Advertisement

ಗಿವ್‌ ಮಿ “ರೆಡ್‌’ಮಿ

11:35 AM Jul 08, 2019 | mahesh |

ಭಾರತದಲ್ಲಿ ಕಡಿಮೆ ಬೆಲೆಗೆ ಉತ್ತಮ ಸವಲತ್ತುಗಳನ್ನು ನೀಡಿ ಜನಪ್ರಿಯತೆ ಗಳಿಸಿದ ಶಿಯೋಮಿ ಕಂಪೆನಿ, ರೆಡ್‌ಮಿ 7ಎ ಎಂಬ ಹೊಸ ಆರಂಭಿಕ ದರ್ಜೆಯ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. ಸ್ನಾಪ್‌ಡ್ರಾಗನ್‌ 439 ಎಂಟು ಕೋರ್‌ಗಳ ಪ್ರೊಸೆಸರ್‌ ಉಳ್ಳ, ಇದು 12 ಮೆಪಿ. ಸೋನಿ ಕ್ಯಾಮರಾ ಹೊಂದಿದೆ. ಇದರ ದರ 5,799 ರೂ. ಮತ್ತು 5,999 ರೂ.

Advertisement

ಇಂದು ಮೊಬೈಲ್‌ ಫೋನ್‌ ಎಂಬುದು ಲಕ್ಸುರಿಯಾಗಿ ಉಳಿದಿಲ್ಲ. ಕೀಪ್ಯಾಡ್‌ ಫೋನ್‌ ಬಳಸುತ್ತಿದ್ದವರೂ ಈಗ ಸ್ಮಾರ್ಟ್‌ ಫೋನ್‌ಗಳನ್ನು ಕೊಳ್ಳುತ್ತಿದ್ದಾರೆ. ಎಷ್ಟೋ ಜನರು ಮೊಬೈಲ್‌ ಫೋನ್‌ಗಳಲ್ಲಿರುವ ತಾಂತ್ರಿಕ ಸೌಲಭ್ಯಗಳಿಗೆ ಹೋಲಿಸಿದರೆ ಹೆಚ್ಚು ಬೆಲೆ ತೆತ್ತು ಕಡಿಮೆ ಗುಣವಿಶೇಷಗಳುಳ್ಳ ಫೋನ್‌ಗಳನ್ನು ಕೊಂಡು ಬಿಡುತ್ತಾರೆ. ಅವರಿಗದರ ಬಗ್ಗೆ ಗೊತ್ತಿರುವುದಿಲ್ಲ. ಕೆಲವರಿಗೆ ಕರೆ ಮಾಡಲು, ವಾಟ್ಸಪ್‌, ಫೇಸ್‌ಬುಕ್‌ ನೋಡಲು ಒಂದು ಸಾಧಾರಣ ಮೊಬೈಲ್‌ ಬೇಕಿರುತ್ತದೆ. ಕೆಲವು ದುಬಾರಿ ಕಂಪೆನಿಗಳು, 2 ಜಿಬಿ ರ್ಯಾಮ್‌ ಉಳ್ಳ ಫೋನ್‌ಗಳನ್ನೇ 10 ಸಾವಿರ ದರಕ್ಕೆ ಮಾರುತ್ತವೆ. ಅದರಲ್ಲಿ ಎಷ್ಟು ರ್ಯಾಮ್‌, ಎಷ್ಟು ಆಂತರಿಕ ಸಂಗ್ರಹ ಇದೆ ಎಂದು ತಿಳಿಯದೆಯೇ 10-12 ಸಾವಿರಕ್ಕೆ 2 ಜಿಬಿ ರ್ಯಾಮ್‌ ಫೋನ್‌ ಕೊಂಡಿರುವುದನ್ನು ನೋಡಿದ್ದೇನೆ.

