ಶಿವಮೊಗ್ಗ: ಕೆಎಸ್ ಈಶ್ವರಪ್ಪ ಅವರಿಗೆ 35 ವರ್ಷದಿಂದ ಒಂದೇ ಕ್ಷೇತ್ರದಲ್ಲಿ ಅವಕಾಶಗಳನ್ನು ನೀಡಲಾಗಿದೆ. ಈ ಬಾರಿ ನನಗೆ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವಿದೆ. ಈಶ್ವರಪ್ಪ ಈಗ ಅವರ ಮಗನಿಗೆ ಟಿಕೆಟ್ ಕೇಳುತ್ತಿದ್ದಾರೆ. ಆದರೆ ಆತನಿನ್ನು ಚಿಕ್ಕವನು, ಮಧ್ಯದಲ್ಲಿ ನಾನೊಬ್ಬ ಇದ್ದೇನೆ ಎಂದು ಹೇಳಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದ್ದಾರೆ.
ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರಕ್ಕೆ ನನಗೆ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ನಾನು ನನ್ನ ಮಕ್ಕಳು, ಮೊಮ್ಮಕ್ಕಳಿಗೆ ಟಿಕೆಟ್ ನೀಡಿ ಎಂದು ಕೇಳಿಲ್ಲ. ನಾನು ಬಾರಿ ಜನ ಪ್ರತಿನಿಧಿಯಾಗಬೇಕು ಎಂಬ ಉತ್ಕಟ ಆಸೆಯಿದೆ. ನನಗೆ ಹಿಂದಿನಿಂದ ವಿವಿಧ ಅವಕಾಶ ಕೊಟ್ಟಿದ್ದಾರೆ. ಹಾಗೆಯೇ ಬೇರೆಯವರಿಗೂ ಅವಕಾಶ ಕೊಟ್ಟಿದ್ದಾರೆ. ಪಕ್ಷ ನನಗೆ ಟಿಕೆಟ್ ಕೊಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ಯಾವುದೇ ಅಪಾದನೆಗಳಿಲ್ಲ. ಬದಲಿಗೆ ಜನರ ಪ್ರೀತಿಯಿದೆ ಎಂದರು.
ಫ್ಲೆಕ್ಸ್ ರಾಜಕೀಯ ವಿಚಾರವಾಗಿ ಮಾತನಾಡಿದ ಅವರು, ಹರಿದ ಬಾಯಿಗಳು ಎಂದರೆ ಓರ್ವರಿಗೆ ಹೇಳಿದ್ದಲ್ಲ. ಬಾಯಿಗೆ ಬಂದಂತೆ ಮಾತನಾಡುವ ಎಲ್ಲರಿಗೆ ಹೇಳಿದ್ದು. ಈಶ್ವರಪ್ಪ ಅವರೂ ಬಾಯಿಗೆ ಬಂದಂತೆ ಮಾತನಾಡಬಾರದು. ಅವರೊಬ್ಬರು ಪ್ರಬುದ್ಧ ನಾಯಕರು. ಅವರು ಸಮಾಜಕ್ಕೆ ಧಕ್ಕೆ ಬರುವಂತ ಹೇಳಿಕೆ ನೀಡಬಾರದು. ನಾನು ಫ್ಲೆಕ್ಸ್ ಹಾಕಿದ್ದು ಅವರಿಗೆ ಎಂದು ಅನಿಸಿದರೆ ಅವರು ತಮ್ಮ ತಪ್ಪು ತಿದ್ದಿಕೊಳ್ಳಬೇಕು ಎಂದು ಆಯನೂರು ಹೇಳಿದರು.
ನಿಷ್ಠುರವಾದ ಮಾತನಾಡಿದೆ ಎಂದಾಕ್ಷಣ ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಹೇಳುವುದು ತಪ್ಪು. ನಿಷ್ಠುರವಾಗಿ ಮಾತನಾಡಿದ ತಕ್ಷಣ ಬೇರೆ ಅರ್ಥ ಕಲ್ಪಿಸಿದರೆ ಅದಕ್ಕೆ ನಾನು ಜವಾಬ್ದಾರನಲ್ಲ. ನಮ್ಮೂರಲ್ಲಿ ಉರಿ ಗೌಡನೂ ಇಲ್ಲ ನಂಜೇಗೌಡನೂ ಇಲ್ಲ. ನಮ್ಮೂರಿನಲ್ಲಿ ಇವರು ಇರುವುದೂ ಬೇಡ. ಶಿವಮೊಗ್ಗ ಶಾಂತವಾಗಿರಲಿ. ಉರಿ, ನಂಜು ನಮ್ಮೂರಿಗೆ ಬಾರದೇ ಇರಲಿ. ಈಶ್ವರಪ್ಪ ಮತ್ತು ಬಿಜೆಪಿ ನಡುವೆ ನಾನು ಉರಿಗೌಡನೂ ಅಲ್ಲ ನಂಜೇಗೌಡನೂ ಅಲ್ಲ. ನಾನು ಆಯನೂರು ಮಂಜುನಾಥ್. ಯಾರ ಬಾಯಲ್ಲಿ ನಂಜು ಬರುತ್ತದೆಯೋ ಆತ ನಂಜೇಗೌಡ, ಯಾರು ನನ್ನ ಮಾತು ಕೇಳಿ ಉರಿದು ಬೀಳುತ್ತಾರೋ ಅವರು ಉರಿಗೌಡ ಎಂದು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿದರು.