Advertisement

ಮೊದಲು ಉದ್ಯೋಗ ಭದ್ರತೆ ನೀಡಿ, ಆಮೇಲೆ ಓಟು ಕೇಳಿ

12:28 PM Feb 19, 2018 | |

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಧರ್ಮ, ಜಾತಿ, ಹೆಂಡ, ಹಣದ ಆಮಿಷಕ್ಕೆ ಬಲಿಯಾಗದೇ ಉದ್ಯೋಗಕ್ಕೆ ಓಟು, ಉದ್ಯೋಗ ಭದ್ರತೆಗೆ ಓಟು ಎನ್ನುವ ಪ್ರತಿಜ್ಞೆ ಮಾಡವ ಮೂಲಕ ಯುವಜನರು ರಾಜಕೀಯ ಪಕ್ಷಗಳಿಗೆ ಹೊಸ ಸವಾಲು ನೀಡಿದ್ದಾರೆ.

Advertisement

ಭಾನುವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗಕ್ಕಾಗಿ ಯುವಜನರು ಸಮಾವೇಶದಲ್ಲಿ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಿಗೆ, ಉದ್ಯೋಗ ಸೃಷ್ಟಿಗೆ ನಿಮ್ಮ ಯೋಜನೆಗಳೇನು? ಗುತ್ತಿಗೆ ನೌಕರರ ಸೇವಾ ಭದ್ರತೆಗೆ ಪ್ಲಾನ್‌ ಏನು? ಮತ್ತು ಘೋಷಣೆಯಾಗುವ ನಿಮ್ಮ ಪಕ್ಷದ ಯೋಜನೆಗಳ ಅನುಷ್ಠಾನಕ್ಕೆ ಎಷ್ಟು ಸಮಯ ಬೇಕು ಎಂಬ ಮೂರು ಗಂಭೀರ ಪ್ರಶ್ನೆಗಳನ್ನು ಕೇಳಿದ್ದಾರೆ. ಜತೆಗೆ ಉದ್ಯೋಗ ಭದ್ರತೆಯನ್ನು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳ ಮುಂದಿಟ್ಟಿದ್ದಾರೆ.

ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯಕಾರಿ ಸಮಿತಿಯ ಡಾ.ವಾಸು ಮಾತನಾಡಿ, ನಕಲಿ ಪ್ರಜಾಪ್ರಭುತ್ವವನ್ನು ನಿಜವಾದ ಪ್ರಭುತ್ವವಾಗಿ ಪರಿವರ್ತಿಸಲು ಜನಾಂದೋಲನ ಆರಂಭಿಸಿದ್ದೇವೆ. ಉದ್ಯೋಗಕ್ಕೆ ಓಟು, ಉದ್ಯೋಗ ಭದ್ರತೆಗೆ ಓಟು ಎಂಬ ಘೋಷ ವಾಕ್ಯದೊಂದಿಗೆ ನಿರುದ್ಯೋಗಿಗಳು, ವಿದ್ಯಾರ್ಥಿಗಳು, ಗುತ್ತಿಗೆ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸೇರಿ ಆರಂಭಿಸಿರುವ ನೂತನ ಹಾಗೂ ರಚನಾತ್ಮಕ ಆಂದೋಲನ ಇದಾಗಿದೆ ಎಂದರು.

ಉದ್ಯೋಗಕ್ಕೆ ಯೋಜನೆಯಿಲ್ಲ: ಗುತ್ತಿಗೆ ಕಾರ್ಮಿಕರನ್ನು ದ್ವಿತೀಯ ದರ್ಜೆಯ ಪ್ರಜೆಗಳನ್ನಾಗಿ ನೋಡಲಾಗುತ್ತಿದೆ. ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಲ್ಕು ಮುಖ್ಯ ಪ್ರಾತಿನಿಧ್ಯಗಳಲ್ಲಿ ಉದ್ಯೋಗದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಂದರ್ಶನಗಳಲ್ಲಿ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ರೈತರ ಅಧಿವೇಶನದಲ್ಲಿ ರೈತರ ಸಮಸ್ಯೆ ನಂತರದ ವಿಷಯವಾಗಿ ನಿರುದ್ಯೋಗದ ಬಗ್ಗೆ ಉಲ್ಲೇಖೀಸಿದ್ದಾರೆ. ಆದರೆ, ಯಾವ ಪಕ್ಷವೂ ಉದ್ಯೋಗಾವಕಾಶ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಿಲ್ಲ. ಮಾರ್ಚ್‌ 25ಕ್ಕೆ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಮತ್ತೆ ಸೇರುತ್ತೇವೆ. ಅಲ್ಲಿ ನಮ್ಮ ಓಟು ಯಾರಿಗೆ ಎಂದು ತಿಳಿಸುತ್ತೇವೆ ಎಂದು ಹೇಳಿದರು.

