ಬೆಳಗಾವಿ: ಲಾಕ್ ಡೌನ್ ನಿಂದ ಬಡ ಜನರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರ್ಕಾರವೂ ಬಡವರಿಗೆ ಪರಿಹಾರ ಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಕಾಂಗ್ರೆಸ್ ಶಾಸಕರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಲಾಕ್ ಡೌನ್ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ,ಅಲ್ಲಿನ ಬಡವರಿಗೆ ತಕ್ಷಣ ನಾಲ್ಕು ಸಾವಿರ ರೂ. ಪರಿಹಾರ ನೀಡಿದೆ. ಅದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಬಡವರಿಗೆ ಕನಿಷ್ಟ ಒಂದು ತಿಂಗಳ ಮಟ್ಟಿಗಾದರೂ ಪರಿಹಾರ ನೀಡಿದರೆ ಅನುಕೂಲವಾಗುತ್ತದೆ ಎಂದರು.
ಆಕ್ಸಿಜನ್ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಜನಸಂಖ್ಯೆ ಆಧಾರದ ಮೇಲೆ ಬೆಳಗಾವಿಗೆ ಹೆಚ್ಚು ಆಕ್ಸಿಜನ್ ಹಾಗೂ ಲಸಿಕೆಗಳ ಅಗತ್ಯವಿದೆ. ಹೀಗಾಗಿ, ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಪಕ್ಷಾತೀತವಾಗಿ ಎಲ್ಲರ ಸಭೆ ಕರೆಯಬೇಕು. ನಾವು ಸರ್ಕಾರಕ್ಕೆ ಅಗತ್ಯ ಸಹಕಾರ ಕೊಡಲು ಸಿದ್ದರಿದ್ದೇವೆ ಎಂದು ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಯಾಗಿದ್ದ ಜಿಲ್ಲಾಧಿಕಾರಿ ಹಿರೇಮಠ ಅವರು ಇಂದೇ ಮತ್ತೆ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ, ಸಮಸ್ಯೆಗಳನ್ನು ಸರಿಪಡಿಸಲು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಲಾಗಿದೆ ಎಂದರು. ಕೋವಿಡ್ ಮಹಾಮಾರಿಯನ್ನು ಕಟ್ಟಿಹಾಕಲು ಜಿಲ್ಲೆಯ ಜನರು ಸಹ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೋವಿಡ್ ನಿಂದ ಮೃತಪಟ್ಟವರು ಹಾಗೂ ಸ್ಮಶಾನದಲ್ಲಿ ಸೋಂಕಿತರ ಶವ ಸಂಸ್ಕಾರವಾಗುತ್ತಿರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅದನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್, ರೆಮ್ ಡಿಸಿವಿರ್ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಹೆಚ್ಚಿಗೆ ಪೂರೈಕೆ ಮಾಡುವಂತೆ ಸೂಚನೆ ನೀಡಿದ್ದು, ಅವರು ತಕ್ಷಣ ಸರಿಪಡಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಜಿಲ್ಲೆಯಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮರ್ಥ್ಯ ಇದ್ದರೂ, ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಆಕ್ಸಿಜನ್ ಇರುವ ಕಡೆಯಿಂದ ಸದ್ಯ ಆಮದು ಮಾಡಿಕೊಳ್ಳುವುದು ಸೂಕ್ತ ಎಂದರು.
ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ್ ಉಪಸ್ಥಿತರಿದ್ದರು.