Advertisement

ನಕಲಿ ದಾಖಲೆ ನೀಡಿ ಅಂಗನವಾಡಿಗೆ ನೇಮಕ

10:40 AM Jul 23, 2019 | Suhan S |

ಕುಷ್ಟಗಿ: ಅವಿವಾಹಿತೆಯೊಬ್ಬರು ವಿಧವೆಯರ ಮೀಸಲಾತಿಯಡಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕಗೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಗುಮಗೇರಾ ಗ್ರಾಮದ ಹನುಮಕ್ಕ 2016ರಲ್ಲಿ 1ನೇ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆಯಲ್ಲಿದ್ದು, ಸದ್ಯ 2017-18ರಲ್ಲಿ ಇಲ್ಲಿನ ವಿಜಯ ಚಂದ್ರಶೇಖರ ಬಿಇಡಿ ಕಾಲೇಜಿನಲ್ಲಿ ಕಾಯಂ ಪ್ರಶಿಕ್ಷಣಾರ್ಥಿಯಾಗಿದ್ದಾರೆ. ಎರಡರಲ್ಲೂ ಹಾಜರಾತಿ ಪಡೆದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸಿ ವೇತನ ಪಡೆದಿರುವ ವೇತನ ದಾಖಲೆಗಳು ಹಾಗೂ ವಿಜಯ ಚಂದ್ರಶೇಖರ ಬಿಇಡಿ ಕಾಲೇಜಿನಲ್ಲಿ 3ನೇ ಸೆಮಿಸ್ಟರ್‌ನಲ್ಲಿ 76 ಕರ್ತವ್ಯದ ದಿನಗಳಲ್ಲಿ 45 ದಿನ ತರಗತಿಗೆ ಹಾಜರಾಗಿದ್ದಾರೆ. ಈ ವಿಷಯ ಕುರಿತು ಜನಹಿತ ವೇದಿಕೆ ಅಧ್ಯಕ್ಷ ಎಚ್.ಕೆ. ದೋಟಿಹಾಳ ಅವರು, ಅಗತ್ಯ ದಾಖಲೆಗಳ ಸಮೇತ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸೇರಿದಂತೆ ಜಿಪಂಗೆ ಅಗತ್ಯ ಕ್ರಮಕ್ಕೆ ದೂರು ಸಲ್ಲಿಸಿದ್ದಾರೆ.

ದಾಖಲೆಯಲ್ಲಿ ತಂದೆ ಹೆಸರು: ಈ ಹಿನ್ನೆಲೆಯಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ಹನುಮಕ್ಕ ಅವರ ಅಂಗನವಾಡಿ ಕಾರ್ಯಕರ್ತೆಯಾಗಿರುವುದು ಖೊಟ್ಟಿ ಎನ್ನುವುದು ಗೊತ್ತಾಗಿದೆ. ಹನುಮಕ್ಕ ವಿಧವಾ ಮೀಸಲಾತಿಯಡಿ ಕಾರ್ಯಕರ್ತೆಯಾಗಿದ್ದು, ಹನುಮಕ್ಕ ಗಂಡ ಚಂದ್ರಪ್ಪ ಕಂಬಳಿ ಎಂಬುವರಿಗೆ ಶಿಶು ಅಭಿವೃದ್ಧಿ ಇಲಾಖೆ 2016, ಸೆ.20ರಂದು ನೇಮಕಾತಿ ಆದೇಶ ಪತ್ರ ನೀಡಿದೆ. ವಾಸ್ತವದಲ್ಲಿ ಇವರು ಮದುವೆಯಾಗಿಲ್ಲ. ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳಲ್ಲಿ ಹನುಮಕ್ಕ ಅವರ ತಂದೆ ಮುತ್ತಪ್ಪ ಬ್ಯಾಲಿಹಾಳ ಎನ್ನುವ ಹೆಸರಿದೆ.

ಹನುಮಕ್ಕ ಅವರ ಆಧಾರ ಕಾರ್ಡ್‌, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆದಾಯ ಹಾಗೂ ವಾಸಸ್ಥಳ ಪ್ರಮಾಣ ಪತ್ರಗಳಲ್ಲಿ 371 ಕಲಂ (ಜೆ) ಅನ್ವಯ ಉಪ ವಿಭಾಗಾಧಿಕಾರಿ ಹೈಕ ನಿವಾಸಿ ಎನ್ನುವ ಪ್ರಮಾಣ ಪತ್ರದಲ್ಲೂ ತಂದೆ ಮುತ್ತಪ್ಪ ಹೆಸರು ಮಾತ್ರ ಇದೆ.

Advertisement

ಮರಣ ಪ್ರಮಾಣಪತ್ರ: ತಾಲೂಕಿನ ಟಕ್ಕಳಕಿ ಗ್ರಾಮದ ನಿವಾಸಿ ಚಂದ್ರಪ್ಪ ಬಸಪ್ಪ ಕಂಬಳಿ ಎನ್ನುವ ಹೆಸರಿನಲ್ಲಿರುವ ಮರಣ ಪತ್ರ ಲಗತ್ತಿಸಲಾಗಿದೆ. ಆದರೆ ಮೃತ ಚಂದ್ರಪ್ಪ ಅವರೇ ತಮ್ಮ ಪತಿ ಎಂದು ನಿರೂಪಿಸುವ ಯಾವುದೇ ದಾಖಲೆಗಳಿಲ್ಲ. ಅದೇ ರೀತಿ ಸಾರ್ವಜನಿಕರಿಗೆ ಟಕ್ಕಳಕಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ನೀಡಿರುವ ಸ್ಥಾನಿಕ ಲಿಖೀತ ಮಾಹಿತಿ ಪ್ರಕಾರ ಟಕ್ಕಳಕಿ ಗ್ರಾಮದ ನಿವಾಸಿಯಾಗಿರುವ ಚಂದ್ರಪ್ಪ ಕಂಬಳಿ ಎಂಬುವರಿಗೆ ಶರಣಮ್ಮ ಎಂಬುವರೊಂದಿಗೆ ಮದುವೆಯಾಗಿದೆ. ಇವರಿಗೆ ಕೀರ್ತಿ ಎನ್ನುವ ಮಗಳಿದ್ದು, ಮಗಳೊಂದಿಗೆ ಅವರು ವಾಸವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಅದರಲ್ಲಿ ಹನುಮಕ್ಕ ಎನ್ನುವ ಹೆಸರಿನ ಉಲ್ಲೇಖವಿಲ್ಲ.

ಗ್ರಾಮಸ್ಥರ ಅನುಮಾನ: ಈ ಮದ್ಯೆ ವಿಧವೆ ಮೀಸಲಾತಿಯಡಿ ಕಾರ್ಯಕರ್ತೆ ಹುದ್ದೆಗೆ ನೇಮಕಾತಿ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಲ್ಲ. ಮದುವೆಯಾಗಿರುವುದು ಹಾಗೂ ಪತಿ ಎಂಬುದನ್ನು ಪ್ರಾಮಾಣೀಕರಿಸುವ ಯಾವುದೇ ದಾಖಲೆ ಇಲ್ಲದಿದ್ದರೂ, ನೇಮಕಾತಿ ಆದೇಶ ನೀಡಿರುವ ಶಿಶು ಅಭಿವೃದ್ಧಿ ಅಧಿಕಾರಿ ಕ್ರಮಕ್ಕೆ ಟಕ್ಕಳಕಿ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next