Advertisement

“ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಿ’: ಹಾಕಿ ನಾಯಕಿ ರಾಣಿ ರಾಮ್‌ಪಾಲ್‌ ಒತ್ತಾಯ

11:49 PM Dec 03, 2019 | sudhir |

ಬೆಂಗಳೂರು: ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಂದು ಸುಟ್ಟು ಹಾಕಿದ ಪಾತಕಿಗಳ ವಿರುದ್ಧ ಭಾರತ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್‌ ಸಿಡಿದಿದ್ದಾರೆ. ಘೋರ ಕೃತ್ಯವನ್ನು ಖಂಡಿಸಿರುವ ಅವರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯೇ ನೀಡಿ’ ಎಂದು ಒತ್ತಾಯಿಸಿದ್ದಾರೆ.

Advertisement

ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗಾಗಿ ರಾಣಿ ರಾಮ್‌ಪಾಲ್‌ ನೇತೃತ್ವದ ಭಾರತ ತಂಡ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ದಲ್ಲಿ ಕಠಿನ ಅಭ್ಯಾಸ ನಡೆಸುತ್ತಿದೆ. ಈ ವೇಳೆ ಉದಯವಾಣಿ ನಡೆಸಿದ ಸಂದರ್ಶನದಲ್ಲಿ ಭಾರತ ತಂಡದ ಯಶಸ್ವಿ ನಾಯಕಿ ಮಾತನಾಡಿದರು. ಈ ವೇಳೆ ರಾಣಿ ಅವರು ತಮ್ಮ ವೃತ್ತಿ ಬದುಕು, ಒಲಿಂಪಿಕ್ಸ್‌ ತಯಾರಿ, ಬಾಲ್ಯದ ದಿನಗಳು, ತಂದೆಯ ತ್ಯಾಗ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆಯೂ ಪ್ರಸ್ತಾಪಿಸಿದರು.

ಜನತೆ ತಲೆ ತಗ್ಗಿಸುವಂತಹ ಕೃತ್ಯ
ಹೈದರಾಬಾದ್‌ನಲ್ಲಿ ಯುವತಿಯ ಮೇಲೆ ನಡೆದಿರುವ ದೌರ್ಜನ್ಯ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಮೊದಲು ಮನುಷ್ಯನನ್ನು ಮನುಷ್ಯ ಗೌರವಿಸುವ, ಪ್ರೀತಿಸುವ ಗುಣಗಳನ್ನು ಕಲಿಯಬೇಕು, ಮೃಗಗಳಂತೆ ವರ್ತಿಸುವವರಿಗೆ ಕಾನೂನಿನಡಿ ಕಠಿನ ಶಿಕ್ಷೆ ವಿಧಿಸಿದರೆ ಮುಂದೆಂದು ಇಂತಹ ತಪ್ಪು ನಡೆಯಲಾರದು’ ಎಂದು ರಾಣಿ ತಿಳಿಸಿದರು.

ಒಲಿಂಪಿಕ್ಸ್‌ ಕ್ವಾರ್ಟರ್‌ಫೈನಲ್‌ ಗುರಿ
ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ 12 ತಂಡಗಳು ಕೂಡ ನಮಗೆ ಕಠಿನ ಎದುರಾಳಿಗಳಾಗಿವೆ. ಯಾವುದೇ ತಂಡವನ್ನು ನಿರ್ಲಕ್ಷಿಸುವಂತಿಲ್ಲ. ಮೊದಲಿಗೆ ಕ್ವಾರ್ಟರ್‌ಫೈನಲ್‌ ತನಕ ಏರುವ ಯೋಜನೆ ಹಾಕಿಕೊಂಡಿದ್ದೇವೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. ಕೋಚ್‌ ಮರಿನ್‌ ನಮಗೆ ಉತ್ತಮ ತರಬೇತಿ ನೀಡುತ್ತಿದ್ದಾರೆ’ ಎಂದರು ರಾಣಿ.

ಶೇ.90 ಕಠಿನ ಶ್ರಮ, ಶೇ.10 ಅದೃಷ್ಟ:
14 ವರ್ಷ ಆಗಿದ್ದಾಗ ನಾನು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದೆ. ಅದು ನನ್ನ ಕಠಿನ ಪರಿಶ್ರಮದಿಂದ. ತಂಡದ ಹಿರಿಯ ಆಟಗಾರ್ತಿಯರಿಂದ ಸಾಕಷ್ಟು ಕಲಿತೆ, ಅದೇ ಅನುಭವ ಇಂದು ನನ್ನನ್ನು ತಂಡದ ನಾಯಕಿಯಾಗುವ ತನಕ ಕರೆದುಕೊಂಡು ಹೋಗಿದೆ. ಶೇ.90ರಷ್ಟು ಕಠಿನ ಶ್ರಮದಲ್ಲೇ ಯಾವಾಗಲೂ ನಂಬಿಕೆ ಇಟ್ಟಿದ್ದೇನೆ. ಶೇ.10ರಷ್ಟು ಮಾತ್ರ ಅದೃಷ್ಟದಲ್ಲಿ ನಂಬಿಕೆ ಹೊಂದಿದ್ದೇನೆ’ ಎಂದು ರಾಣಿ ಹೇಳಿದರು.

Advertisement

ಕಿತ್ತು ತಿನ್ನುವ ಬಡತನವಿತ್ತು
ನಾನಿನ್ನೂ ತುಂಬಾ ಚಿಕ್ಕವಳಾಗಿದ್ದೆ. ಅಪ್ಪ ತಳ್ಳು ಗಾಡಿ ಇಟ್ಟುಕೊಂಡು ದುಡಿದು ಗಳಿಸುತ್ತಿದ್ದ ಆದಾಯವೇ ಮನೆಗೆ ಆಧಾರವಾಗಿತ್ತು. ನನಗೆ ನೂರು ಕೊರತೆಗಳಿದ್ದರೂ ಅಪ್ಪನ ಪ್ರೀತಿಯಲ್ಲಿ ಎಂದಿಗೂ ಕೊರತೆಯಾಗಿರಲಿಲ್ಲ. ಹಾಕಿ ಕಲಿಯಲು ನನ್ನೂರು ಹರ್ಯಾಣದಲ್ಲಿ ಕೆಲವರಿಂದ ವಿರೋಧ ವ್ಯಕ್ತವಾಯಿತು. ಆದರೆ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ನನ್ನನು ಪ್ರೋತ್ಸಾಹಿಸಿದ ತಂದೆ-ತಾಯಿಯಿಂದ ನಾನು ಹಾಕಿ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಯಿತು. ಅವರ ಋಣ ತೀರಿಸಲು ಎಂದೂ ಸಾಧ್ಯವಿಲ್ಲ’ ಎನ್ನುವುದು ರಾಣಿ ಮನದಾಳದ ಮಾತು.

– ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next