ಕುಣಿಗಲ್: ಉತ್ತಮ ಪರಿಸರ, ಸ್ವಚ್ಛಗಾಳಿ, ಮಳೆ ಹಾಗೂ ಜೀವ ಸಂಕುಲಗಳ ಸಂರಕ್ಷಣೆಗಾಗಿ ಸಸಿಗಳನ್ನು ನೆಡಬೇಕೆಂದು ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಪ್ರಚಾರ ಕೈಗೊಂಡು ಸಸಿಗಳನ್ನು ನೆಡುತ್ತಿದ್ದಾರೆ ಮತ್ತೂಂದೆಡೆ, ಬಲಾಡ್ಯ ವ್ಯಕ್ತಿಗಳಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದ, ಬೆಳೆದು ನಿಂತಿರುವ ಬೃಹತ್ ಮರಗಳ ಮಾರಣ ಹೋಮಕ್ಕೆ ಅರಣ್ಯ ಇಲಾಖೆಯೇ ಕೊಡಲಿ ಹಾಕಿರುವ ಘಟನೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅನುಮಾನಕ್ಕೆ ಕಾರಣ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದ ಕಾಂಪೌಂಡ್ ಪಕ್ಕದಲ್ಲಿ ಸಾಲು ಮರದ ಸರದಾರ ಮಾಜಿ ಸಚಿವ ದಿ.ವೈ.ಕೆ.ರಾಮಯ್ಯ ಹಾಕಿದ್ದ ಬೆಳೆದು ನಿಂತ್ತಿದ್ದ ಬೃಹತ್ ಮರಗಳಿಗೆ ಅರಣ್ಯ ಇಲಾಖೆಯೇ ಕೊಡಲಿ ಹಾಕಿ ಮರಗಳ ನಾಶಕ್ಕೆ ಕಾರಣವಾಗಿರುವುದು, ನಾಗರಿಕರ ಅನುಮಾನಕ್ಕೆ ಕಾರಣವಾಗಿದೆ.
ಕ್ರೀಡಾ ಟ್ರ್ಯಾಕ್ ನಿರ್ಮಾಣ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ಅಭಿವೃದ್ಧಿ ಹಾಗೂ ಕ್ರೀಡಾ ಟ್ರ್ಯಾಕ್ ನಿರ್ಮಾಣಕ್ಕೆ 75 ಮರಗಳ ಕತ್ತರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಈ ಹಿಂದೆ ಮರ ಕಡಿಯುವ ವೇಳೆ ಸಾರ್ವಜನಿಕರು ಗಲಾಟೆ ಮಾಡಿ ಮರ ಕಡಿಯದಂತೆ ತಡೆಹಿಡಿದಿದ್ದರೂ. ಆದರೆ ಈಗ ಮತ್ತೆ ಅರಣ್ಯ ಇಲಾಖೆಯ ಅನುಮತಿ ಇದೆ ಎಂದು ಹರಾಜು ಕೂಗಿಕೊಂಡಿರುವ ಗುತ್ತಿಗೆದಾರ ಮರಗಳನ್ನು ಕತ್ತರಿಸಿ ತುಂಡರಿಸಿದ್ದಾರೆ.
ಗಿಡ ನೆಟ್ಟಿದ್ದ ಮಾಜಿ ಶಾಸಕ ರಾಮಯ್ಯ: ಪರಿಸರ ಪ್ರೇಮಿ ಸಾಲು ಮರಗಳ ಸರದಾರ ಎಂದೇ ಪ್ರಸಿದ್ಧಿ ಯಾಗಿದ್ದ ದಿ.ವೈ.ಕೆ.ರಾಮಯ್ಯ ಶಾಸಕರಾಗಿದ್ದ ಸಂದರ್ಭದಲ್ಲಿ ತಾಲೂಕಾದ್ಯಂತ ಗಿಡ ನೆಡುವ ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ನೂರಾರು ಗಿಡಗಳನ್ನು ನೆಟ್ಟು ಬೆಳೆಸಿದ್ದರು.
