ದಾವಣಗೆರೆ: ವಿದ್ಯಾರ್ಥಿಗಳು ವ್ಯಾಸಂಗದ ಸಂದರ್ಭ ಕೇವಲ ಪಠ್ಯಕ್ಕಲ್ಲದೆ ಕೌಶಲ್ಯ ವೃದ್ಧಿಗೂ ಒತ್ತು ಕೊಡಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಕಿವಿಮಾತು ಹೇಳಿದ್ದಾರೆ. ಶನಿವಾರ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ಮ್ಯಾನೇಜ್‌ಮೆಂಟ್ ಉತ್ಸವ – 2017 ಉದ್ಘಾಟಿಸಿ, ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಹೆಚ್ಚು ಹೆಚ್ಚು ಕೌಶಲ್ಯ ಆಳವಡಿಸಿಕೊಂಡಂತೆ, ಅವರ ಮೌಲ್ಯವು ಸಹ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ. ನವಪೀಳಿಗೆಯ ಯುವಕರು ಹೆಚ್ಚು ಕೌಶಲ್ಯ ಆಳವಡಿಸಿಕೊಳ್ಳಬೇಕು ಎಂದರು.
ಸಾಮಾನ್ಯ ವಾಹನ ಮತ್ತು ಮೌಲ್ಯಾಧಾರಿತ ವಾಹನಗಳ ಬೆಲೆಗಳಲ್ಲಿ ಹೇಗೆ ವ್ಯತ್ಯಾಸವಿರುವುದೊ ಹಾಗೆಯೆ ವಿದ್ಯಾರ್ಥಿಗಳ ಮೂಲ ಕೌಶಲ್ಯ ಮತ್ತು ಮೌಲ್ಯಾಧಾರಿತ ಕೌಶಲ್ಯಗಳ ನಡುವೆ ಉದ್ಯೋಗಾವಕಾಶದಲ್ಲಿ ವ್ಯತ್ಯಾಸ ಇರಲಿದೆ ಎಂದ ಅವರು, ಅಲ್ಪ ತೃಪ್ತರಾಗಬಾರದು.
ತಾವು ಈಗಿರುವ ಉದ್ಯೋಗದಲ್ಲಿ ತೃಪ್ತಿ ಕಂಡುಕೊಂಡರೆ, ಮುಂದೆ ಹೆಚ್ಚಿನ ಉದ್ಯೋಗ ಅವಕಾಶಗಳು ಕೈತಪ್ಪಿ ಹೋಗುತ್ತವೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ| ಪಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಉಪ ಪ್ರಾಂಶುಪಾಲ, ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಆರ್. ಶ್ರೀಧರ್, ಕಾರ್ಯಕ್ರಮದ ಸಂಯೋಜಕ ಪ್ರೊ| ಪಿ.ಎಸ್. ಬಸವರಾಜ, ಕಾಲೇಜಿನ ಆಡಳಿತಾಧಿಕಾರಿ ವೈ.ಯು. ಸುಭಾಶ್‌ಚಂದ್ರ ಇತರರು ವೇದಿಕೆಯಲ್ಲಿದ್ದರು.