ನಿವೃತ್ತ ಹವಾಲ್ದಾರ್, 26 ಮದ್ರಾಸ್ ಯುನಿಟ್
ನಾನು ಆಗ ತಾನೇ ಸೈನ್ಯಕ್ಕೆ ಸೇರಿದ್ದೆ. ಬಾಂಗ್ಲಾ ವಿಮೋಚನೆಗಾಗಿ ಇಂಡೋ- ಪಾಕ್ ಯುದ್ಧ ಎಂದು ಘೋಷಣೆ ಆಗುವ ಹೊತ್ತಿಗೆ ನಾನು ಅದೇ ಬಾಂಗ್ಲಾ ಬುಡದ ಕೊಲ್ಕತಾದ ಬ್ಯಾರಕ್‌ಪುರದಲ್ಲಿದ್ದೆ. ಡಿಸೆಂಬರ್ 7ಕ್ಕೆ ಢಾಕಾದತ್ತ ಹೊರಡಲು ಆದೇಶ ಬಂತು. ಆ ಹೊತ್ತಿಗಾಗಲೇ ಜೆಸ್ಸೋರ್ ಪ್ರದೇಶದಲ್ಲಿ ಘನಘೋರ ಫೈರಿಂಗ್ ಶುರುವಾಗಿತ್ತು.
ಪಾಕ್‌ನ ಟ್ಯಾಂಕರ್‌ಗಳ ಸದ್ದಡಗಿಸಲು ನಮಗೆ ಹೆಚ್ಚು ಕಾಲ ತಗಲಲಿಲ್ಲ.
Advertisement
ಜೆಸ್ಸೋರ್ ನಲ್ಲಿ ನಮ್ಮ ಜೈಕಾರ ಮೊಳಗಿದ ಮೇಲೆ, ಡಿ.10ರಂದು ಪಾಕ್‌ನ ಕಪಿಮುಷ್ಟಿಯಲ್ಲಿದ್ದ ಖುಲ್ನಾ ಕಡೆಗೆ ಮುನ್ನುಗ್ಗಿದ್ದೆವು. ನಮ್ಮ ತಂಡ ಟ್ಯಾಂಕರ್ ಸಮೇತ ಪದ್ಮಾವತಿ ನದಿಗೆ ಕಟ್ಟಿದ್ದ ಸೇತುವೆ ಮೇಲೆ ಸಾಗುತ್ತಿತ್ತು. ಅಷ್ಟರಲ್ಲೇ ನಡೆಯಿತು, ಪಾಕ್ ಸೈನಿಕರಿಂದ ಏರ್ ಅಟ್ಯಾಕ್. ನಮ್ಮ 26 ಬೆಟಾಲಿಯನ್, 19 ಮರಾಠಾ ತುಕಡಿಯ ಅರ್ಧದಷ್ಟು ಯೋಧರು ನೀರಿನಲ್ಲಿ ಮುಳುಗಿ ಮಡಿದರೆ, ಮತ್ತೆ ಕೆಲವರು ನೇರ ಬಾಂಬ್ ಬೆಂಕಿಗೆ ಆಹುತಿಯಾದರು. ತುಂಡಾದ ಸೇತುವೆ ಮೇಲೆ ನಾವೊಂದಿಷ್ಟು ಮಂದಿ ಮಾತ್ರವೇ ಉಳಿದುಕೊಂಡಿದ್ದೆವು.