Related Articles
ಅಭಿವೃದ್ಧಿಗೆ ಮರಕ್ಕೆ ಕೊಡಲಿ: ಪ್ರಥಮ ದರ್ಜೆ ಕಾಲೇಜಿನ ಇಡೀ ಮೈದಾನ ಹಸಿರಿನಿಂದ ಕಂಗೊಳಿಸು ತ್ತಿತ್ತು. ಯಾವುದೇ ಅಭಿವೃದ್ಧಿಗೂ ತೊಂದರೆಯಾಗದಂತೆ ಮೈದಾನದ ಸುತ್ತಲು ಹಾಗೂ ಒಂದು ಕಡೆ ಮಾತ್ರ ಗಿಡ ನೆಟ್ಟು ಬೆಳೆಸಲಾಗಿತ್ತು. ಆದರೆ ಈಗ ಅಭಿವೃದ್ಧಿ ನೆಪದಲ್ಲಿ ಮೈದಾನದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ಮರ ಗಳನ್ನು ನೆಲಕ್ಕೆ ಉರುಳಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆ: ಕಾಂಪೌಂಡ್ ಪಕ್ಕದಲ್ಲಿ ಇರುವ ಯಾವುದೇ ಅಭಿವೃದ್ಧಿಗೂ ಅಡ್ಡಿಯಾಗದೆ ಇರುವ ಮರಗಳನ್ನು ಸಹ ಕತ್ತರಿಸುತ್ತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಜೊತೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಮರ ಕತ್ತರಿಸುವ ಧೋರಣೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಹಿಗ್ಗಾಮಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.
ಸಾರ್ವಜನಿಕರ ಆಕ್ರೋಶ: ಹಸಿರೇ ಉಸಿರು, ಮರ ಗಿಡ ಬೆಳಸದಿದ್ದರೇ ಮಾನವನ ಬದುಕು ನರಕ ವಾಗಲಿದೆ. ಕೆಲವೇ ದಿನಗಳ ಹಿಂದೆ ಪರಿಸರ ದಿನಾ ಚರಣೆ ಸಮಾರಂಭದಲ್ಲಿ ಮಾರುದ್ದ ಭಾಷಣ ಮಾಡಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು ತಾಲೂಕಿನ ಇಷ್ಟು ಸಾವಿರ ಗಿಡ ನಡುವ ಗುರಿ ಹೊಂದಲಾಗಿದೆ ಎಂದು ಬೊಬ್ಬೆ ಹಾಕಿದರು. ಗಿಡ ನಡೆಲು ಇರುವ ಉತ್ಸಾಹ ಬೆಳೆದು ನಿಂತ್ತಿರುವ ಮರಗಳನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿ ಯಾಕೆ ಇಲ್ಲ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಅರಣ್ಯ ಇಲಾಖೆ ಎದುರು ಹೋರಾಟ: ಈಗಾಗಲೇ ಪಟ್ಟಣದ ಮುಖ್ಯ ರಸ್ತೆ ಅಭಿವೃದ್ಧಿಗಾಗಿ ನೂರಾರು ಬೃಹತ್ ಮರಗಳನ್ನು ಕತ್ತರಿಸಲಾಗಿದೆ. ಇಲ್ಲಿಯೂ ಅವ್ಯಕತೆ ಇಲ್ಲದಿರುವ ಮರಗಳನ್ನು ಹಣದ ಆಸೆಗೆ ನೆಲಕ್ಕೆ ಉರುಳಿಸಲಾಗಿದೆ. ಈಗ ಮತ್ತೆ ಮರ ಕತ್ತರಿಸಲು ಅರಣ್ಯ ಇಲಾಖೆ ಮುಂದಾಗಿ ರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈಗಲೂ ಅರಣ್ಯ ಇಲಾಖೆ ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕತ್ತರಿಸುವ ಧೋರಣೆ ಮುಂದುವರಿಸಿದರೇ ಸಾರ್ವಜನಿಕರು ಅರಣ್ಯ ಇಲಾಖೆ ವಿರುದ್ಧ ಉಗ್ರ ಹೋರಾಟ ರೂಪಿಸಬೇಕಾ ಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
● ಕೆ.ಎನ್.ಲೋಕೇಶ್