Advertisement

ಬೀಡಿ ಕಟ್ಟೋರಿಗೆ ಯೋಗ್ಯ ಕೂಲಿ ಕೊಡಿ: ದೇವರಾಜ್‌

12:41 PM Jan 17, 2017 | Team Udayavani |

ದಾವಣಗೆರೆ: ಬೀಡಿ ಕಾರ್ಮಿಕರಿಗೆ ಗೌರವಯುತ ಜೀವನ ನಡೆಸಲು ಅಗತ್ಯ ಇರುವಷ್ಟು ಕೂಲಿ ಕೊಡುವ ಜೊತೆಗೆ, ಅವರನ್ನು ಗುರುತಿಸುವ ಕಾರ್ಯ ಸರ್ಕಾರ ಮಾಡಬೇಕು ಎಂದು ದಕ್ಷಿಣ ಭಾರತ ಟ್ರೇಡ್‌ ಯೂನಿಯನ್‌ ಒಕ್ಕೂಟದ ಅಧ್ಯಕ್ಷ ಸೆಬಾಸ್ಟಿನ್‌ ದೇವರಾಜ್‌ ಒತ್ತಾಯಿಸಿದ್ದಾರೆ. 

Advertisement

ರೋಟರಿ ಬಾಲ ಭವನದಲ್ಲಿ ಸೋಮವಾರ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಹಮ್ಮಿಕೊಂಡ ಬೀಡಿ ಕಾರ್ಮಿಕರ ಜಿಲ್ಲಾ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು, ಬೀಡಿ ಕಾರ್ಮಿಕರು ಇಂದು ಬರುವ ಕೂಲಿ ಆಧರಿಸಿ, ಅವಶ್ಯಕತೆ ನಿಭಾಯಿಸಿಕೊಳ್ಳುತ್ತಿದ್ದಾರೆ. ಯೋಗ್ಯ ಜೀವನ ಮಾಡುವುದು ಅವರಿಂದ ಸಾಧ್ಯವಾಗುತ್ತಿಲ್ಲ ಎಂದರು. 

ನಮ್ಮ ದೇಶದ ಒಟ್ಟು ಶೇ.65ರಷ್ಟು ವರಮಾನ ಬರುತ್ತಿರುವುದು ಕೂಲಿ ಕಾರ್ಮಿಕರಿಂದಲೇ  ಹೊರತು ಕಾರ್ಪೋರೇಟ್‌ ಕಂಪನಿಗಳಿಂದಲ್ಲ. ಸರ್ಕಾರ ಇದನ್ನು ಅರ್ಥಮಾಡಿಕೊಳ್ಳಬೇಕಿದೆ. ಆದರೆ, ಇಂದು ಸರ್ಕಾರ ಕೂಲಿ ಕಾರ್ಮಿಕರನ್ನು ಬಿಟ್ಟು ಕಾರ್ಪೋರೇಟ್‌ ವಲಯಕ್ಕೆ ಹೆಚ್ಚು ಒತ್ತುಕೊಡುತ್ತಿದೆ.

ದುಡಿಮೆ, ಶ್ರಮ ಇಲ್ಲದೆ ಸದೃಢ ನಿರ್ಮಾಣ ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಶ್ರಮಿಕ ವರ್ಗಕ್ಕೆ ಹೆಚ್ಚಿನ ಒತ್ತು ಕೊಡಬೇಕಿದೆ ಎಂದು ಅವರು ತಿಳಿಸಿದರು. ಬೀಡಿ ಕಾರ್ಮಿಕರು ಸಮಾಜದ ಸ್ವಾಸ್ಥÂ ಕೆಡಿಸಲು ಬೀಡಿ ಕಟ್ಟುತ್ತಿಲ್ಲ. ಬದಲಿಗೆ ನಿತ್ಯ ಜೀವನ ನಡೆಸಲು ಬೀಡಿ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. 

ಅವರಿಗೆ ಪರ್ಯಾಯ ಉದ್ಯೋಗ ಕೊಟ್ಟರೆ ಅದನ್ನೇ ಮಾಡಿಕೊಂಡು ಜೀವನ ಸಾಗಿಸಬಲ್ಲರು. ಸದ್ಯದ ಸ್ಥಿತಿಯಲ್ಲಿ ಬೀಡಿ ಕಾರ್ಮಿಕರ ಜತೆಗೆ ಮನೆಯವರ ಆರೋಗ್ಯ ಹದಗೆಟ್ಟಿದೆ. ಮೇಲಾಗಿ  ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ಬೀಡಿ ಕಂಪನಿಯ ಗುತ್ತಿಗೆದಾರರು ಕಾನೂನುಗಳನ್ನು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ.

