ಹುಣಸೂರು: ತಾಲೂಕಿನ ಬನ್ನಿಕುಪ್ಪೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಗರನಹಳ್ಳಿ ಮತ್ತು ಕೆಬ್ಬೆಕೊಪ್ಪಲು ಸರ್ಕಾರಿ ಶಾಲೆಗಳಿಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಬನ್ನಿಕುಪ್ಪೆ ಜಿಪಂ ಸದಸ್ಯೆ ಡಾ.ಪುಷ್ಪಾ ಅಮರ್‌ನಾಥ್ ದಿಢೀರ್ ಭೇಟಿ ನೀಡಿ ಬಿಸಿಯೂಟ ಹಾಗೂ ಶಾಲೆಯ ನಿರ್ವಹಣೆ ಬಗ್ಗೆ ಪರಿಶೀಲಿಸಿದರು.
ಬಿಳಿಕೆರೆ ಹೋಬಳಿಯ ಹಗರನಹಳ್ಳಿ ಪ್ರೌಢಶಾಲೆ ಹಾಗೂ ಕೆಬ್ಬೆಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿ, ಅಡುಗೆಗೆ ಬಳಸುವ ಅಕ್ಕಿಯ ಗುಣಮಟ್ಟ, ಸಾಂಬಾರಿಗೆ ಹಾಕುವ ಸೊಪ್ಪು ಮತ್ತು ತರಕಾರಿಯ ಬಗ್ಗೆ ಬಿಸಿಯೂಟದ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು.
ಮಕ್ಕಳ ಜತೆ ಬಿಸಿಯೂಟ: ಮಕ್ಕಳಿಗೆ ಶುಚಿ ಮತ್ತು ರುಚಿಯಾದ ಅಡುಗೆ ತಯಾರಿಸಿ ಬಡಿಸಬೇಕು ಎಂದು ಶಿಕ್ಷಕರಿಗೂ ಹಾಗೂ ಅಡುಗೆ ಸಿಬ್ಬಂದಿಗೆ ತಾಕೀತು ಮಾಡಿದ ಅವರು, ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಶೀಲಿಸಿದರು. ಬಳಿಕ ಬಿಸಿಯೂಟ ರುಚಿಯ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಮಕ್ಕಳೊಂದಿಗೆ ಬಿಸಿಯೂಟ ಸವಿದರು.
ಮನವಿ: ಹಗರನಹಳ್ಳಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಪುಟ್ಟಬಸವೇಗೌಡ, ಶಾಲೆಯ ಆವರಣದಲ್ಲಿ ಶೌಚಾಲಯ, ಅಡುಗೆ ಮನೆ, ಶಾಲೆಗೆ ಕಾಪೌಂಡು ನಿರ್ಮಾಣ ಹಾಗೂ ಶಾಲೆಗೆ ಸುಣ್ಣ-ಬಣ್ಣ ಹಾಕಿಸಿಕೊಡುವಂತೆ ಮನವಿ ಮಾಡಿದರು.
ಮೂಲಭೂತ ಸೌಲಭ್ಯ: ಈ ಮಧ್ಯೆ, ಬೀಜಗನಹಳ್ಳಿ, ರತ್ನಪುರಿ, ಚಿಕ್ಕ ಹುಣಸೂರು ಸರ್ಕಾರಿ ಶಾಲೆಗಳಿಗೆ ಡಾ.ಪುಷ್ಪಾ ಅಮರ್‌ನಾಥ್ ಭೇಟಿ ನೀಡಿ ಪರಿಶೀಲಿಸಿದರು. ಬನ್ನಿಕುಪ್ಪೆ ಜಿಪಂ ವ್ಯಾಪ್ತಿಗೆ ಬರುವ ಸರ್ಕಾರಿ ಶಾಲೆಗಳ ಸಮಸ್ಯೆಗಳ ಬಗ್ಗೆ ಸಿಆರ್‌ಪಿಗಳಿಗೆ ಮಾಹಿತಿ ನೀಡಿ, ನಂತರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಪಟ್ಟಿ ತರಿಸಿಕೊಂಡು ಹಂತಹಂತವಾಗಿ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇಸಿಒ ಸಂತೋಷ್‌ಕುಮಾರ್, ಸಿಆರ್‌ಪಿಗಳಾದ ಸೋಮಸುಂದರ್, ಅನಿಲ್, ಮುಖ್ಯ ಶಿಕ್ಷಕರಾದ ಬಿ.ಎಂ. ಸತೀಶ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.