿದ ಬಳಕೆದಾರರು ಹಲವಾರು ಕಮೆಂಟ್ಸ್ ಮಾಡಿದ್ದಾರೆ. “ ಈತ 4ನೇ ಸೆಮಿಸ್ಟರ್ ವರೆಗೆ ಹೇಗೆ ಉತ್ತೀರ್ಣಗೊಂಡ ಎಂಬುದಾಗಿ ಟ್ವೀಟ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಮತ್ತೊಬ್ಬ ಬಳಕೆದಾರ, ನೀವು ಏನೇ ಹೇಳಿ, ಈ ವಿದ್ಯಾರ್ಥಿಯ ಕೈಬರಹ ತುಂಬಾ ಚೆನ್ನಾಗಿದೆ ಎಂದು ಉಲ್ಲೇಖಿಸಿದ್ದಾರೆ.