Advertisement

ರಾಜಿ ಸಂಧಾನಕ್ಕೆ ಆದ್ಯತೆ ಕೊಡಿ

02:41 PM Mar 12, 2022 | Team Udayavani |

ಹೊನ್ನಾಳಿ: ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಬಹುದಾದ ಪ್ರಧಾನ ಸಿವಿಲ್‌ ನ್ಯಾಯಾಲಯದ ಬಾಕಿ ಇರುವ 1160 ಹಾಗೂ ಹೆಚ್ಚುವರಿ ನ್ಯಾಯಾಲಯದ 700 ಪ್ರಕರಣಗಳಿವೆ ಎಂದು ಹೊನ್ನಾಳಿ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶಾರದಾದೇವಿ ಸಿ.ಹಟ್ಟಿ ಹೇಳಿದರು.

Advertisement

ಮಾ. 12 ರಂದು ನಡೆಯಲಿರುವ ಲೋಕ ಅದಾಲತ್‌ ಹಿನ್ನೆಲೆಯಲ್ಲಿ ಕೋರ್ಟ್‌ ಸಭಾಂಗಣದಲ್ಲಿ ವಕೀಲರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಬಾರಿ 350 ಪ್ರಕರಣಗಳು ಲೋಕ ಅದಾಲತ್‌ನಲ್ಲಿ ಇತ್ಯರ್ಥವಾಗಿವೆ. ಈ ವರ್ಷವೂ ಇತ್ಯರ್ಥವಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳುವ ಹಾಗೂ ಇಲಾಖಾವಾರು ಕಕ್ಷಿದಾರರಿಗೆ ಪ್ರಚಾರಪಡಿಸುವ ಬಗ್ಗೆ ವಿವರಿಸಿದರು.

ಕಕ್ಷಿದಾರರು ವಕೀಲರ ಮುಖಾಂತರ ಅಥವಾ ಅವರುಗಳೇ ಖುದ್ದು ನ್ಯಾಯಾಲಯಕ್ಕೆ ಬಂದು ರಾಜಿ ಸಂಧಾನದಲ್ಲಿ ಭಾಗವಹಿಸಬಹುದಾಗಿದೆ. ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಕರ್ತವ್ಯ ಲೋಪ ಎಸಗುವ ಪಿಡಿಒ, ಅಧಿಕಾರಿಗಳ ಬಗ್ಗೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬಹುದಾಗಿದೆ. ಶಿಕ್ಷಣ ಇಲಾಖೆಯೇ ವಿದ್ಯಾರ್ಥಿಗಳ ಜನ್ಮ ದಿನಾಂಕದ ದಾಖಲೆ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಸಹಕರಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್‌ ನಿಂದ ಮುಚ್ಚಲಾಗಿದ್ದ ತಹಶೀಲ್ದಾರ್‌ ಕಚೇರಿಯಲ್ಲಿನ ಲೀಗಲ್‌ ಹೆಡ್‌ ಕ್ಲಿನಿಕ್‌ ಎಂಬ ಮಾಹಿತಿ ಸೌಲಭ್ಯವನ್ನು ಕಾನೂನು ಸಲಹೆಗಾರರ ಮೂಲಕ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಹೊನ್ನಾಳಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಅರ್ಚನಾ ಕೆ.ಉನ್ನಿತಾನ್‌ ಮಾತನಾಡಿ, ಲೋಕ ಅದಾಲತ್‌ನಲ್ಲಿ ಪರಸ್ಪರ ಕಕ್ಷಿದಾರರು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ. ಅಂತಹ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಪಾವತಿಸಿರುವ ಶುಲ್ಕವನ್ನು ಮರುಪಾವತಿಸಲಾಗುತ್ತದೆ. ಕಕ್ಷಿದಾರರ ಚೆಕ್‌ ಅಮಾನ್ಯ, ಬ್ಯಾಂಕ್‌ ಸಾಲ, ಆಸ್ತಿ ಪ್ರಕರಣ, ಭೂಸ್ವಾಧೀನ, ಜೀವನಾಂಶ ಇನ್ನಿತರೆ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.

ನ್ಯಾಮತಿ ಠಾಣೆಗೆ ಸಂಬಂಧಿಸಿ ರಸ್ತೆ ವಿವಾದ 12, ಒತ್ತುವರಿ 9, ಪಿಟಿ-40, ಗ್ಯಾಂಬ್ಲಿಂಗ್‌ 21, ಮರಳು 27, ಐಪಿಸಿ 19, ಇತರೆ ಐಪಿಸಿ 30 ಪ್ರಕರಣಗಳು ಬಾಕಿಯಿರುವುದಾಗಿ ಎಎಸ್‌ಐ ಚಂದ್ರು ಮಾಹಿತಿ ನೀಡಿದರು. ತಹಶೀಲ್ದಾರ್‌ ರಶ್ಮಿ ಹಾಲೇಶ್‌, ನ್ಯಾಮತಿ ಶಿರಸ್ತೇದಾರ್‌ ಚಂದ್ರಶೇಖರ್‌, ಹೊನ್ನಾಳಿ ತಾಲೂಕು ಪಂಚಾಯತ್‌ ವ್ಯವಸ್ಥಾಪಕ ಎ.ಎಂ. ಶಂಭುಲಿಂಗಯ್ಯ, ವಕೀಲರ ಸಂಘದ ಅಧ್ಯಕ್ಷ ಉಮಾಕಾಂತ್‌ ಜೋಯ್ಸ, ಉಪಾಧ್ಯಕ್ಷ ಬಿ.ಉಮೇಶ್‌, ಕಾರ್ಯದರ್ಶಿ ವೈ.ಜೆ. ರಾಮಚಂದ್ರ, ಖಜಾಂಚಿ ನಾಗರಾಜ್‌ ಸೇರಿದಂತೆ ವಕೀಲರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next