Advertisement

ಕಾರ್ಮಿಕರಿಗೆ ಕನಿಷ್ಠ ಸವಲತ್ತು ಕೊಡುತ್ತಿಲ್ಲ. ಕೊಡುವ ಕೂಲಿಯಲ್ಲಿ ಒಂದಿಷ್ಟು ತಮ್ಮ ಪಾಲು ಎಂಬುದಾಗಿ ತೆಗೆದಿಟ್ಟುಕೊಳ್ಳುತ್ತಾರೆ. ಇಷ್ಟೆಲ್ಲಾ ಕಾನೂನು ಉಲ್ಲಂಘಿಸಿದರೂ ಸಹ ಸರ್ಕಾರ ಅವರ ಮೇಲೆ ಯಾವುದೇ ಕ್ರಮ ವಹಿಸುವುದಿಲ್ಲ. ಬೇರೆಯವರು ಒಂದೆರಡು ಬಾರಿ ಕಾನೂನು ಉಲ್ಲಂಘಿಸಿದರೆ ತಕ್ಷಣ ಕ್ರಮಕ್ಕೆ ಮುಂದಾಗುವ ಸರ್ಕಾರ, ಗುತ್ತಿಗೆದಾರರ ವಿಷಯದಲ್ಲಿ ರಿಯಾಯಿತಿ ಏಕೆ ಎಂದು ಅವರು ಪ್ರಶ್ನಿಸಿದರು. 

ಸಂವಿಧಾನದ ಪ್ರಕಾರ ಎಲ್ಲರಿಗೂ ಬದುಕುವ ಹಕ್ಕಿದೆ. ಇಲ್ಲಿ ಯಾರೂ ಸಹ ಮೇಲು-ಕೀಳಲ್ಲ. ಕೂಲಿ ಕಾರ್ಮಿಕರ ಶ್ರಮದಲ್ಲಿ ಕೋಟ್ಯಂತರ ರೂಪಾಯಿ ದುಡಿದು, ಐಶರಾಮಿ ಜೀವನ ನಡೆಸುವವರು ತಮ್ಮ ಒಳಿತಿಗಾಗಿ ದುಡಿದ ಮಂದಿಗೆ ಒಂದಿಷ್ಟು ಸವಲತ್ತು ಕೊಡಬೇಕು. ಬಂದ ಲಾಭದಲ್ಲಿ ಲಾಭಾಂಶ ತೆಗೆದಿಟ್ಟು ಅವರ ಜೀವನ ಸುಧಾರಿಸಲು ಕ್ರಮ ವಹಿಸಬೇಕು ಎಂದುಅವರು ಆಗ್ರಹಿಸಿದರು.

ಮಾನವ ಹಕ್ಕುಗಳ ಕಾರ್ಯಕರ್ತೆ ಉಷಾ ರವಿಕುಮಾರ್‌ ಮಾತನಾಡಿ, ಬೀಡಿ ಕಾರ್ಮಿಕರು ಅತಿ ಕಡಿಮೆ ಕೂಲಿಗೆ ಕೆಲಸ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದು ಕಳೆದ 4 ವರ್ಷದಿಂದ ಸಂಘಟಿತ ಹೋರಾಟ ನಡೆಸಲಾಗಿದೆ. ಇದೀಗ ಒಂದೊಂದೇ ಸಮಸ್ಯೆಗೆ ಪರಿಹಾರ ಸಹ ಕಂಡುಕೊಳ್ಳಲಾಗುತ್ತಿದೆ. 

ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟದ ಮೂಲಕ ಸವಲತ್ತು ಪಡೆಯಬೇಕಿದೆ ಎಂದರು. ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಸದಸ್ಯೆ ಹಸೀನಾಬಾನು ಅಧ್ಯಕ್ಷತೆ ವಹಿಸಿದ್ದರು. ಎಂ. ಕರಿಬಸಪ್ಪ, ಜಬೀನಾ ಖಾನಂ ವೇದಿಕೆಯಲ್ಲಿದ್ದರು. 1000 ಬೀಡಿಗೆ ಕನಿಷ್ಠ 300 ರೂ. ಕೂಲಿ ಕೊಡುವ ಜತೆಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಆಗ್ರಹಿಸಲು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.   

Advertisement

Udayavani is now on Telegram. Click here to join our channel and stay updated with the latest news.

Next