Advertisement

ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳನ್ನು ನೀಡಿ

11:38 AM Feb 01, 2020 | Suhan S |

ಹುಬ್ಬಳ್ಳಿ: ನಾನು ನಿರ್ಗಮಿಸುವುದರೊಳಗೆ ಈ ದೇಶಕ್ಕೆ ಒಂದು ಕೋಟಿಗೂ ಹೆಚ್ಚು ಉತ್ತಮ ವಿದ್ಯಾರ್ಥಿಗಳನ್ನು ಕೊಟ್ಟು ಹೋಗುತ್ತೇನೆ, ಈ ನಿಟ್ಟಿನಲ್ಲಿ ನಾನು ಕಾರ್ಯೋನ್ಮುಖವಾಗಿದ್ದೇನೆ ಎಂದು ಯೋಗ ಋಷಿ ರಾಮದೇವ ಬಾಬಾ ಹೇಳಿದರು.

Advertisement

ಅರವಿಂದ ನಗರದಲ್ಲಿ ಶುಕ್ರವಾರ ನಡೆದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಶಿಕ್ಷಣ, ಸಂಶೋಧನೆ ಕುರಿತು ಹೆಚ್ಚಿನ ಒತ್ತು ನೀಡುತ್ತಿದ್ದು, ಮಕ್ಕಳ ಶ್ರೇಯೋಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಪಾಲಕರು ಉತ್ತಮ ಮಕ್ಕಳನ್ನು ಸಮಾಜಕ್ಕೆ ನೀಡಿದರೆ ಕುಟುಂಬದ ಗೌರವ ಹೆಚ್ಚಾಗುತ್ತದೆ ಎಂದರು. ನಮ್ಮ ಸಂಸ್ಥೆಯ ಉತ್ಪನ್ನಗಳನ್ನು ಜಗತ್ತಿನ 200 ದೇಶಗಳಲ್ಲಿ 100 ಕೋಟಿಗೂ ಅಧಿಕ ಜನರು ಬಳಸುತ್ತಾರೆ. ದೇಶದಲ್ಲಿ 50 ಕೋಟಿಗೂ ಹೆಚ್ಚು ಜನರು ಯೋಗ ಹಾಗೂ ಪತಂಜಲಿ ಉತ್ಪನ್ನಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಹೇಳಿದರು.

ದಿನನಿತ್ಯ ಮಕ್ಕಳಿಗೆ ಯೋಗ ಮಾಡುವಂತೆ ಪ್ರೇರೇಪಿಸಿ ಅವರನ್ನು ಹುರಿದುಂಬಿಸಿ. ಅದರಿಂದ ಅವರ ಆರೋಗ್ಯ ಸುಧಾರಿಸುತ್ತದೆ, ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಶೀರ್ಷಾಸನ, ಸರ್ವಾಂಗಾಸನ, ಹಲಾಸನ, ಚಕ್ರಾಸನ, ಪಶ್ಚಿಮೋತ್ತಾಸನವನ್ನು ಮಕ್ಕಳಿಗೆ ಪಾಲಕರು ಮಾಡಿಸಬೇಕು. ಮಕ್ಕಳ ಆರೋಗ್ಯದ ದೃಷ್ಟಿಯಲ್ಲಿ ಪಾಲಕರು ಜವಾಬ್ದಾರಿ ವಹಿಸಬೇಕೆಂದರು. ಮಕ್ಕಳಿಗೆ ಪ್ರತಿದಿನ ಯೋಗಾಭ್ಯಾಸ ಮಾಡಿಸುವುದರಿಂದ ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಒಂದು ಗಂಟೆ ದೈಹಿಕ ವ್ಯಾಯಾಮಾಯದಲ್ಲಿ ತೊಡಗಿಸಬೇಕು.

ಅದರಿಂದ ಅವರ ಬುದ್ಧಿಮತ್ತೆ ಹೆಚ್ಚುತ್ತದೆ. ಹೃದಯ ಗಟ್ಟಿಯಾಗುತ್ತದೆ. ಜೀವನದಲ್ಲಿ ಶಿಸ್ತು ಮತ್ತು ಏಕಾಗ್ರತೆ ಹೆಚ್ಚುತ್ತದೆ. ಇದರಿಂದ ಶಾಲೆಗಳಲ್ಲಿ ಮಕ್ಕಳು ಹೆಚ್ಚುಅಂಕ ಪಡೆಯಲು ಸಹಕಾರಿಯಾಗುತ್ತದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಮಕ್ಕಳಿಗೆ ಕೃತಕ ಆಹಾರ ನೀಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಜಿಮ್‌ ಬದಲಾಗಿ ಯೋಗದಿಂದ ಆರೋಗ್ಯ ವೃದ್ಧಿಸಿಕೊಳ್ಳಿ ಎಂದರು.

