Advertisement

ವಶಪಡಿಸಿಕೊಂಡ ಅಕ್ರಮ ಮರಳು ಲೆಕ್ಕ ತಿಂಗಳೊಳಗೆ ಕೊಡಿ: ಮೊಹಮ್ಮದ್‌ ಮೋನು

02:21 PM Aug 08, 2019 | Team Udayavani |

ಮಹಾನಗರ: ಅಕ್ರಮ ಗಣಿಗಾರಿಕೆ ಹೆಸರಲ್ಲಿ ಕಳೆದ ಒಂದು ವರ್ಷ ಎಷ್ಟು ಪ್ರಮಾಣದ ಮರಳು ಮುಟ್ಟುಗೋಲು ಹಾಕಿದೆ? ಇವುಗಳಲ್ಲಿ ಸರಕಾರಿ ಕೆಲಸಗಳಿಗೆ ಎಷ್ಟು ಬಳಕೆಯಾಗಿದೆ? ಬೊಕ್ಕಸಕ್ಕೆ ಎಷ್ಟು ಹಣ ಸಂದಾಯವಾಗಿದೆ ಎಂಬ ಮಾಹಿತಿಯನ್ನು ತಾಲೂಕು ಪಂಚಾಯತ್‌ಗೆ ಒಂದು ತಿಂಗಳೊಳಗೆ ನೀಡಬೇಕು ಎಂದು ದ.ಕ. ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಂಗಳೂರು ತಾ.ಪಂ. ಅಧ್ಯಕ್ಷ ಮೊಹಮ್ಮದ್‌ ಮೋನು ಸೂಚನೆ ನೀಡಿದ್ದಾರೆ.

Advertisement

ನಗರದ ಜಿಲ್ಲಾ ಪಂಚಾಯುತ್‌ ಸಭಾಂ ಗಣದಲ್ಲಿ ಬುಧವಾರ ನಡೆದ 17ನೇ ಮಂಗಳೂರು ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ಸದಸ್ಯ ಸುನಿಲ್ ಅವರು ವಿಷಯ ಪ್ರಸ್ತಾವಿಸಿ, ತನ್ನ ಖಾಸಗಿ ಜಾಗದಲ್ಲಿ ಕಲ್ಲು ತೆಗೆಯುತ್ತಿದ್ದಂತಹ ವ್ಯಕ್ತಿಯೊಬ್ಬರಿಗೆ ಗಣಿ ಇಲಾಖೆಯ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಅಲ್ಲದೆ ಯಂತ್ರೋಪಕರಣಗಳನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ ಎಂದರು. ಮತ್ತೋರ್ವ ಸದಸ್ಯ ಸಮದ್‌ ಮಾತನಾಡಿ, ಇಲಾಖೆಯು ಕಾನೂನು ಪಾಲನೆ ಮಾಡುತ್ತಿಲ್ಲ. ಗಣಿ ಇಲಾಖೆ ವಶಪಡಿಸಿದ ಮರಳು ಬಿಲ್ಡರ್‌ಗಳ ಪಾಲಾಗುತ್ತಿದೆ ಎಂದು ಆರೋಪಿಸಿದರು.

ಮೊಹಮ್ಮದ್‌ ಮೋನು ಮಾತನಾಡಿ, ತುಂಬೆಯಲ್ಲಿ ನಡೆಸುವ ಡ್ರಜ್ಜಿಂಗ್‌ಗೆ ಸಂಬಂಧಪಟ್ಟ ಟೆಂಡರ್‌ ಮಾಹಿತಿಯನ್ನು ಕೂಡ ತಾ.ಪಂ.ಗೆ ಒಂದು ತಿಂಗಳೊಳಗಾಗಿ ನೀಡಬೇಕು ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಡಾ| ಸುಷ್ಮಾ ಉತ್ತರಿಸಿ, ಯಾವುದೇ ಪ್ರದೇಶದಲ್ಲಿ ಅನುಮತಿ ಪಡೆಯದೆ ಗಣಿಗಾರಿಕೆ ನಡೆಸಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಾವು ಕಾನೂನಿನ ಪ್ರಕಾರ ಕೆಲಸ ನಿರ್ವಹಿಸುತ್ತಿದ್ದೇವೆ. ಅಕ್ರಮ ಮರಳುಗಾರಿಕೆ ನಡೆಯುವ ಪ್ರದೇಶಗಳಿಗೆ ದಾಳಿ ನಡೆಸಿ ಮರಳು ವಶಪಡಿಸಿಕೊಳ್ಳಲಾಗುತ್ತಿದೆ. ಈ ಮರಳನ್ನು ಯಾರ್ಡ್‌ಗೆ ಕಳುಹಿಸಲಾಗುತ್ತಿದ್ದು, ನಮಗೆ ಈಗಾಗಲೇ ಇರುವ ಆದೇಶದ ಪ್ರಕಾರ ಈ ಮರಳನ್ನು ಸರಕಾರಿ ಕೆಲಸಗಳಿಗೆ ಬಳಕೆ ಮಾಡುತ್ತೇವೆ ಎಂದರು.

