Advertisement

ಮೆಟ್ರೋಗಾಗಿ ಸಾವಿರ ಮರಗಳಿಗೆ ಕೊಡಲಿ?

11:26 AM Oct 12, 2018 | |

ಬೆಂಗಳೂರು: ಸಿಲ್ಕ್ಬೋರ್ಡ್‌ನಿಂದ ಕೆ.ಆರ್‌ .ಪುರವರೆಗಿನ “ನಮ್ಮ ಮೆಟ್ರೋ 2ಎ’ ಹಂತದ ಕಾಮಗಾರಿಗಾಗಿ 1,037 ಮರಗಳನ್ನು ಕಡಿಯಲು ಬಿಎಂಆರ್‌ಸಿಎಲ್‌ ರೂಪಿಸಿರುವ ಯೋಜನೆಗೆ ಪರಿಸರ ಪ್ರೇಮಿಗಳಿಂದ ವಿರೋಧ ವ್ಯಕವಾಗಿದ್ದು,
ಮರಗಳನ್ನು ಕತ್ತರಿಸಲು ಬಿಬಿಎಂಪಿ ಅನುಮತಿ ನೀಡುವುದೇ ಕಾದು ನೋಡಬೇಕಿದೆ.

Advertisement

ರಾಜಧಾನಿಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈಗಾಗಲೇ ಎರಡು ಮಾರ್ಗಗಳಲ್ಲಿ ನಮ್ಮ ಮೆಟ್ರೋ ಸೇವೆ ಆರಂಭಿಸಿದೆ. ಇದೀಗ ಸಿಲ್ಕ್ಬೋರ್ಡ್‌ನಿಂದ ಕೆ.ಆರ್‌.ಪುರದವರೆಗೆ ಹೆಚ್ಚುವರಿಯಾಗಿ ಮೆಟ್ರೋ ಸೇವೆ ಕಲ್ಪಿಸಲು ಮುಂದಾಗಿದ್ದು, 17 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣಕ್ಕೆ 1037 ಮರಗಳನ್ನು ಕಡಿಯಲು ಪಾಲಿಕೆಯ ಅನುಮತಿ ಕೋರಿದ್ದು, ಪಾಲಿಕೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ.

ಮೆಟ್ರೋ ಯೋಜನೆಗಾಗಿ ಈಗಾಗಲೇ ನಗರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚಿನ ಮರಗಳನ್ನು ಕತ್ತರಿಸಲಾಗಿದ್ದು, ಹಲವಾರು ಭಾಗಗಳಲ್ಲಿ ಯೋಜನೆ ಜಾರಿಗೊಳಿಸುವ ವೇಳೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ತೀವ್ರ ವಿರೋಧಕ್ಕೆ ಬಿಎಂಆರ್‌ ಸಿಎಲ್‌ ಗುರಿಯಾಗಿತ್ತು. ಇದೀಗ ನಮ್ಮ ಮೆಟ್ರೋ 2ಎ ಹಂತದಲ್ಲಿ ಅಪಾರ ಪ್ರಮಾಣದ ಮರಗಳನ್ನು ಕತ್ತರಿಸ ಬೇಕಿರುವುದರಿಂದ ಜನರ ಆಕ್ಷೇಪಣೆಗಳನ್ನು ಸ್ವೀಕರಿಸುವುದು ಬಿಎಂಆರ್‌ಸಿಎಲ್‌ಗೆ ಅನಿವಾರ್ಯವಾಗಿದೆ. 

ಸಿಲ್ಕ್ಬೋರ್ಡ್‌-ಕೆ.ಆರ್‌.ಪುರ ಮಾರ್ಗದಲ್ಲಿ ಮೆಟ್ರೋ ಮಾರ್ಗಕ್ಕಾಗಿ ಹತ್ತಾರು ವರ್ಷಗಳ ಹಳೆಯ ಮರಗಳನ್ನು ಕತ್ತರಿಸುವ ಬಿಎಂಆರ್‌ಸಿಎಲ್‌ ನಿರ್ಧಾರಕ್ಕೆ ಈಗಾಗಲೇ ಸ್ಥಳೀಯ ನಿವಾಸಿಗಳು ಹಾಗೂ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿದ್ದು, ಸಾರ್ವಜನಿಕರ ಆಕ್ಷೇಪಣೆ ಹಾಗೂ ವೃಕ್ಷ ಸಮಿತಿ ರಚಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. 

ಅಭಿವೃದ್ಧಿ ಕಾಮಗಾರಿಗಳ ಜತೆಗೆ ನಗರದ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ. ಈಗಾಗಲೇ ಮೆಟ್ರೋ ಕಾಮಗಾರಿಗೆ ಸಾವಿರಾರು ಮರಗಳು ಬಲಿಯಾಗಿವೆ. ಆದರೆ, ಕಾಮಗಾರಿ ವೇಳೆ ಸ್ಥಳಾಂತರಿಸಿದ, ಹೊಸದಾಗಿ ನೆಟ್ಟಿರುವ ಗಿಡಗಳ ಹಾರೈಕೆಗೆ ಸ್ಥಳೀಯ ಸಂಸ್ಥೆಗಳು ಆಸಕ್ತಿ ತೋರುತ್ತಿಲ್ಲ ಎಂಬುದು ಪರಿಸರ ಪ್ರೇಮಿಗಳ ಬೇಸರವಾಗಿದೆ.