ಮಕ್ಕಳಿಗೆ ಮೊಬೈಲ್‌ ಶತ್ರುವಿದ್ದಂತೆ. ಹತ್ತನೇ ತರಗತಿ ಮಕ್ಕಳಿಗೆ ಮೊಬೈಲ್‌ ಯಾಕೆ ಬೇಕು. ಮೊಬೈಲ್‌ನಲ್ಲಿ ಆಟ ಯಾಕೆ ಆಡಬೇಕು. ಮೈದಾನದಲ್ಲಿ ಆಡಲಿ. ಅವರಿಗೆ ಯಾಕೆ ಅಂತರ್ಜಾಲದ ಅಗತ್ಯವಿದೆ ಎಂದು ಪ್ರಶ್ನಿಸಿದರು. ಜಗತ್ತಿನ ಎಲ್ಲ ದೇಶದವರೂ ಆಕಳ ಹಾಲು ಕುಡಿಯುತ್ತಾರೆ. ದೇಶಿ ಆಕಳ ಹಾಲು ಮತ್ತು ಡ್ರೈ ಫ್ರೂಟ್ಸ್‌ ತಿನ್ನಬೇಕು. ಕರಿದ ಪದಾರ್ಥ ಕೊಡಿಸಿ ಮಕ್ಕಳನ್ನು ಪಾಲಕರೇ ಅನಾರೋಗ್ಯಕ್ಕೆ ದೂಡುತ್ತಾರೆ ಎಂದರು.

Advertisement

ಸಚಿವ ಜಗದೀಶ ಶೆಟ್ಟರ ಮಾತನಾಡಿ, ಸಂಸ್ಥೆಯ ಸುವರ್ಣ ಮಹೋತ್ಸವ ಹಾಗೂ ಬಾಬಾ ರಾಮದೇವ ಆಗಮಿಸಿದ್ದು ಶಾಲೆಯ ಕಳೆ ಹೆಚ್ಚಿಸಿದೆ. ಹಳೇ ಹುಬ್ಬಳ್ಳಿಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸ ದಂಡಿನ ಕುಟುಂಬ ಮಾಡುತ್ತ ಬಂದಿದೆ. ಇಲ್ಲಿ ಕಲಿತ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಇಂತಹ ಇನ್ನು ಹತ್ತು ಹಲವು ಸಂಸ್ಥೆಗಳನ್ನು ದಂಡಿನ ಕುಟುಂಬದವರು ಬೆಳೆಸಲಿ ಎಂದರು.

ವಿವೇಕಾನಂದ ಸಂಸ್ಥೆಯ ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ, ಕನಕದಾಸ ಶಿಕ್ಷಣ ಸಂಸ್ಥೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ವಿವೇಕ ವಾಣಿ ಪತ್ರಿಕೆ ಬಿಡುಗಡೆ ಮಾಡಲಾಯಿತು. ಸಂಸ್ಥೆ ಅಧ್ಯಕ್ಷ ರವೀಂದ್ರನಾಥ ದಂಡಿನ ಅಧ್ಯಕ್ಷತೆ ವಹಿಸಿದ್ದರು. ಬಿ.ಎಫ್‌. ದಂಡಿನ,

ಉದ್ಯಮಿ ಆನಂದ ಸಂಕೇಶ್ವರ, ಗೋವಿಂದ ಜೋಶಿ, ನಂದಕುಮಾರ, ಶಾಂತಣ್ಣ ಕಡಿವಾಲ, ಮಹೇಶ ಟೆಂಗಿನಕಾಯಿ, ಭಾರತಿ ನಂದಕುಮಾರ, ಜಯತೀರ್ಥ ಕಟ್ಟಿ, ಗಿರಿಜಾ ಅಂಥೋನಿ, ಭವರಲಾಲ್‌ ಆರ್ಯ, ಶಿವಾನಂದ ಮುತ್ತಣ್ಣವರ, ರಘು ಅಕ್ಮಂಚಿ ಇದ್ದರು. ಅಪರ್ಣಾ ಮೂರ್ತಿ ಪ್ರಾರ್ಥಿಸಿದರು. ರವಿ ದಂಡಿನ ಸ್ವಾಗತಿಸಿದರು. ಅನಿಲ ವೈದ್ಯ, ಡಾ| ಅಮೃತ ಮಡಿವಾಳತರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next