Advertisement

ಗುರುಪುರ ಹಿಂದೂ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣ ಶಾಲೆಯನ್ನು ಮುಚ್ಚಲಾಗಿದೆ ಎಂದು ಸದಸ್ಯ ಸಚಿನ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಂಬರುವ ಶೈಕ್ಷಣಿಕ ವರ್ಷದಿಂದ ಗುರುಪುರದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯನ್ನು ತೆರೆಯಲಾಗುವುದು ಎಂದು ಅವರು ಭರವಸೆ ನೀಡಿದರು.

ವಿದ್ಯುತ್‌ ಸಂಪರ್ಕ ಕಲ್ಪಿಸಿ
ಗಂಗಾಕಲ್ಯಾಣ ಯೋಜನೆಯ ಮುಖೇನ ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಕೊರೆಸಿದ ಕೊಳವೆ ಬಾವಿಗಳಿಗೆ ಮೆಸ್ಕಾಂ ವಿದ್ಯುತ್‌ ಸಂಪರ್ಕ ಕಲ್ಪಿಸುವುದಿಲ್ಲ ಎಂದು ಆಡಳಿತ ಮತ್ತು ವಿಪಕ್ಷದ ಸದಸ್ಯರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಸದಸ್ಯ ನಾಗೇಶ್‌ ಶೆಟ್ಟಿ ಮಾತನಾಡಿ, ಕುಪ್ಪೆಪದವು ಗ್ರಾ.ಪಂ. ವ್ಯಾಪ್ತಿಯಲ್ಲಿ ಗಂಗಾಕಲ್ಯಾಣ ಯೋಜನೆಯಲ್ಲಿ ಎರಡು ಬೋರ್‌ವೆಲ್ ಕೊರೆದಿದ್ದು, ಗ್ರಾ.ಪಂ.ನಿಂದ ಎನ್‌ಒಸಿ ನೀಡಿದೆ. ಜೆ.ಇ. ಅವರು ಈಗಾಗಲೇ ಸ್ಥಳ ತನಿಖೆ ನಡೆಸಿದ್ದಾರೆ. ಆದರೂ ವಿದ್ಯುತ್‌ ಸಂಪರ್ಕವಿನ್ನೂ ನೀಡಿಲ್ಲ ಎಂದು ಸಭೆಯಲ್ಲಿ ತಿಳಿಸಿದರು.

ಈ ಬಗ್ಗೆ ಉತ್ತರಿಸಿದ ಮೆಸ್ಕಾಂ ಅಧಿಕಾರಿಗಳು, ಕುಡಿಯುವ ನೀರಿನ ಸ್ಥಾಪವರ 250 ಮೀಟರ್‌ ವ್ಯಾಪ್ತಿಯೊಳಗೆ ಯಾವುದೇ ನೀರಾವರಿ ಪಂಪ್‌ಸೆಟ್ಟುಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಅವಕಾಶವಿರುವುದಿಲ್ಲ. ಈ ಎರಡು ಕೊಳವೆಬಾವಿಯು 250 ಮೀಟರ್‌ ವ್ಯಾಪ್ತಿಯೊಳಗೆ ಇರುವುದರಿಂದ ವಿದ್ಯುತ್‌ ಸಂಪರ್ಕ ನೀಡಲು ಅವಕಾಶವಿಲ್ಲ ಎಂದರು.

ಉಪಾಧ್ಯಕ್ಷೆ ಪೂರ್ಣಿಮಾ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ರೀಟಾ ನೊರೋನ್ಹ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಜನಾರ್ದನ ಗೌಡ, ಸದಸ್ಯರಾದ ವಿನೋದ್‌, ಸುಚರಿತ ಶೆಟ್ಟಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸದಾನಂದ ಉಪಸ್ಥಿತರಿದ್ದರು.

ಅನುಮತಿ ಪಡೆಯದಿದ್ದರೆ ಕ್ರಮ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಡಾ| ಸುಷ್ಮಾ ಉತ್ತರಿಸಿ, ಯಾವುದೇ ಪ್ರದೇಶದಲ್ಲಿ ಅನುಮತಿ ಪಡೆಯದೆ ಗಣಿಗಾರಿಕೆ ನಡೆಸಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಾವು ಕಾನೂನಿನ ಪ್ರಕಾರ ಕೆಲಸ ನಿರ್ವಹಿಸುತ್ತಿದ್ದೇವೆ. ಅಕ್ರಮ ಮರಳುಗಾರಿಕೆ ನಡೆಯುವ ಪ್ರದೇಶಗಳಿಗೆ ದಾಳಿ ನಡೆಸಿ ಮರಳು ವಶಪಡಿಸಿಕೊಳ್ಳಲಾಗುತ್ತಿದೆ. ಈ ಮರಳನ್ನು ಯಾರ್ಡ್‌ಗೆ ಕಳುಹಿಸಲಾಗುತ್ತಿದ್ದು, ನಮಗೆ ಈಗಾಗಲೇ ಇರುವ ಆದೇಶದ ಪ್ರಕಾರ ಈ ಮರಳನ್ನು ಸರಕಾರಿ ಕೆಲಸಗಳಿಗೆ ಬಳಕೆ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next