Advertisement

ಸೀಬರ್ಡ್‌ ನಿರಾಶ್ರಿತರಿಗೆ ಉದ್ಯೋಗ ಕೊಡಿ

12:05 PM Sep 18, 2019 | Team Udayavani |

ಅಂಕೋಲಾ: ನೌಕಾನೆಲೆಗೆ ಭೂಮಿ ನೀಡಿ ನಿರಾಶ್ರಿತರಾದ ಕುಟುಂಬದ ಸದಸ್ಯರಿಗೆ ಉದ್ಯೋಗದ ಭರವಸೆ ನೀಡಿದ ಸರಕಾರ ಈಗ ಯಾವುದೇ ಉದ್ಯೋಗ ನೀಡಲಿಲ್ಲ. ಕೂಡಲೇ ನಿರಾಶ್ರಿತರಿಗೆ ಉದ್ಯೋಗವನ್ನು ಕಲ್ಪಿಸಿ. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಹೋರಾಟದ ಮಾರ್ಗ ಹಿಡಿಯಬೇಕಾಗುತ್ತದೆ ಎಂದು ನಿರಾಶ್ರಿತರ ಕುಟುಂಬದ ಎನ್‌.ವಿ. ನಾಯಕ ಎಚ್ಚರಿಸಿದರು.

Advertisement

ಅವರು ಮಂಗಳವಾರ ಪಟ್ಟಣದ ಹೊಟೇಲ್ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದೇಶ ರಕ್ಷಣೆಗಾಗಿ ನಾವು 35 ವರ್ಷಗಳ ಹಿಂದೆ ಸೀಬರ್ಡ್‌ ನೌಕಾನೆಲೆಗೆ ನಾವು ಉಳುಮೆ ಮಾಡಿ ಜೀವನ ನಡೆಸುತ್ತಿರುವ ಫಲವತ್ತಾದ ಭೂಮಿಯನ್ನು ಬಿಟ್ಟು ಕೊಟ್ಟಿದ್ದೇವೆ. ಅಂದು ಅಲ್ಪ ಪರಿಹಾರ ನೀಡಿ ಕೈ ತೊಳೆದುಕೊಂಡ ಸರಕಾರದ ವಿರುದ್ಧ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಇಂದು ಸಮರ್ಪಕ ಪರಿಹಾರವನ್ನು ಕಂಡಿದ್ದೇವೆ. ಆ ಸಂದರ್ಭದಲ್ಲಿ ನಿರಾಶ್ರಿತ ಕುಟುಂಬದ ಓರ್ವ ಸದಸ್ಯರಿಗೆ ಕೆಲಸ ಕೊಡಲಾಗುವುದು ಎಂದು ತಿಳಿಸಿದ್ದರು. ಇದುವರೆಗೂ ನಿರಾಶ್ರಿತರ ಕುಟುಂಬಕ್ಕೆ ಕೆಲಸವನ್ನು ಕೊಡದೆ ಸರಕಾರ ತಾರತಮ್ಯ ಮಾಡುತ್ತಿದೆ. ಫಲವತ್ತಾದ ಭೂಮಿಯನ್ನೇ ನಂಬಿ ಬದುಕು ನಡೆಸುತ್ತಿರುವ ಕೃಷಿಕರು ನಿರುದ್ಯೋಗಿಗಳಾಗಿ ಕೂಲಿ ನಾಲಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಇಂದು ಜಿಲ್ಲಾಡಳಿತ ಈ ಭಾಗದ ಗ್ರಾಮ ಲೆಕ್ಕಾಧಿಕಾರಿಗಳಿಂದ 18 ರಿಂದ 35 ವರ್ಷದವರ ಮಾಹಿತಿ ಪಡೆಯುತ್ತಿದ್ದಾರೆ. ನಿರಾಶ್ರಿತ ಕುಟುಂಬದ ಯುವಕರು ತಮಗೆ ಉದ್ಯೋಗ ದೊರೆಯಬಹುದೆಂಬ ಆಶಾಭಾವದಿಂದ ಇಲಾಖೆ ಕೇಳಿರುವ ಎಲ್ಲಾ ದಾಖಲೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಇತರೆಡೆ ನಿರಾಶ್ರಿತರಿಗೆ ನೀಡುವ ಹಾಗೆ ನಮ್ಮಲ್ಲೂ ಉದ್ಯೋಗವನ್ನು ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ರಾಮಚಂದ್ರ ನಾಯಕ, ಸಾಯಿಶ ನಾಯಕ, ಪ್ರದೀಪ ನಾಯಕ, ಹಿತೇಶ ಭಾವಿಕೇರಿ, ಅಮರ ಭಾವಿಕೇರಿ, ಮಂಜುನಾಥ ಹಟ್ಟಿಕೇರಿ, ವಿಶು ಭಾವಿಕೇರಿ, ರಾಜು ಹಟ್ಟಿಕೇರಿ, ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next