Advertisement

ವಸತಿ ಯೋಜನೆ ಮನೆಗಳ ನಿಖರ ವರದಿ ನೀಡಿ

02:47 PM Dec 04, 2022 | Team Udayavani |

ಹಾವೇರಿ: ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ ಮಂಜೂರಾದ ಮನೆಗಳು, ಮಂಜೂರಾತಿಗೆ ಬಾಕಿ ಇರುವ ಮನೆಗಳ ಕುರಿತಂತೆ ವಾರದಲ್ಲಿ ಸಭೆ ನಡೆಸಿ ನಿಖರ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಂಸದ ಶಿವಕುಮಾರ ಉದಾಸಿ ಅವರು ಸೂಚನೆ ನೀಡಿದರು.

Advertisement

ಸ್ಥಳೀಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ “ದಿಶಾ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾಮೀಣ ಮತ್ತು ನಗರ ವಸತಿ ಯೋಜನೆಯ ಮಾಹಿತಿ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಮಂಜೂರಾಗಲು ಬಾಕಿ ಉಳಿದಿರುವ ಮನೆಗಳನ್ನು ಸರ್ಕಾರದ ಹಂತದಲ್ಲಿ ಫಾಲೋಅಪ್‌ ಮಾಡಿ ಮಂಜೂರಾತಿ ಪಡೆಯಬೇಕು. ಸ್ಲಂ ಜನರಿಗಾಗಿ ಮಂಜೂರಾಗಿರುವ ಮನೆಗಳ ಪ್ರಗತಿ, ದಾಖಲಾತಿಗಳ ಪರಿಶೀಲನೆ, ಬ್ಯಾಂಕ್‌ಗಳಲ್ಲಿ ಮಂಜೂರಾತಿಗೆ ಬಾಕಿ ಇರುವ ಅರ್ಜಿಗಳು ಸೇರಿದಂತೆ ವಿವರವಾಗಿ ಪರಿಶೀಲನೆ ನಡೆಸಿ, ವಸತಿ ರಹಿತರನ್ನು ಗುರುತಿಸಬೇಕೆಂದು ಸೂಚನೆ ನೀಡಿದರು.

ಟ್ರ್ಯಾಕಿಂಗ್‌ ಸಿಸ್ಟಂ: ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲಜೀವನ್‌ ಮಿಷನ್‌ ಯೋಜನೆಗಳ ಪ್ರಗತಿಯ ಕುರಿತು ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಂದ ಮಾಹಿತಿ ಪಡೆದು, ನೀರು ನಿರ್ವಹಣೆ ಕುರಿತಂತೆ ಡಿಜಿಟಿಯಲ್‌ ಮಾನಿಟರಿಂಗ್‌ ಸಿಸ್ಟಂ ಅಳವಡಿಕೆಗೆ ಕ್ರಮ ವಹಿಸಲು ಸೂಚಿಸಿದರು.

ಕೋವಿಡ್‌ ನಂತರದ ದಿನಗಳಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಹೆಚ್ಚಳವಾಗಿದೆ. ಆದರೆ, ಡೆಸ್ಕ್ಗಳ ಕೊರತೆ ಕಂಡುಬಂದಿದೆ. ಈ ಕುರಿತಂತೆ ಎಲ್ಲ ಶಾಸಕರು ಮಾಹಿತಿ ನೀಡಿದ್ದಾರೆ. ಪದವಿ ಪೂರ್ವ ಶಿಕ್ಷಣ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಾಲಾವಾರು ಡೆಸ್ಕ್ಗಳ ಕೊರತೆಯ ಮಾಹಿತಿ ಸಂಗ್ರಹಿಸಿ ತಕ್ಷಣ ಸಲ್ಲಿಸಬೇಕು.

Advertisement

ಈ ಕುರಿತಂತೆ ವಿಶೇಷ ಅನುದಾನಕ್ಕೆ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದರು. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ವಯಸ್ಕ ಹೆಣ್ಣು ಮಕ್ಕಳಿಗೆ ಕೌಶಲ್ಯ ತರಬೇತಿ ಹಾಗೂ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು.

ನಬಾರ್ಡ್‌ ಹಾಗೂ ಆರ್‌ಐಡಿಎಫ್‌ ಯೋಜನೆಯಡಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಪೋಷಣ್‌ ಅಭಿಯಾನದಡಿ ಮಕ್ಕಳ ಅಪೌಷ್ಟಿಕತೆ ನಿವಾರಣೆ ಪ್ರಗತಿ ಕುರಿತಂತೆ ವಿಶ್ಲೇಷಣಾತ್ಮಕ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ಆದರ್ಶ ಗ್ರಾಮ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ನಿಧಾನಗತಿಯಿಂದಾಗಿ ಗ್ರಾಮಸ್ಥರಿಂದ ದೂರುಗಳು ಬರುತ್ತಿವೆ. ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೃಷಿ ಜಂಟಿ ನಿರ್ದೇಶಕ ಮಂಜುನಾಥ್‌ ಮಾತನಾಡಿ, ಸ್ಥಳೀಯ ಬೆಳೆ ಹಾನಿ ಪರಿಹಾರವಾಗಿ ವಿಮಾದಾರರಿಗೆ ಆರು ಕೋಟಿ ರೂ. ಹಾಗೂ ಮಧ್ಯಂತರ ಪರಿಹಾರವಾಗಿ 70.50 ಕೋಟಿ ರೂ. ಬಿಡುಗಡೆಯಾಗಿದೆ. ಗುರುವಾರದಿಂದ ರೈತರ ಖಾತೆಗೆ ಹಣ ಜಮೆಯಾಗುತ್ತದೆ. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ 2,18,387 ಹಾಗೂ ಹಿಂಗಾರು ಹಂಗಾಮಿನಲ್ಲಿ 15,659 ರೈತರು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಮನೆ ಮನೆ ಸರ್ವೇ: ಜಿಲ್ಲೆಯಲ್ಲಿ ಶೌಚಾಲಯ ರಹಿತರನ್ನು ಗುರುತಿಸಲು ಮನೆ ಮನೆ ಸಮೀಕ್ಷೆ ಕೈಗೊಳ್ಳಲಾಗಿದೆ. ಶೌಚಾಲಯ ಇಲ್ಲದವರು ನೇರವಾಗಿ ಮಾಹಿತಿ ನೀಡಲು ಸಿಟಿಜನ್‌ ಆ್ಯಪ್‌ ಹೊರತರಲಾಗಿದೆ. ಈ ಆ್ಯಪ್‌ನಲ್ಲಿ ಅಪ್‌ ಲೋಡ್‌ ಮಾಡಿದರೆ ಶೌಚಾಲಯ ಮಂಜೂರಾತಿ ನೀಡಲಾಗುವುದು ಎಂದು ಸಂಸದರು ಹೇಳಿದರು.

