Advertisement

ಮರಳಿಗೆ ನೀಡಿ ಮರುಜೀವ

02:53 PM Sep 30, 2017 | |

ನಗರ : ಮರಳಿನ ಬಗ್ಗೆ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ. ಈ ಬಗ್ಗೆ ಸರಿಯಾದ ನೀತಿ ಜಾರಿಯಾಗದ ಕಾರಣ ಬಲಿಷ್ಠರು ಅಕ್ರಮ ಮರಳುಗಾರಿಕೆ ನಡೆ ಸುತ್ತಿದ್ದಾರೆ. ಆದರೆ ಜನಸಾಮಾನ್ಯರು ಮನೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿ, ಕೈಚೆಲ್ಲಿ ಕೂತಿ ದ್ದಾರೆ. ರೈತರ ಹಿತದೃಷ್ಟಿಯಿಂದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಿರ್ಣಯ ಕೈಗೊಳ್ಳಬೇಕು ಎಂಬ ಆಗ್ರಹ ಪುತ್ತೂರು ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಕೇಳಿಬಂತು. 

Advertisement

ಅಕ್ರಮ ಮರಳು ಸಾಗಾಟ
ಅಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ದಿನೇಶ್‌ ಮೆದು, ಮರಳಿಗೆ ಸಿಆರ್‌ಝಡ್‌ ಹಾಗೂ ನಾನ್‌ ಸಿಆರ್‌ಝಡ್‌ ಎಂಬ ಎರಡು ನೀತಿ ಜಾರಿಗೆ ತರಲಾಗಿದೆ. ಮೊದಲು ರಾಜಸ್ವ ಪಾವತಿ ಮಾಡಿ, ಮರಳು ತೆಗೆಯುತ್ತಿದ್ದರು. ಆದರೆ ಈಗ ಮರಳಿಗೆ ನಿರ್ಬಂಧ ಹೇರಲಾಗಿದೆ. ಆದ್ದರಿಂದ ರಾತ್ರಿ ವೇಳೆ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ. ರಾತ್ರಿಯೇ ಮಡಿಕೇರಿ, ಬೆಂಗಳೂರಿಗೆ ಸಾಗಾಟವೂ ನಡೆಯುತ್ತಿದೆ. ಪರಿಣಾಮ 7 ಸಾವಿರ ರೂ.ಗೆ ಸಿಗುತ್ತಿದ್ದ ಮರಳಿನ ಬೆಲೆ,  15 ಸಾವಿರದಿಂದ 30 ಸಾವಿರ ರೂ. ವರೆಗೆ ತಲುಪಿದೆ. ಒಂದು ಕಡೆಯಿಂದ ಸರಕಾರಕ್ಕೆ ರಾಜಸ್ವವೂ ಇಲ್ಲ, ಜಿಲ್ಲೆಗೆ ಮರಳೂ ಇಲ್ಲ ಎಂಬಂತಾಗಿದೆ ಎಂದು ಆಪಾದಿಸಿದರು.

ಜಿಲ್ಲೆಗೆ ಎರಡು ಕಾನೂನು ?
ಎಪಿಎಂಸಿ ಅಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ಮಾತನಾಡಿ, ತಹಶೀಲ್ದಾರ್‌, ಕಂದಾಯ ನಿರೀಕ್ಷಕರನ್ನು ಕಳುಹಿಸಿ ಬೋರ್‌ವೆಲ್‌ ತೆಗೆಯುವುದನ್ನು ನಿಲ್ಲಿಸಿದ್ದಾರೆ. ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಬೋರ್‌ವೆಲ್‌ಗೆ ಅನುಮತಿ ಇದೆ. ಆದರೆ ಪುತ್ತೂರಿನಲ್ಲಿ ಮಾತ್ರ ಯಾಕಿಲ್ಲ. ಈ ಬಗ್ಗೆ ತಹಶೀಲ್ದಾರ್‌, ಸಹಾಯಕ ಆಯುಕ್ತರು ಮಾಹಿತಿ ನೀಡುವ ಅಗತ್ಯವಿದೆ ಎಂದು ವಿಷಯ ಪ್ರಸ್ತಾಪಿಸಿದರು. ಧ್ವನಿಗೂಡಿಸಿದ ಸದಸ್ಯರು, ರೈತರು ಬೋರ್‌ವೆಲ್‌ ತೆಗೆಯಲು ಅಡ್ಡಿಯಾಗಿದೆ. ಬೇಸಗೆಯಲ್ಲಿ ನೀರಿಗೆ ಏನು ಮಾಡುವುದು ಎನ್ನುವುದೇ ಚಿಂತೆಯಾಗಿದೆ. ಗ್ರಾ.ಪಂ.ನಿಂದ ಎನ್‌ಓಸಿ ನೀಡಲಾಗುತ್ತದೆ. ಆದರೆ ಕಂದಾಯ ಇಲಾಖೆ ಅಡ್ಡಿಪಡಿಸುತ್ತದೆ. ಬೆಳ್ತಂಗಡಿ ತಾಲೂಕಿನಲ್ಲಿ ಬೋರ್‌ವೆಲ್‌ಗೆ ನೇರ ಅನುಮತಿಯನ್ನೇ ನೀಡುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಸಭೆಯಲ್ಲಿ  ಆಕ್ರೋಶ
ಸಭೆಗೆ ಉತ್ತರಿಸಿದ ಅಧ್ಯಕ್ಷರು, ಈ ಬಗ್ಗೆ ಗಣಿ ಇಲಾಖೆಗೆ ಮಾತನಾಡಲಾಗುವುದು ಎಂದರು. ಮಧ್ಯಪ್ರವೇಶಿಸಿದ ಸದಸ್ಯ ದಿನೇಶ್‌ ಮೆದು, ಈ ಬಗ್ಗೆ ತಹಶೀಲ್ದಾರ್‌ ಬಳಿ ಮಾತನಾಡಿದ್ದೇನೆ. ಅವರು ಗಣಿ ಇಲಾಖೆ ಬಳಿ ಮಾತನಾಡಿದಾಗ, ಜಲ ಸಮೃದ್ಧಿ ಇಲಾಖೆ ಕಡೆ ಕೈತೋರಿಸಿದ್ದಾರೆ. ಒಟ್ಟಿನಲ್ಲಿ ತಹಶೀಲ್ದಾರ್‌ ಬಳಿಯೂ ಸೂಕ್ತ ಮಾಹಿತಿ ಇಲ್ಲ ಎಂದರು. ಉಪಾಧ್ಯಕ್ಷ ಬಾಲಕೃಷ್ಣ  ಬಾಣಾಜಾಲು ಮಾತನಾಡಿ, ಜಲ ಸಮೃದ್ಧಿ ಇಲಾಖೆ ಜತೆ ಮಾತನಾಡಿದಾಗ, ಕಂದಾಯ ಇಲಾಖೆ ಅಡ್ಡಿಪಡಿಸುತ್ತಿದೆ ಎನ್ನುತ್ತಾರೆ. ಹಾಗೆಂದು ಕಂದಾಯ ಇಲಾಖೆ ಬಳಿ ಕೇಳಿದಾಗ, ಅವರಿಗೆ ಮಾಹಿತಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷರು ಮಾತನಾಡಿ, ಈ ಬಗ್ಗೆ ತಹಶೀಲ್ದಾರ್‌, ಸಹಾಯಕ ಆಯುಕ್ತ ಸರಿಯಾದ ಮಾಹಿತಿ ನೀಡುವಂತೆ ಕೇಳಿ ಕೊಳ್ಳಲಾಗುವುದು ಎಂದು ಚರ್ಚೆಗೆ ತೆರೆ ಎಳೆದರು.

