Advertisement

ಹುತ್ತಕ್ಕೆ ಹಾಲೆರೆಯದೆ ಮಕ್ಕಳಿಗೆ ನೀಡಿ: ಶಿಮುಶ

02:41 PM Jul 29, 2017 | |

ಚಿತ್ರದುರ್ಗ: ನಿರ್ಜಿವ ವಸ್ತುಗಳಾದ ನಾಗರಕಲ್ಲು, ಹುತ್ತಕ್ಕೆ ಹಾಲೆರೆಯದೆ ರೋಗಿಗಳಿಗೆ, ಬಡವರಿಗೆ, ಶಾಲಾ ಮಕ್ಕಳಿಗೆ ವಿತರಿಸುವ ಮೂಲಕ ನಾಗರಪಂಚಮಿಯನ್ನು ಬಸವ ಪಂಚಮಿಯಾಗಿ ಹಾಗೂ ಹಾಲುಣಿಸುವ ಹಬ್ಬವನ್ನಾಗಿ ಆಚರಿಸಬೇಕು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು
ಹೇಳಿದರು.

Advertisement

ಇಲ್ಲಿನ ಬಸವಕೇಂದ್ರ ಶ್ರೀ ಮುರುಘಾಮಠ ಹಾಗೂ ರೋಟರಿ ಕ್ಲಬ್‌ ಚಿತ್ರದುರ್ಗ ಸಹಯೋಗದಲ್ಲಿ ಪಿ ಆ್ಯಂಡ್‌ ಟಿ ಕ್ವಾಟ್ರರ್ಸ್‌ ಹಿಂಭಾಗದ ಮೈಲಾರಲಿಂಗೇಶ್ವರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ನಡೆದ ನಾಗರಪಂಚಮಿ ನಿಮಿತ್ತ ಶಾಲಾ ಮಕ್ಕಳಿಗೆ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಡಿನ ಹಲವು ಸಂಘಟನೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಆರೋಗ್ಯಕರ ಬೆಳವಣಿಗೆ. ಬಹಳಷ್ಟು ಜನರು ಹಾಲನ್ನು ಮಣ್ಣು ಪಾಲು ಮಾಡುತ್ತಾರೆ. ಪೌಷ್ಟಿಕವಾದ ಈ ಹಾಲನ್ನು ಮಕ್ಕಳಿಗೆ ನೀಡಬೇಕು. ಸರ್ಕಾರ ಅನ್ನಭಾಗ್ಯದ
ಜೊತೆಗೆ ಕ್ಷೀರಭಾಗ್ಯ ಕೊಟ್ಟಿರುವುದು ಒಳ್ಳೆಯ ಕಾರ್ಯವಾಗಿದೆ. ಇದರಿಂದ ಮಕ್ಕಳಿಗೆ ಪೌಷ್ಟಿಕಾಂಶ ದೊರೆಯುತ್ತದೆ ಎಂದರು.

ಶಿವಮೊಗ್ಗ ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಭಕ್ತಿಯಿಂದ ಸ್ವೀಕರಿಸುವ ಪ್ರಸಾದ ಹಾಳಾಗಬಾರದು. 25-30ವರ್ಷಗಳಿಂದ ಶ್ರೀಗಳು ಈ ವಿಚಾರವಾಗಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು. ನಿವೃತ್ತ ಐಎಎಸ್‌ ಅಧಿಕಾರಿ ಕೆ. ಅಮರನಾರಾಯಣ ಮಾತನಾಡಿ, ಯಾವುದು ಹಾಲನ್ನು ಕುಡಿಯುವುದಿಲ್ಲವೋ ಅದಕ್ಕೆ ಹಾಲನ್ನು ನೀಡುತ್ತಿದ್ದೇವೆ. ಕ್ರಾಂತಿಕಾರಿ ಬದಲಾವಣೆ ಮಾಡುತ್ತಿರುವ ಶ್ರೀಗಳು ಅನುಪಯುಕ್ತ ಪದ್ಧತಿಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು. 

ಮುಸ್ಲಿಂ ಧರ್ಮಗುರು ಸರ್‌ಖಾಜಿ ಶಂಷುದ್ದೀನ್‌ ಮಾತನಾಡಿ, ಕಂದಾಚಾರಗಳನ್ನು ಆಚರಿಸದೆ ಹಾಲು ಕುಡಿಯದಿರುವ ಹಾವಿಗೆ ಬದಲಾಗಿ ಮಕ್ಕಳಿಗೆ, ರೋಗಿಗಳಿಗೆ, ಬಡವರಿಗೆ ಹಾಲನ್ನು ಕೊಡಿ. ಪಟಾಕಿ ಹಚ್ಚುವ ಬದಲು ಮನೆಯಲ್ಲಿ ದೀಪ ಹಚ್ಚಬೇಕು ಎಂದರು. ಫಾದರ್‌ ಎಂ.ಎಸ್‌. ರಾಜು ಮಾತನಾಡಿದರು. ಪ್ರೌಢಶಾಲಾ ವಿಭಾಗದ ಸಂಯೋಜನಾಧಿಕಾರಿ ಶಶಿಕಲಾ, ರೋಟರಿ ಕ್ಲಬ್‌ ಅಧ್ಯಕ್ಷ ವಿಶ್ವನಾಥ್‌ ಮಾತನಾಡಿದರು. ಬಸವ ಮಾಚಿದೇವ ಸ್ವಾಮೀಜಿ, ಜಿಲ್ಲಾ ಶರಣಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ. ವೀರೇಶ್‌, ವೀರಶೈವ ಸಮಾಜದ ಕಾರ್ಯದರ್ಶಿ ಜಿ.ಸಿ. ಮಲ್ಲಿಕಾರ್ಜುನ್‌, ರೋಟರಿ ವೀರೇಶ್‌, ಗಾಯತ್ರಿ ಶಿವರಾಮ್‌, ಕೆಇಬಿ ಷಣ್ಮುಖಪ್ಪ, ಷರೀಫಾಬಿ, ಕೇತೇಶ್ವರ ಟ್ರಸ್ಟ್‌ ಪ್ರಹ್ಲಾದಪ್ಪ ಮತ್ತು ಸಹನಾ ಮಾತೃಶ್ರೀ ಸಂಸ್ಥೆಯವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next