ಬೆಂಗಳೂರು: ಬಡವರಿಗೆ ಬೇಸಾಯಕ್ಕೆ ಭೂಮಿ ಹಾಗೂ ವಾಸಕ್ಕೆ ಮನೆ ನೀಡುವುದು ಸರ್ಕಾರದ ಆದ್ಯತೆ ಎಂದು ಘೋಷಣೆ ಮಾಡಿದ್ದ ಮುಖ್ಯಮಂತ್ರಿಯವರು, ಈಗ ಮಾತು ತಪ್ಪಿದ್ದಾರೆ. ಆದ್ದರಿಂದ ಭೂಮಿ ಮತ್ತು ವಸತಿ ಹಕ್ಕು ವಂಚಿತ ರಾಜ್ಯದ ಎಲ್ಲ ಬಡವರು, ರೈತರ ಪರವಾಗಿ “ಭೂಮಿ ಕೊಡಿ, ಇಲ್ಲ ಜೈಲಿಗೆ ಕಳಿಸಿ’ ಎಂದು ಆಗ್ರಹಿಸಿ ಸೋಮವಾರದಿಂದ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದ್ದಾರೆ.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟದ ಸ್ಥಳದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, “ಭೂಮಿ ಹಾಗೂ ವಸತಿ ವಂಚಿತ ರಾಜ್ಯದ ಎಲ್ಲ ಬಡವರು, ರೈತರು ಈ ಭೂಸತ್ಯಾಗ್ರಹದಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಅಷ್ಟೇ ಅಲ್ಲ ಹೋರಾಟಕ್ಕೆ ಬರುವವರು ಜೈಲಿಗೆ ಹೋಗಲು ಸಿದ್ಧರಾಗಿರಬೇಕು,’ ಎಂದು ಹೇಳಿದರು.
“ಉಳುಮೆ ಮಾಡಿ ಬದುಕು ಕಟ್ಟಿಕೊಳ್ಳಲು ಒಂದಿಷ್ಟು ಜಮೀನು ಕೊಡಿ ಎಂದು ಈ ರಾಜ್ಯದ ರೈತ ಕೇಳುತ್ತಿದ್ದಾನೆ. ಸ್ವಾಭಿಮಾನದ ಜೀವನ ನಡೆಸಲು ವಾಸಕ್ಕೆ ಒಂದು ಮನೆ ಕೊಡಿ ಎಂದು ಈ ನಾಡಿನ ಬಡವ ಮನವಿ ಮಾಡುತ್ತಿದ್ದಾನೆ. ಭೂಮಿ ಕೊಡಿ ಮನೆ ಕೊಡಿ ಎಂದು ಅನೇಕ ವರ್ಷಗಳಿಂದ ಲಕ್ಷಾಂತರ ಜನ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರದ ಬಳಿ ಜಮೀನು ಇದೆ. ಆದರೆ, ಕೊಡಲು ಮನಸ್ಸು ಮಾಡುತ್ತಿಲ್ಲ. ಆದ್ದರಿಂದ ಸರ್ಕಾರವನ್ನು ಎಚ್ಚರಿಸುವ ನಿರ್ಣಾಯಕ ಹೋರಾಟ ಮಾಡಬೇಕಾಗಿದೆ,’ ಎಂದು ದೊರೆಸ್ವಾಮಿ ಹೇಳಿದರು.
ಇದೇ ವೇಳೆ ಮಾತನಾಡಿದ ಸಮಿತಿಯ ಸಂಚಾಲಕ ಕುಮಾರ ಸಮತಳ, “ರಾಜ್ಯದಲ್ಲಿನ ಬಡವರ ಭೂಮಿ-ವಸತಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಸರ್ಕಾರ ಉನ್ನತಾಧಿಕಾರ ಸಮಿತಿ ರಚಿಸಬೇಕು. ಅನೇಕ ವರ್ಷಗಳಿಂದ ಭೂಮಿ ಅಥವಾ ಮನೆಗಾಗಿ ಲಕ್ಷಾಂತರ ಜನ ಅರ್ಜಿಗಳನ್ನು ಸಲ್ಲಿಸಿದ್ದು, ಈ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು.
ಭೂಮಿ ಮತ್ತು ವಸತಿ ಹಕ್ಕಿಗೆ ನಡೆದ ಹೋರಾಟಗಳಲ್ಲಿ ರೈತರು, ಬಡವರು, ಸಂಘ-ಸಂಸ್ಥೆಗಳ ಕಾರ್ಯಕರ್ತರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ತಕ್ಷಣ ವಾಪಸ್ ಪಡೆಯಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಹೋರಾಟ ನಡೆಸಲಾಗುತ್ತಿದೆ,’ ಎಂದರು.