Advertisement

ವೃಕ್ಷ ಸಮಿತಿ ಉದ್ದೇಶ, ಕಾರ್ಯ: ಹೈಕೋರ್ಟ್‌ ಆದೇಶದನ್ವಯ ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976ಕ್ಕೆ 2015ರಲ್ಲಿ ತಿದ್ದುಪಡಿ ತರಲಾಗಿದ್ದು, ಕಾಯ್ದೆಯಂತೆ 50ಕ್ಕೂ ಹೆಚ್ಚು ಮರಗಳನ್ನು ಕಡಿಯಬೇಕಾದರೆ ಸಾರ್ವಜನಿಕರ ಅಹವಾಲು ಪಡೆಬೇಕು. ಜತೆಗೆ ಮರ ಕಡಿಯಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ವೃಕ್ಷ ಸಮಿತಿ ರಚಿಸಬೇಕೆಂಬ ನಿಯಮವಿದೆ. ಅದರಂತೆ 50ಕ್ಕೂ ಹೆಚ್ಚಿನ ಮರಗಳನ್ನು ಕಡಿಯಬೇಕಾಗಿ ಬಂದಾಗ ವೃಕ್ಷ ಸಮಿತಿಯ ತೀರ್ಮಾನ ಅಂತಿಮವಾಗಿರುತ್ತದೆ ಎಂದು ಕಾಯ್ದೆಯಲ್ಲಿ ಉಲ್ಲೇಖೀಸಲಾಗಿದೆ.

ಇದರೊಂದಿಗೆ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ವೇಳೆ ಕಡಿಯಲು ಅಂದಾಜಿಸಿರುವ ಮರಗಳ ಸಂಖ್ಯೆ ಸರಿಯೇ, ಎಷ್ಟು ಮರಗಳನ್ನು ಉಳಿಸಿಕೊಂಡು ಕಾಮಗಾರಿ ನಡೆಸಬಹದು, ಎಷ್ಟು ಮರಗಳನ್ನು ಸ್ಥಳಾಂತರ ಮಾಡಬಹದು ಹಾಗೂ ಅಂದಾಜಿಸಿರುವ ಮರಗಳಲ್ಲಿನ ಅಪರೂಪದ ಪ್ರಬೇಧದ ಮರಗಳನ್ನು ರಕ್ಷಿಸುವುದು ಹೇಗೆ ಎಂಬ ಬಗ್ಗೆಯೂ ವೃಕ್ಷಿ ಸಮಿತಿ ಸಲಹೆಗಳನ್ನು ನೀಡುತ್ತದೆ.  

ಪ್ರತಿಭಟನೆ ಎಚ್ಚರಿಕೆ
ನಗರದಲ್ಲಿ ಯಾವುದೇ ಯೋಜನೆ ಕೈಗೊಳ್ಳುವಾಗ 50ಕ್ಕಿಂತ ಹೆಚ್ಚು ಮರಗಳ ಕಡಿಯಬೇಕಾದರೆ, ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು ಎಂದು 2011ರಲ್ಲಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಆ ಹಿನ್ನೆಲೆಯಲ್ಲಿ ಬಿಎಂಆರ್‌ ಸಿಎಲ್‌ ಅಧಿಕಾರಿಗಳು 50 ಕ್ಕಿಂತ ಕಡಿಮೆ ಮರಗಳನ್ನು ಕಡಿಯಲು ಪಾಲಿಕೆಯಿಂದ ಪಡೆಯುತ್ತಿದ್ದು, ಹಂತ ಹಂತವಾಗಿ ನೂರಾರು ಮರಗಳನ್ನು ತೆರವುಗೊಳಿಸಿದೆ. ಇದೀಗ ಸಿಲ್ಕ್ಬೋರ್ಡ್‌- ಕೆ.ಆರ್‌.ಪುರ ಮಾರ್ಗದಲ್ಲಿಯೂ ಅದೇ ವಾಮಮಾರ್ಗ ಅನುಸರಿಸಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯ ನಾಗರಿಕ ಸಂಸ್ಥೆಗಳು ಎಚ್ಚರಿಕೆ ನೀಡಿವೆ. 

ಬಿಎಂಆರ್‌ಸಿಎಲ್‌ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳ ಅಭಿಪ್ರಾಯ ಪಡೆಯಲು ಮುಂದಾಗಿಲ್ಲ. ಯೋಜಿತ
ಮಾರ್ಗದಲ್ಲಿ 1037 ಮರಗಳನ್ನು ಕಡಿಯಲು ಪ್ರಸ್ತಾವನೆ ನೀಡಿರುವುದರಿಂದ ಸಾರ್ವಜನಿಕರ ಆಕ್ಷೇಪಣೆ ಸ್ವೀಕರಿಸಲೇಬೇಕು. ವೃಕ್ಷ ಸಮಿತಿ ರಚಿಸದೆ ಕಾಮಗಾರಿ ನಡೆಸಲು ಬಿಡುವುದಿಲ್ಲ. 
ವಿಜಯ್‌ ನಿಶಾಂತ್‌, ಪರಿಸರ ಪ್ರೇಮಿ

ಸಿಲ್ಕ್ಬೋರ್ಡ್‌-ಕೆ.ಆರ್‌.ಪುರ ಮಾರ್ಗದ ಕಾಮಗಾರಿಗೆ 1037 ಮರಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್‌ ಅನುಮತಿ ಕೋರಿದೆ. ಆದರೆ, ಸ್ಥಳೀಯ ನಾಗರಿಕ ಸಂಸ್ಥೆಗಳು ಹಾಗೂ ಪರಿಸರವಾದಿಗಳ ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತು
ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
 ಚೋಳರಾಜಪ್ಪ, ಅರಣ್ಯ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ

ವೆಂ. ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next