Advertisement

ವೇದಿಕೆಯ ಸಂಚಾಲಕ ಮುತ್ತುರಾಜ್‌ ಮಾತನಾಡಿ, ಭಾರತ ಸಂಪನ್ಮೂಲ ಭರಿತ ದೇಶವಾಗಿದೆ. ಇಲ್ಲಿರುವ ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಬೇಕಾದಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಆದರೆ, ನಮ್ಮನ್ನು ಆಳುವ ಸರ್ಕಾರಗಳು ಶ್ರೀಮಂತರನ್ನು ಶ್ರೀಮಂತರನ್ನಾಗಿಸುವ, ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ಕೆಲಸ ಮಾಡುತ್ತಿವೆ. ದೇಶದ ಸಂಪನ್ಮೂಲ ಉಳ್ಳವರ ಪಾಲಾಗುತ್ತಿದೆ. ಸಂಪನ್ಮೂಲ ಸಮರ್ಪಕವಾಗಿ ಬಳಕೆಯಾದರೆ ನಿರುದ್ಯೋಗ ನಿರ್ಮೂಲನೆಯಾಗಲಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್‌, ಪ್ರಾಧ್ಯಾಪಕ ಪ್ರೊ.ಅಮಿತ್‌ ಬಾಸೋಲೆ, ರೈತ ಸಂಘದ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ, ಬರಹಗಾರ ಕೆ.ಪಿ.ಸುರೇಶ್‌, ವೇದಿಕೆ ಸಂಚಾಲಕ ಸರೋವರ್‌ ಬೆಂಕಿಕೆರೆ, ಸಹ ಪ್ರಾಧ್ಯಾಪಕ ಪ್ರೊ.ನಾಗೇಗೌಡ ಕೀಲಾರ, ಜ.ಬೋ.ಮಂಜುನಾಥ, ಪುಟ್ಟಸ್ವಾಮಿ, ಡಾ.ಸ್ವಾಮಿ, ಮಹೇಶ್‌ ಮೊದಲಾದವರು ಇದ್ದರು.

ಯುವಜನ ಪ್ರಣಾಳಿಕೆ: ಕೃಷಿಗೆ ಆದ್ಯತೆ ನೀಡುವ ಮೂಲಕ ಹೊಸ ಉದ್ಯೋಗ ಸೃಷ್ಟಿಗೆ ಅವಕಾಶವಿದೆ. ಸಮಾನ ವೇತನ ಹಾಗೂ ಸೇವಾ ಭದ್ರತೆ ಒದಗಿಸುವುದು, ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಂದು ಲಕ್ಷಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಸ್ವ ಉದ್ಯೋಗ ಮಾಡುವವರಿಗೆ ಸಾಲ ಸೌಲಭ್ಯ ನೀಡಬೇಕು ಎಂಬುದು ಸೇರಿ ಹಲವು ಅಂಶಗಳನ್ನು ಒಳಗೊಂಡಿರುವ ಯುಜನ ಪ್ರಣಾಳಿಕೆಯನ್ನು ಸಮಾವೇಶದಲ್ಲಿ ಬಿಡುಗಡೆ ಮಾಡಲಾಯಿತು.

ಪ್ರಣಾಳಿಕೆ ಸಿದ್ಧತಾ ಸಭೆಯಲ್ಲಿ ಚರ್ಚೆ: “ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆಯ ಸಿದ್ಧತಾ ಸಮಿತಿ ಸಭೆಯು ಫೆ.25ರಂದು ನಡೆಯಲಿದೆ. ಆ ಸಭೆಯಲ್ಲಿ ಯುವಜನರ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಚರ್ಚಿಸಲಾಗುತ್ತದೆ. ನಂತರ ಮಾರ್ಚ್‌ ಅಂತ್ಯಕ್ಕೆ ಪ್ರಣಾಳಿಕೆ ಬಿಡುಗಡೆ ಮಾಡಲಾಗುತ್ತದೆ,’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

“ಸಮಾನ ಕೆಲಸಕ್ಕೆ ಸಮಾನ ವೇತನ, ಗುತ್ತಿಗೆ ಕಾರ್ಮಿಕರಿಗೆ ಸೇವಾ ಭದ್ರತೆ ಸೇರಿ ಹಲವು ಮುಖ್ಯವಾದ ಹಾಗೂ ನ್ಯಾಯಯುತವಾದ ಬೇಡಿಕೆಯನ್ನು ಯುವಜನತೆ ಮಂಡಿಸಿದ್ದಾರೆ. ನಮ್ಮ ಪಕ್ಷದ ಪ್ರಣಾಳಿಕೆ ಸಿದ್ಧತಾ ಸಮಿತಿಯೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ. ರಾಜ್ಯ ಸರ್ಕಾರ ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ಉದ್ಯೋಗ ಸೃಷ್ಟಿ ಮಾಡುತ್ತಿದೆ. ಸರ್ಕಾರದಿಂದಲೇ ಎಲ್ಲ ಉದ್ಯೋಗ  ಸೃಷ್ಟಿ ಅಸಾಧ್ಯ. ಈ ನಿಟ್ಟಿನಲ್ಲಿ ಸಮರ್ಪಕವಾದ ಉದ್ಯೋಗ ನೀತಿ ರೂಪಿಸುವ ಅಗತ್ಯವಿದೆ,’ ಎಂದು ಗುಂಡೂರಾವ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next