ಕಲಬುರಗಿ: ನಾಡಿನ ಸಮಸ್ತ ಭೂಹೀನ ಕೃಷಿಕರಿಗೆ ತಲಾ 5 ಎಕರೆ ಜಮೀನು ಮಂಜೂರು ಮಾಡಬೇಕೆಂದು ಆಗ್ರಹಿಸಿ
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ದೇಶದಲ್ಲಿ ಭೂಸುಧಾರಣೆ ಜಾರಿಗೆ ಬಂದು ಸಮಸ್ತ ಕೃಷಿ ಕಾರ್ಮಿಕರಿಗೆ ಕೃಷಿ ಭೂಮಿ ಹಂಚಿಕೆಯಾಗಬೇಕೆಂದು 1950 ರ ದಶಕದಲ್ಲಿಯೇ ಆರ್‌ಪಿಐ ಹೋರಾಟ ನಡೆಸಿತ್ತು. ಕೇಂದ್ರದಲ್ಲಿ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಆರ್‌ಪಿಐನ ದಾದಾಸಾಹೇಬ ಗಾಯಕವಾಡ ಅವರು ಭೂ ಮಂಜೂರಾತಿಗಾಗಿ ಇಡೀ ದೇಶದ ಭೂ ಹೀನರಿಗೆ ಕರೆ ನೀಡಿ ಅಂದೇ 5 ಲಕ್ಷ ಜನರೊಂದಿಗೆ ಜೈಲ್ ಭರೋ ಹೋರಾಟ ನಡೆಸಿದ್ದರು. ಇದೇ ಕಾರಣಕ್ಕಾಗಿ ದೇಶದ ಅನೇಕ ರಾಜ್ಯಗಳಲ್ಲಿ ಭೂಸುಧಾರಣಾ ಕಾಯ್ದೆಗಳು ಜಾರಿಗೆ ಬಂದವು ಎಂದರು.
ರಾಜ್ಯದಲ್ಲೂ ಊಳುವವನೇ ಭೂ ಒಡೆಯ ಕಾಯ್ದೆ, ಭೂ ಪರಭಾರೆ ನಿಷೇಧ, ಇನಾಮತಿ ಭೂಮಿ ಮರು ಮಂಜೂರಾತಿಗಾಗಿ ಕಾನೂನುಗಳು ಜಾರಿಗೆ ಬಂದವು. ಇದಕ್ಕೂ ಮೊದಲು ಸ್ವತಂತ್ರ ಕಾರ್ಮಿಕ ಪಕ್ಷ ಮತ್ತು ಆಲ್ ಇಂಡಿಯಾ ಶೆಡ್ನೂಲ್ ಕಾಸ್ಟ್‌ಫೆಡರೇಷನ್ ಮೂಲಕ ಖುದ್ದು ಬಾಬಾಸಾಹೇಬ ಅಂಬೇಡ್ಕರರು ಇಂತಹುದೇ ಬೇಡಿಕೆಯನ್ನು ಬ್ರಿಟಿಷ ಸರ್ಕಾರದ ಮುಂದೆ ಇಟ್ಟಿದ್ದರು ಎಂದರು.
ಬಹುರಾಷ್ಟ್ರೀಯ ಕಂಪನಿಗಳಿಗೆ, ರಿಯಲ್ ಎಸ್ಟೇಟ್ ದಂಧೆಕೋರರಿಗೆ ಕೃಷಿ ಯೋಗ್ಯ ಭೂಮಿಯನ್ನು ಲಕ್ಷ ಲಕ್ಷ ಎಕರೆಗಟ್ಟಲೇ ರಾಜ್ಯ ಸರ್ಕಾರ ಮಂಜೂರು ಮಾಡುತ್ತಿದ್ದು, ಕೋಟ್ಯಂತರ ಕೃಷಿ ಕಾರ್ಮಿಕ ಭೂ ಹೀನರನ್ನು ಬೀದಿ ಪಾಲು ಮಾಡುತ್ತಿದೆ. ಇದು ರಾಜ್ಯ ಸರ್ಕಾರ ಸಂವಿಧಾನಕ್ಕೆ ಎಸಗುತ್ತಿರುವ ಅಪಚಾರ. ಕೂಡಲೇ ಕಂದಾಯ ಇಲಾಖೆ ಸಮೀಕ್ಷೆ ನಡೆಸಿ ಕೃಷಿ ಭೂಮಿಯನ್ನು ಪತ್ತೆ ಮಾಡಿ ಸಮಸ್ತ ಭೂ ಹೀನ ಕೃಷಿ ಕಾರ್ಮಿಕರಿಗೆ ತಲಾ 5 ಎಕರೆ ಜಮೀನು ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಧರಣಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಂಕರ ಕೋಡ್ಲಾ, ರಾಜ್ಯ ಉಪಾಧ್ಯಕ್ಷ ಟಿ.ಎಂ. ಬಾವಿದೊಡ್ಡಿ, ಜಿಲ್ಲಾಧ್ಯಕ್ಷ ಮಸ್ತಾನ ದಂಡೆ, ಮಲ್ಲಿಕಾರ್ಜುನ ಸಾತನೂರ, ಆನಂತ ಟೈಗರ್ ಹಾಗೂ ಕಾರ್ಯಕರ್ತರು ಇದ್ದರು.