ವಿಧಾನಸಭೆ : ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಕಳೆದು 12 ವರ್ಷಗಳಿಂದ ಯಾವುದೇ ಮನೆ ನಿವೇಶನ ನೀಡಿಲ್ಲ. ಅಲ್ಲಿ ಸರ್ಕಾರಿ ಜಾಗದ ಸಮಸ್ಯೆ ಇದ್ದು, ಸರ್ಕಾರ ಬೆಂಗಳೂರು ಮಾದರಿ ಫ್ಲ್ಯಾಟ್ ಹಂಚಿಕೆ ಮಾಡಲಿ ಎಂದು ಪುತ್ತೂರು ಶಾಸಕ ಸಂಜೀವ್ ಮಠಂದೂರು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಅವರು, ಪುತ್ತೂರು ನಗರ ಸಭೆಯಲ್ಲಿ ಕಳೆದ 12 ವರ್ಷಗಳಿಂದ ನಿವೇಶನ ನೀಡಿಲ್ಲ.
ಸಚಿವರ ಉತ್ತರ ವಾಸ್ತವ್ಯಕ್ಕೆ ಹತ್ತಿರವಾಗಿಲ್ಲ. ನಗರ ಸಭೆ ವ್ಯಾಪ್ತಿಯಲ್ಲಿ ನಿವೇಶನ ನೀಡಲು ಯಾವುದೇ ಸರ್ಕಾರಿ ಜಾಗವಿಲ್ಲ. ಐದು ಎಕರೆ ಕಂದಾಯ ಇಲಾಖೆಯ ಜಾಗವನ್ನು ನಗರಸಭೆಗೆ ಹಸ್ತಾಂತರ ಮಾಡಲಾಗಿದೆ ಎಂದು ಹೇಳಿದ್ದಾರೆ.
ಆದರೆ, ಇದುವರೆಗೂ ಹಸ್ತಾಂತರ ಮಾಡಿಲ್ಲ. ಅಲ್ಲಿ ನಿವೇಶನ ನೀಡಲು ಸಾಧ್ಯವಾಗದಿದ್ದರೆ. ಬೆಂಗಳೂರು ಮಾದರಿಯಲ್ಲಿ ಫ್ಲ್ಯಾಟ್ ವ್ಯವಸ್ಥೆಯಡಿ ಮನೆಗಳನ್ನು ನೀಡಬೇಕು ಎಂದು ಶಾಸಕ ಸಂಜೀವ್ ಮಠಂದೂರು ಆಗ್ರಹಿಸಿದರು.
ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಉತ್ತರಿಸಿ ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 1954 ನಿವೇಶನ ರಹಿತರನ್ನು ಗುರುತಿಸಲಾಗಿದೆ. ಅಲ್ಲಿ 19.5 ಎಕರೆ ಜಮೀನಿದೆ. ಅದು ಗುಡ್ಡ, ಕಾಡು, ಹಳ್ಳ ಇದೆ. ಅದನ್ನು ಸರಿಪಡಿಸಬೇಕು. ಆದಷ್ಟು ಬೇಗ 5 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.