ಇಂಥ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಶಿಯೋಮಿ ಕಂಪೆನಿ ಹಲವಾರು ಫೋನ್‌ಗಳನ್ನು ಹೊರತರುತ್ತಲೇ ಇದೆ. ಅದರ ಎ ಸರಣಿಯ ಫೋನ್‌ಗಳು ಕಡಿಮೆ ಬೆಲೆಯವು. ಪ್ರತಿಯೊಂದು ಹೊಸ ಮಾದರಿ ಬಂದಾಗ ಹೊಸ ವಿಶೇಷಗಳು ಇನ್ನಷ್ಟು ಹೊಸ ಸೌಲಭ್ಯಗಳನ್ನು ಕಂಪೆನಿ ನೀಡುತ್ತಿದೆ. ಅದರ 3ಎ, 4ಎ,5ಎ, 6ಎ ಸರಣಿಯ ಫೋನ್‌ಗಳು ಕಡಿಮೆ ದರದ ಫೋನ್‌ಗಳನ್ನು ಬಯಸುವ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡೇ ತಯಾರಿಸಿರುವಂಥವು. ಈ ಸರಣಿಗೆ ಇನ್ನೊಂದು ನೂತನ ಸ್ಮಾರ್ಟ್‌ಫೋನನ್ನು ಶಿಯೋಮಿ ತನ್ನ ರೆಡ್‌ಮಿ ಬ್ರಾಂಡ್‌ ಅಡಿಯಲ್ಲಿ ಕಳೆದ ಗುರುವಾರವಷ್ಟೇ ಭಾರತದಲ್ಲಿ ಬಿಡುಗಡೆ ಮಾಡಿದೆ. 2ಜಿ.ಬಿ ರ್ಯಾಮ್‌ 16 ಜಿಬಿ ಆಂತರಿಕ ಸಂಗ್ರಹದ ಫೋನಿನ ದರ 5,799 ರೂ., 2ಜಿಬಿ ರ್ಯಾಮ್‌, 32 ಜಿಬಿ ಆಂತರಿಕ ಸಂಗ್ರಹದ ಆವೃತ್ತಿಯ ಬೆಲೆ 5,999 ರೂ.ಗಳು!

ಪವರ್‌ಫ‌ುಲ್‌ ಸ್ನಾಪ್‌ಡ್ರ್ಯಾಗನ್‌
ಇಷ್ಟು ಕಡಿಮೆ ಬೆಲೆಗೆ ಕೊಡುವಾಗ ಒಂದು ಮಟ್ಟಕ್ಕೆ ತೃಪ್ತಿಕರವಾದ ತಾಂತ್ರಿಕ ಸವಲತ್ತುಗಳನ್ನೇ ರೆಡ್‌ ಮಿ ನೀಡಿದೆ. ಮೊದಲಿಗೆ ಈ ದರಕ್ಕೆ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 439 ಪ್ರೊಸೆಸೆರ್‌ ನೀಡಿದೆ! ನಿಮಗೆ ಗೊತ್ತಿರಬಹುದು. ಮೊಬೈಲ್‌ನ ಮಿದುಳಾದ ಪ್ರೊಸೆಸರ್‌ಗಳಲ್ಲಿ ಸ್ನಾಪ್‌ಡ್ರಾಗನ್‌ ಕಂಪೆನಿಗೆ ಉನ್ನತ ಸ್ಥಾನವಿದೆ. ಕೆಲವು ಕಂಪೆನಿಗಳು ಈ ಕಂಪೆನಿಯ ಪ್ರೊಸೆಸರ್‌ಗಳನ್ನು 15 ಸಾವಿರದ ಮೊಬೈಲ್‌ಗ‌ಳಲ್ಲೂ ಸಹ ನೀಡುವುದಿಲ್ಲ. ಯಾಕೆಂದರೆ, ಇದರ ದರ ಉಳಿದ ಪ್ರೊಸೆಸರ್‌ಗಿಂತ ಹೆಚ್ಚು. ಇನ್ನೊಂದು ವಿಶೇಷವೆಂದರೆ ಈ ಕನಿಷ್ಟ ದರ ಪಟ್ಟಿಯಲ್ಲಿ ಇದುವರೆಗೆ 4 ಕೋರ್‌ಗಳ ಪ್ರೊಸೆಸರ್‌ ಅಷ್ಟೇ ನೀಡಲಾಗುತ್ತಿತ್ತು. ಇದು ಎಂಟು ಕೋರ್‌ಗಳ ಪ್ರೊಸೆಸರ್‌! ಅಂದರೆ 4 ಕೋರ್‌ಗಳಿಗಿಂತ ಎರಡು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತದೆ. 2 ಗಿಗಾ ಹಟ್ಜ್ ವೇಗ ಹೊಂದಿದೆ.