Advertisement

ಭಾಗಿದಾರರ ಸಭೆ
ಭಾಗಿದಾರರಿಗೆ ಶಿಕ್ಷಣ ನೀಡಲು ಸರಕಾರದಿಂದ ಸುತ್ತೋಲೆ ಕಳುಹಿಸಲಾಗಿದೆ. ಈಗಾಗಲೇ ಹಲವು ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇನ್ನು 30 ಕಾರ್ಯಕ್ರಮ ಬಾಕಿಯಾಗಿದೆ. ಇದನ್ನು ಅ. 1ರಿಂದ 30ರ ವರೆಗೆ ವಿವಿಧ ಗ್ರಾ.ಪಂ.ನಲ್ಲಿ ಏರ್ಪಡಿಸಲಾಗುವುದು. ಎಪಿಎಂಸಿಯ, ಮಾರುಕಟ್ಟೆ, ವ್ಯವಹಾರ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಮಾತ್ರವಲ್ಲ ಮರಳು ನೀತಿ ಮತ್ತು ಬೋರ್‌ವೆಲ್‌ ಬಗ್ಗೆಯೂ ಕಂದಾಯ ಇಲಾಖೆಯಿಂದ ಇದೇ ಸಭೆಯಲ್ಲಿ  ಸರಿಯಾದ ಮಾಹಿತಿ ನೀಡುವಂತೆ ಕೇಳಿ ಕೊಳ್ಳಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಬೂಡಿಯಾರ್‌ ರಾಧಾಕೃಷ್ಣ ರೈ ಹೇಳಿದರು.

ಪರದಾಟ
ಸಹ್ಯಾದ್ರಿ ಹಿಂಭಾಗದಲ್ಲಿ  ದೊಡ್ಡ ಮಟ್ಟದ ಡ್ರಜ್ಜಿಂಗ್‌ ಬಳಸಿ ಮರಳು ತೆಗೆಯ ಲಾಗುತ್ತಿದೆ. ಸರಕಾರದ ಯೋಜನೆಗಳನ್ನು ಪಡೆದುಕೊಂಡ ರೈತರು, ಮನೆ ಕಟ್ಟಲಾಗದೇ ಪರದಾಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ಜನ ಸಾಮಾನ್ಯರಿಗೆ ಮರಳು ಸಿಗುವಂತೆ ಕ್ರಮ ಕೈಗೊಳ್ಳುವಂತಾಗಬೇಕು. ಈ ಬಗ್ಗೆ ನಿರ್ಣಯ ಕೈಗೊಂಡು, ಜಿಲ್ಲಾಡಳಿತಕ್ಕೆ ಕಳುಹಿಸಿಕೊಡಬೇಕು ಎಂದು ಆಗ್ರಹಿಸಿದರು. ರೈತರ, ಕೃಷಿಕರ ಹಿತ ದೃಷ್ಟಿಯಿಂದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಪಿಎಂಸಿ ನಿರ್ಣಯ ಕೈಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next