ಉದ್ಯೋಗ ಖಾತ್ರಿ, ಗ್ರಾಮೀಣ ರಸ್ತೆ, ಸಾಮಾಜಿಕ ಭದ್ರತಾ ಯೋಜನೆಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ ಸೇರಿದಂತೆ ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಪ್ರಗತಿಯ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.

ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ್‌ ಮೂರ್ತಿ, ಜಿಪಂ ಸಿಇಒ ಮಹಮ್ಮದ್‌ ರೋಷನ್‌, ರೈಲ್ವೆ ಇಲಾಖೆ ಸಹಾಯಕ ಆಡಳಿತಾಧಿಕಾರಿ ವಿಜಯಾ, ಜಿಪಂ ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಇತರ ಅಧಿಕಾರಿಗಳು ಇದ್ದರು.

ಹೊಸ ಟಿಸಿ-ಹೊಸ ಮಾರ್ಗಗಳ ಕಾಮಗಾರಿ ಪೂರ್ಣಗೊಳಿಸಿ

ಜಿಲ್ಲೆಯಲ್ಲಿ 1.20 ಲಕ್ಷ ಐಪಿ ಸೆಟ್‌, 33 ಸಾವಿರ ಟಿಸಿಗಳಿವೆ ಎಂದು ಮಾಹಿತಿ ನೀಡುತ್ತಿದ್ದೀರಿ. ಹೊಸ ಬೋರವೆಲ್‌ಗ‌ಳು ಹೆಚ್ಚಾಗುತ್ತಿವೆ. ಟಿಸಿಗಳ ಬೇಡಿಕೆ ಹೆಚ್ಚಾಗುತ್ತಿದೆ. ಈಗಿರುವ ಟಿಸಿಗಳಿಗೆ ಓವರ್‌ ಲೋಡ್‌ ಆಗುತ್ತಿದೆ. ಸಮರ್ಪಕ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಹೊಸ ಟಿಸಿಗಳು, ಹೊಸ ಮಾರ್ಗಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬೇಸಿಗೆ ಕಾಲದಲ್ಲಿ ಸಮಸ್ಯೆ ಉಲ್ಬಣಗೊಳ್ಳತ್ತದೆ. ಫೆಬ್ರವರಿಯೊಳಗೆ ಟಿಸಿ ಅಳವಡಿಕೆ, ಮಾರ್ಗಗಳ ಸೃಜನೆ ಕಾರ್ಯ ಪೂರ್ಣಗೊಳಿಸುವಂತೆ ಸಂಸದರು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬನ್ನಿ

ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳ ವಿರುದ್ಧ ಗರಂ ಆದ ಸಂಸದ ಶಿವಕುಮಾರ ಉದಾಸಿ ಅವರು, ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬನ್ನಿ ಎಂದು ತಾಕೀತು ಮಾಡಿದರು. ಸರಿಯಾದ ಮಾಹಿತಿ ನೀಡದ ನಗರಾಭಿವೃದ್ಧಿ ಕೋಶದ ಯೋಜನಾ ಧಿಕಾರಿ ಹಾಗೂ ಪೌರಾಯುಕ್ತರನ್ನು ಸಭೆಯಿಂದ ಹೊರಗೆ ಕಳುಹಿಸಿದ ಘಟನೆ ನಡೆಯಿತು.

ರೈಲ್ವೆ ಸಮಸ್ಯೆ ತ್ವರಿತವಾಗಿ ಪರಿಹರಿಸಿ

ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೆಳಸೇತುವೆಗಳಲ್ಲಿ ರಸ್ತೆ ದುರಸ್ತಿ, ನೀರು ನಿಲುಗಡೆ ಸಮಸ್ಯೆಗಳನ್ನು ಎಂಜಿನಿಯರ್‌ಗಳನ್ನು ಕಳುಹಿಸಿ ಪರಿಹರಿಸ ಬೇಕು. ಹಾವೇರಿ ಮತ್ತು ಬ್ಯಾಡಗಿ ರೈಲ್ವೆ ನಿಲ್ದಾಣದಲ್ಲಿ ಎಕ್ಸಲೇಟರ್‌ ಅಳವಡಿಸಬೇಕು. ಬ್ಯಾಡಗಿ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ವಾಶ್‌ರೂಂ ಅನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು. ಯಲವಿಗಿ ಮತ್ತು ಮತ್ತಿಗಟ್ಟಿಯಲ್ಲಿ ರೈಲ್ವೆ ಕ್ರಾಸಿಂಗ್‌ ಸಮಸ್ಯೆ ಇತ್ಯರ್ಥಪಡಿಸುವಂತೆ ಸಂಸದರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next