ಸೂಪರ್‌ ಪರದೆ
ಈ ದರದ ಫೋನ್‌ಗಳಲ್ಲಿ ಇನ್ನೂ ಅಂಡ್ರಾಯ್ಡ 9 ಪೀ ಆವೃತ್ತಿ ನೀಡಿರಲಿಲ್ಲ. ಇದರಲ್ಲಿ ಅಂಡ್ರಾಯ್ಡ 9 ಪೀ ಕಾರ್ಯಾಚರಣೆ ವ್ಯವಸ್ಥೆ ಇದೆ. ಇದಕ್ಕೆ ಎಂಐ ಯೂಸರ್‌ ಇಂಟರ್‌ಫೇಸ್‌ ನೀಡಲಾಗಿದೆ. ಎರಡು ಸಿಮ್‌ಗಳನ್ನೂ 4ಜಿ ಬಳಸಬಹುದು. ಅಲ್ಲದೇ 256ಜಿಬಿವರೆಗೂ ಮೆಮೊರಿ ಕಾರ್ಡ್‌ ಹಾಕಲು ಪ್ರತ್ಯೇಕ ಸ್ಲಾಟ್‌ ನೀಡಲಾಗಿದೆ. (2 ಸಿಮ್‌ ಪ್ಲಸ್‌ ಮೆಮೊರಿ ಕಾರ್ಡ್‌) 5.45 ಇಂಚಿನ ಐಪಿಎಸ್‌ ಎಲ್‌ಸಿಡಿ ಪರದೆ ಹೊಂದಿದೆ. ಎಚ್‌ಡಿ ಪ್ಲಸ್‌ ಅಂದರೆ 720*1440 ಪಿಕ್ಸಲ್‌ಗ‌ಳು. 295 ಪಿಪಿಐ, ಪರದೆಯ ಅನುಪಾತ 18.9 ಇದೆ. ಮೊಬೈಲ್‌ನಲ್ಲಿ ಎಫ್ ಎಂ ರೇಡಿಯೋ ಆಲಿಸುವವರಿಗೆ ಒಂದು ಅಡಚಣೆ ಎಂದರೆ ಇಯರ್‌ಫೋನ್‌ ಹಾಕಿರಲೇಬೇಕು. ಆದರೆ ಈ ಮೊಬೈಲ್‌ನಲ್ಲಿ ವೈರ್‌ಲೆಸ್‌ ಎಫ್.ಎಂ. ಸೌಲಭ್ಯ ನೀಡಲಾಗಿದೆ. ಇದಕ್ಕೆ ಬೆರಳಚ್ಚು ಸ್ಕ್ಯಾನರ್‌ ಇಲ್ಲ. ಆದರೆ ಫೇಸ್‌ ಅನ್‌ಲಾಕ್‌ ಫೀಚರ್‌ ಇದೆ. ಮೊಬೈಲ್‌ ದೇಹ ಲೋಹದ್ದಲ್ಲ. ಪಾಲಿಕಾಬೊನೇಟ್‌ (ಪ್ಲಾಸ್ಟಿಕ್‌)ನದ್ದು.

Advertisement

ಜಬರ್‌ದಸ್ತ್ ಬ್ಯಾಟರಿ
ಇದು 4000 ಎಂಎಎಚ್‌ ಸಾಮರ್ಥ್ಯದ ಜಬರ್‌ದಸ್ತ್ ಬ್ಯಾಟರಿ ಹೊಂದಿದೆ. ಇದು ಆರಂಭಿಕ ದರ್ಜೆಯ ಫೋನ್‌ ಆಗಿರುವುದರಿಂದ 4000 ಎಂಎಎಚ್‌ ಬ್ಯಾಟರಿ ಹೆಚ್ಚು ಬಾಳಿಕೆ ಬರುತ್ತದೆ. ಸಾಧಾರಣ ಬಳಕೆದಾರರಿಗೆ ಒಂದೂವರೆ ದಿನದಿಂದ ಎರಡು ದಿನ ಬ್ಯಾಟರಿ ದೊರಕುತ್ತದೆ.

