ದಾವಣಗೆರೆ: ಡ್ರಗ್ ಕಂಟ್ರೋಲರ್ ತಮ್ಮ ತಂಡದೊಂದಿಗೆ ನಗರದ ಹಾಗೂ ತಾಲೂಕುಗಳಲ್ಲಿರುವ ಮೆಡಿಕಲ್ ಶಾಪ್‌ಗ್ಳಿಗೆ ತೆರಳಿ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳ ದಾಸ್ತಾನು ಪರಿಶೀಲಿಸಿ, ತಾತ್ಕಾಲಿಕ ಕೊರತೆ ಕಾರಣದ ಸಂಬಂಧ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದ್ದಾರೆ.
ಕೋವಿಡ್ 19 ಸೋಂಕು ನಿಯಂತ್ರಣ ಕುರಿತು ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ತಮ್ಮ ಅಧಿಧೀನದ ಸಿಬ್ಬಂದಿ ಜೊತೆ ನಗರ ಮತ್ತು ತಾಲ್ಲೂಕುಗಳ ವ್ಯಾಪ್ತಿಯ ಮೆಡಿಕಲ್ ಶಾಪ್‌ಗ್ಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಮಾಸ್ಕ್ ಮತ್ತು ಸ್ಯಾನಿಟೈಸರ್‌ನ ತಾತ್ಕಾಲಿಕ ಕೊರತೆ ನೀಗಬೇಕು ಎಂದರು. ಇತರೆ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ವಾಹನಗಳ ತಪಾಸಣೆಗಾಗಿ ಜಿಲ್ಲೆಯಲ್ಲಿ ಒಟ್ಟು 10 ಚೆಕ್‌ಪೋಸ್ಟ್ ತೆರೆದು
ಪೊಲೀಸ್, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಬಾಡಾಕ್ರಾಸ್ ದಾವಣಗೆರೆ ನಗರ ಸರಹದ್ದು. ಶಾಮನೂರು ಬಳಿ ದಾವಣಗೆರೆ ನಗರ ಸರಹದ್ದು. ಲಕ್ಕಮುತ್ತೇನಹಳ್ಳಿ ( ದಾವಣಗೆರೆ ತಾಲೂಕು), ಎಚ್.ಬಸಾಪುರ (ದಾವಣಗೆರೆ ತಾಲೂಕು), ಕುಮಾರಪಟ್ಟಣಂ ಹಲಸಬಾಳು ಹತ್ತಿರ (ಹರಿಹರ ತಾಲೂಕು), ಕುರುಬರಹಳ್ಳಿ (ಹರಿಹರ ತಾಲೂಕು). ಚೀಲೂರು (ಟಿ.ಜೆ.ಹಳ್ಳಿ ಕ್ರಾಸ್ -ಹೊನ್ನಾಳಿ ತಾಲೂಕು), ಸವಳಂಗ ವೃತ್ತ ( ಹೊನ್ನಾಳಿ ತಾಲೂಕು), ಮಾದಾಪುರ (ಚನ್ನಗಿರಿತಾಲೂಕು), ದೊಣ್ಣೆಹಳ್ಳಿ (ಜಗಳೂರು ತಾಲೂಕು) ಈ ಸ್ಥಳಗಳಲ್ಲಿ ಚೆಕ್‌ಪೋಸ್ಟ್ ತೆರೆಯಲಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಮಾತನಾಡಿ, ಹರಿಹರದಲ್ಲಿ 20, ಜಗಳೂರಿನಲ್ಲಿ 14 ಮತ್ತು ಹೊನ್ನಾಳಿಯಲ್ಲಿ 3 ಸ್ಯಾನಿಟೈಸರ್‌ಯುಕ್ತ ಕೈ ತೊಳೆಯುವ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದಾವಣಗೆರೆ ನಗರದಲ್ಲಿ 2 ಕೈತೊಳೆಯುವ ಕೇಂದ್ರ ಆರಂಭಿಸಿದ್ದು ಇನ್ನು ಉಳಿದಂತೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆ ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಈ ಎರಡು ಕಡೆ ಕ್ಯಾಂಟಿನ್ ಅವಶ್ಯಕತೆ ಇರುವುದರಿಂದ ಇಂದಿರಾ ಕ್ಯಾಂಟಿನ್ ಸೇವೆಗಾಗಿ ರೋಗಿಗಳ ಸಂಬಂಧಿ ಕರಿಗೆ ಟೋಕನ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಮಾರ್ಚ್ 31ರವರೆಗೆ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಪೂರೈಸುವ ಕಾರ್ಗಿಲ್ ಅಂತಹ ಫ್ಯಾಕ್ಟರಿಗಳು, ಸಾಬೂನು ಕಾರ್ಖಾನೆ, ಬೇಕರಿಗಳು, ಬೇಕರಿ ಉತ್ಪನ್ನಗಳಿಗೆ ನಿಷೇಧದಿಂದ ವಿನಾಯಿತಿ ನೀಡಲಾಗಿದೆ. ಆಹಾರ, ದಿನಸಿ ಅಂಗಡಿಗಳು, ಹಾಲು, ತರಕಾರಿಗಳು, ದಿನಬಳಕೆ ವಸ್ತುಗಳು, ಹಣ್ಣು, ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳು ಮತ್ತು ಅಂಗಡಿಗಳು, ಪೆಟ್ರೋಲ್ ಬಂಕುಗಳು, ಗ್ಯಾಸ್, ಎಲ್‌ಪಿಜಿ, ತೈಲ ಏಜೆನ್ಸಿಗಳು ಮತ್ತು ಅದಕ್ಕೆ ಸಂಬಂಧಿಸಿದ ಉಗ್ರಾಣಗಳು ಹಾಗೂ ಹಿಟ್ಟಿನ ಗಿರಣಿಗಳ ಸೇವೆಗೆ ನಿಷೇಧ ಇರುವುದಿಲ್ಲ ಎಂದರು.
ಎಟಿಎಂಗಳಲ್ಲಿ ಸ್ಯಾನಿಟೈಸರ್ ಇಡುವುದು ಕಡ್ಡಾಯವಾಗಿದ್ದು, ನಾನೇ ಸ್ವತಃ ಪರಿಶೀಲಿಸಿದಾಗ ಅನೇಕ ಕಡೆಗಳಲ್ಲಿ ಸ್ಯಾನಿಟೈಸರ್ ಇರಿಸದಿರುವುದು ಕಂಡು ಬಂದಿದೆ. ಸಾನಿಟೈಸರ್ ಇಡದಿದ್ದಲ್ಲಿ ನೋಟಿಸ್ ನೀಡಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್‌ರಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಮಾತನಾಡಿ, ಎಲ್ಲ ಅಧಿಕಾರಿಗಳು, ಪಿಡಿಓಗಳು, ಅಂಗನವಾಡಿ ಕಾರ್ಯಕರ್ತೆಯರು, ಅವಲೋಕನಾ ಅವಧಿಯಲ್ಲಿರುವ ಯಾವುದೇ ವ್ಯಕ್ತಿ ಭೇಟಿ ಮಾಡುವ ಸಮಯದಲ್ಲಿ ಅಗತ್ಯ ಸುರಕ್ಷಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.