ಪುಣೆ, ಜೂ. 28: ಕೋವಿಡ್ ಸಮಸ್ಯೆಗಳ ಕುರಿತು ನಾವು ನಾಗರಿಕರಿಂದ ಹಲವು ದೂರುಗಳನ್ನು ಸ್ವೀಕರಿಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಸರಿಯಾದ ಮಾಹಿತಿಯನ್ನು ಅವರಿಗೆ ನೀಡುವ ಅಗತ್ಯವಿದೆ. ಸರಕಾರ ರೈತರಿಗೆ ಮಾರುಕಟ್ಟೆ ಬೆಲೆ,ಹವಾಮಾನ ಮಾಹಿತಿಯನ್ನು ಮೊಬೈಲ್ ಎಸ್‌ಎಂಎಸ್ ಮೂಲಕ ನೀಡಲಾಗುತ್ತದೆ. ಅದೇ ರೀತಿ ಕೋವಿಡ್ -19 ಸಂದರ್ಭದಲ್ಲಿ ಎಷ್ಟು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಉಳಿದಿವೆ ಎನ್ನುವ ಬಗ್ಗೆ ನಾಗರಿಕರಿಗೆ ಮೊಬೈಲ್ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಬೇಕು ಎಂದು ಎನ್ ಸಿಪಿಯ ಮುಖ್ಯಸ್ಥ ಶರದ್ ಪವಾರ್ ಸೂಚಿಸಿದ್ದಾರೆ.
ಪುಣೆಯ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಶರದ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಯಿತು. ಸಭೆಯಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ಗೃಹ ಸಚಿವ ಅನಿಲ್ ದೇಶ್ಮುಖ್, ಆರೋಗ್ಯ ಸಚಿವ ರಾಜೇಶ್ ಟೊಪೆ, ಮೇಯರ್ ಮುರ್ಲಿಧರ್ ಮೊಹೋಲ್, ಮನಪಾ ಆಯುಕ್ತ ಶೇಖರ್ ಗಾಯಕ್ವಾಡ್, ಹೆಚ್ಚುವರಿ ಆಯುಕ್ತ ರುಬೆಲ್ ಅಗರ್ವಾಲ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಮತ್ತು ಪುಣೆ ಜಿಲ್ಲಾ ಉಸ್ತುವಾರಿ ಸಚಿವ ಅಜಿತ್ ಪವಾರ್ ಅವರು ಮಾತನಾಡಿ, ಸೋಂಕು ಹರಡುವಿಕೆಯನ್ನು ತಡೆಯಲು ನೀಡಲಾದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅದಲ್ಲದೆ ಸ್ಥಳೀಯ ಆಡಳಿತ ಹಾಗೂ ಜನರ ಪ್ರತಿನಿಧಿಗಳನ್ನು ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಕೋವಿಡ್ ಯುದ್ಧದಲ್ಲಿ ಪುಣೆ ಮಹಾನಗರ ಪಾಲಿಕೆ ಆರ್ಥಿಕ ಹೊರೆ ಹೊತ್ತಿದೆ. ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ ಅನಂತರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಕಂಟೋನ್ಮೆಂಟ್ ಮಂಡಳಿಗೆ ಇನ್ನೂ ಒಂದು ಕೋಟಿ ರೂ. ನಿಧಿ ನೀಡಲಾಗುವುದು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ, ಖಂಡಿತವಾಗಿಯೂ ಕೊರೊನಾ ವಿರುದ್ದ ಯುದ್ಧವನ್ನು ಗೆಲ್ಲುತ್ತೇವೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪುಣೆ ಮನಪಾ ಆಯುಕ್ತ ಶೇಖರ್ ಗಾಯಕ್ವಾಡ್ ಅವರು ಮಾತನಾಡಿ ಪ್ರಸ್ತುತ ನಗರದಲ್ಲಿಯ ಕೊರೊನಾ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಲ್ಲಿಸಿದರು.ಈ ಮಧ್ಯೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶರದ್ ಪವಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.