165 ಗ್ರಾಂ ತೂಕವಿದ್ದು, 70.4 ಎಂ.ಎಂ. ಅಗಲ, 146 ಎಂ.ಎಂ. ಎತ್ತರ, 9.55 ಎಂ.ಎಂ. ದಪ್ಪ ಹೊಂದಿದೆ. ಇದರ ಖಅR() ವ್ಯಾಲ್ಯೂ ಕಡಿಮೆ ಇರುವುದು ಸಮಾಧಾನಕರ. ತಲೆಯ ಖಅR ಮೌಲ್ಯ 0.744ವ್ಯಾಟ್ಸ್‌/ಕೆಜಿ, ದೇಹದ ಖಅR ಮೌಲ್ಯ 0.785 ವ್ಯಾಟ್ಸ್‌/ಕೆ.ಜಿ. ಇದೆ. ಭಾರತದಲ್ಲಿ ಖಅR ಮೌಲ್ಯ 1.6ವ್ಯಾಟ್ಸ್‌/ಕೆಜಿ. ಮೀರುವಂತಿಲ್ಲ.

ಎರಡು ವರ್ಷ ವಾರೆಂಟಿ
ಸಾಮಾನ್ಯವಾಗಿ ಮೊಬೈಲ್‌ ಫೋನ್‌ಗಳಿಗೆ ಒಂದು ವರ್ಷ ವಾರಂಟಿ ನೀಡಲಾಗುತ್ತದೆ. ಈ ಮಾದರಿಗೆ ಎರಡು ವರ್ಷಗಳ ವಾರಂಟಿಯನ್ನು ರೆಡ್‌ಮಿ ನೀಡಿರುವುದು ವಿಶೇಷ. ಈ ಮೊಬೈಲ್‌ ಕಪ್ಪು, ನೀಲಿ ಮತ್ತು ಚಿನ್ನದ ಬಣ್ಣಗಳಲ್ಲಿ ದೊರಕುತ್ತದೆ. ಜುಲೈ 11 ರಿಂದ ಫ್ಲಿಪ್‌ಕಾರ್ಟ್‌, ಮಿ.ಕಾಂ, ಮಿ ಸ್ಟೋರ್‌ಗಳಲ್ಲಿ ದೊರಕುತ್ತದೆ. ಕೀ ಪ್ಯಾಡ್‌ ಫೋನ್‌ಗಿಂತ ತುಸು ಮುಂದಕ್ಕೆ ಹೋಗಬೇಕು. ಬೆಲೆ 5-6 ಸಾವಿರ ಇರಬೇಕು ಎನ್ನುವಂಥವರಿಗೆ ಇದು ಉತ್ತಮ ಆಯ್ಕೆ ಎನ್ನಬಹುದು.

ಅಐ- ಅತಿ ಶೀಘ್ರದಲ್ಲಿ…
ಸೋನಿ ಐಎಂಎಕ್ಸ್‌ 486 ಕ್ಯಾಮರಾ ನೀಡಲಾಗಿದೆ. ಹಿಂಬದಿಗೆ 12 ಮೆಗಾ ಪಿಕ್ಸಲ್‌ ಹಾಗೂ ಸೆಲ್ಫಿಗೆ 5 ಮೆಗಾಪಿಕ್ಸಲ್‌ ಕ್ಯಾಮರಾ ಇದೆ. ಹಿಂಬದಿ ಕ್ಯಾಮರಾಕ್ಕೆ ಎಲ್‌ಇಡಿ ಫ್ಲಾಶ್‌ ಕೂಡ ಇದೆ. ಕ್ಯಾಮರಾ ಆನ್‌ ಮಾಡಿದಾಗ ಆಯಾ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಕೃತಕ ಬುದ್ದಿಮತ್ತೆ ಎಐ(ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌) ಡಿಟೆಕ್ಷನ್‌ ಸವಲತ್ತನ್ನು ಮುಂದಿನ ಸಾಫ್ಟ್ವೇರ್‌ ಅಪ್‌ಡೇಟ್‌ ಸಮಯದಲ್ಲಿ ನೀಡಲಾಗುವುದೆಂದು ಕಂಪೆನಿ ತಿಳಿಸಿದೆ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next