ಶಿರೋಮಣಿ ಹಳ್ಳಿಗೆ ಕಾಲಿಟ್ಟಾಗ ಕಂಡಿದ್ದು ಅಕ್ಷರಶಃ ನರಕ. ಪಾಕ್ ಸೈನಿಕರು ವಿಕೃತ ಮೆರೆದಿದ್ದರು. ಅದನ್ನು ಕಂಡು ನಮ್ಮ ರೋಷಾವೇಶ ಇಮ್ಮಡಿಸಿತು. ಬಾಂಗ್ಲಾ ಹೆಂಗಳೆಯರ ಮೇಲೆ ಪಾಕ್ ಸೈನಿಕರ ಅತ್ಯಾಚಾರ, ಅನಾಚಾರ ಎಲ್ಲೆ ಮೀರಿತ್ತು. ಪುರುಷರು ತಮ್ಮ ಮನೆಗಳನ್ನೂ ಬಿಟ್ಟು ಓಡಿಹೋಗಿದ್ದರು. ಅಲ್ಲೊಂದು ಇಡೀ ಕುಟುಂಬವನ್ನೇ ಕಟ್ಟಿಹಾಕಿ ಚಿತ್ರಹಿಂಸೆ ನೀಡಲಾಗಿತ್ತು. ಆ ಸಂತ್ರಸ್ತರನ್ನು ರಕ್ಷಿಸಿದೆವು. ಇದನ್ನೂ ಓದಿ:ಎನ್‌ಕೌಂಟರ್: ಎ+ ಕೆಟಗರಿಯ ಹಿಜ್ಬುಲ್ ಉಗ್ರನ ಹತ್ಯೆ
Related Articles
ಅಲ್ಲಿದ್ದ ಪಾಕ್ ಸೈನಿಕರನ್ನು ಯುದ್ಧಕೈದಿಗಳನ್ನಾಗಿ ಸಾಗಿಸುವಾಗ, ಊರಿನವರೆಲ್ಲ ಅವರ ಮೇಲೆ ಚಪ್ಪಲಿಗಳನ್ನು ಎಸೆದು ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಂಡರು. ಇನ್ನೇನು ಶಿರೋಮಣಿ ಹಳ್ಳಿ ಸಂಪೂರ್ಣವಾಗಿ ನಮ್ಮ ಕೈವಶವಾಗುವ ಹೊತ್ತಿಗೆ ನನ್ನ ಎದೆಗೆ ಗುಂಡು ತಗಲಿದ್ದೂ ನನಗೆ ತಿಳಿದಿರಲಿಲ್ಲ. ಅನತಿ ದೂರ ಹೋದ ಮೇಲೆ ನನ್ನ ಸಮವಸ್ತ್ರ ಸಂಪೂರ್ಣ ರಕ್ತಮಯವಾಗಿದ್ದನ್ನು ಕಂಡು, ಎದೆಯ ಮೇಲೆ ಬೆರಳುಗಳನ್ನು ಆಡಿಸಿದೆ. ಎದೆಗೆ ಗುಂಡು ಬಡಿದ ಸಂಗತಿ ಗೊತ್ತಾಗಿದ್ದೇ ಆಗ. ಅಲ್ಲೇ ಬಿದ್ದ ನಾನು ಕಣ್ಣು ಬಿಡುವ ಹೊತ್ತಿಗೆ ಕೊಲ್ಕತಾದ ಮಿಲಿಟರಿ ಆಸ್ಪತ್ರೆಯಲ್ಲಿ ಮಲಗಿದ್ದೆ.
Advertisement
ಮರುದಿನ ನನ್ನೆದುರು ಪ್ರಧಾನಿ ಇಂದಿರಾಗಾಂಧಿ ನಿಂತಿದ್ದರು. ನನ್ನ ಆರೋಗ್ಯ ವಿಚಾರಿಸುತ್ತಾ, “ಶಹಬ್ಟಾಸ್ ನೀನು ವೈರಿಗಳ ಮುಂದೆ ಎದೆಗೊಟ್ಟು ಹೋರಾಡಿದ್ದೀಯ. ನಿಮ್ಮಂಥ ಜವಾನರೇ ನಮ್ಮ ದೇಶಕ್ಕೆ ಬೇಕು. ನೀನು ದೇಶದ ರಕ್ಷಣೆ ಮಾಡು, ನಾನು ನಿಮ್ಮ ತಂದೆ- ತಾಯಿಯ ರಕ್ಷಣೆ ಮಾಡುವೆ’ ಎಂದಿದ್ದರು. ಆ ಮಾತು ಈಗಲೂ ನನ್ನ ಹೃದಯದ ಕಿವಿಯಲ್ಲಿ ಬೆಚ್ಚಗೆ ಕುಳಿತಿದೆ.
ನಿರೂಪಣೆ: ವಾಣಿ ಭಟ್ಟ