1. ನಿನ್ನ ದೇಗುಲ ಪ್ರೀತಿಯನ್ನು ಕಂಡಿದ್ದೇನೆ. ನಾನೂ ಅದನ್ನು ನಂಬುತ್ತೇನೆ. ನನ್ನ ಪ್ರಕಾರ, ಕನ್ನಡ ಶಾಲೆಗಳೂ ದೇಗುಲಗಳಿದ್ದಂತೆ. ನೀನು ಅಧಿಕಾರದಲ್ಲಿದ್ದಷ್ಟೂ ದಿನ, ಕನ್ನಡ ಶಾಲೆಗಳನ್ನೂ “ದೇಗುಲ’ವೆಂದು ಪರಿಗಣಿಸಬಾರದೇಕೆ? ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳು ವಾರದಲ್ಲಿ ಕನಿಷ್ಠ ಒಂದೆರಡು ಸಲವಾದರೂ ದಾರಿಯಲ್ಲಿ ಸಿಗುವ ಕನ್ನಡ ಶಾಲೆಗಳಿಗೆ ಅಗತ್ಯವಾಗಿ ಭೇಟಿ ನೀಡಿ. ಆಗ ಕನ್ನಡ ಶಾಲೆಗಳ ಆಕರ್ಷಣೆ ಹೆಚ್ಚಿ, ಅಭಿವೃದ್ಧಿ ಕಾಣುತ್ತೆ. ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಹಾಡುವ “ಶಾಲಾದೇಗುಲ ಯಾತ್ರೆ’ಯನ್ನು ಸರಕಾರ ಕೈಗೊಳ್ಳಬಹುದೇ?
2. ಇವತ್ತು ಕಂಪ್ಯೂಟರಿನ ಮುಂದೆ ಕುಳಿತ ಕರುನಾಡಿನ ಪುಟಾಣಿ, ಕನ್ನಡದಲ್ಲಿ ಆರ್ಕಿಮಿಡಿಸ್ಸೋ, ಮಾರ್ಕೋನಿಯನ್ನೋ ಗೂಗಲ್‌ನಲ್ಲಿ ಹುಡುಕಿದರೆ, ಬೆರಳೆಣಿಕೆಯ ಕೊಂಡಿಗಳನ್ನು ಬಿಟ್ಟರೆ ಜಾಸ್ತಿ ಪುಟಗಳು ತೆರೆದುಕೊಳ್ಳುವುದಿಲ್ಲ. ಅದೇ ಜಪಾನಿನ ಮಗು ವಿಗೋ ಚೀನದ ಪುಟಾಣಿಗೋ ಈ ಸಮಸ್ಯೆ ಕಾಡದು. ಅಲ್ಲಿ ಮಾತೃಭಾಷೆಯಲ್ಲಿಯೇ ಸಕಲ ಜ್ಞಾನಸರಕುಗಳು ಸಿಗುತ್ತವೆ. ನನ್ನ ಕನ್ನಡಕ್ಕೆ ತಾಂತ್ರಿಕ ಬಲ ತುಂಬಬಹುದೇ?
3. ಕರ್ನಾಟಕದಲ್ಲಿ ಪ್ರತಿವರ್ಷ ಸಹಸ್ರಾರು ಸಾಫ್ಟ್ವೇರ್ ಎಂಜಿನಿಯರರು ಹುಟ್ಟುತ್ತಾರೆ. ಅದರಲ್ಲಿ ಲಕ್ಷಾಂತರ ಟೆಕ್ಕಿಗಳು ಬೆಂಗಳೂರಿನಲ್ಲೇ ಇದ್ದಾರೆ. ನೂರರಲ್ಲಿ ಓರ್ವ ತಂತ್ರಜ್ಞಾನಿ, ಕನ್ನಡ ಭಾಷೆಯ ಅಭಿವೃದ್ಧಿಗೆ ದುಡಿಯುವಂತೆ ಮಾಡಿದರೂ ಸಾಕಲ್ಲವೇ? ಯಾವುದಾದರೂ ಪ್ರತಿಷ್ಠಿತ ಸಾಫ್ಟ್ವೇರ್ ಸಂಸ್ಥೆಗೆ ಪಂಚವಾರ್ಷಿಕ ಯೋಜನೆ ರೀತಿ, ಕನ್ನಡವನ್ನು ತಾಂತ್ರಿಕವಾಗಿ ವಿಸ್ತರಿಸುವ ಕೆಲಸ ನೀಡಬಹುದೇ?
4. ಎಷ್ಟೋ ಕನ್ನಡಿಗರಿಗೆ ಇಂದು ಕನ್ನಡದಲ್ಲಿ ನ್ಯಾಯವೇ ಸಿಗುತ್ತಿಲ್ಲ. ನ್ಯಾಯಾಲಯಗ ಳಲ್ಲೂ ಇಂಗ್ಲಿಷ್ ಪ್ರಾಬಲ್ಯ ಮೆರೆದಿದೆ. ಈ ನ್ಯಾಯ ದೇಗುಲಗಳನ್ನು ಸಂಪೂರ್ಣವಾಗಿ ಕನ್ನಡಮಯ ಮಾಡಲು ಅಗತ್ಯ ಕ್ರಮ ಕೈಗೊಳ್ಳಬಹುದೇ?
5. ಕಡತಗಳು ಕನ್ನಡದಲ್ಲಿದ್ದರಷ್ಟೇ ಸಹಿ ಹಾಕುವೆ ಎಂಬ ನಿನ್ನ ನಿರ್ಧಾರವನ್ನು ಮೆಚ್ಚಿದೆ. ಈ ಕ್ರಮವನ್ನು ನೀನೊಬ್ಬನೇ ಕೈಗೊಂಡರೆ ಸಾಲದು ಎನ್ನುವ ಭಾವನೆ ನನ್ನದು. ಸರಕಾರದ ಎಲ್ಲ ಸಚಿವರು, ಅಧಿಕಾರಿಗಳಿಗೂ ಇದು ಅನ್ವಯವಾಗುವ ಹಾಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬಹುದೇ?
6. ಕನ್ನಡದಲ್ಲಿ ಓದಿ ಮುಗಿಸಿದವನಿಗೆ ಇಂದು ಕೆಲಸ ಸಿಗುವುದೇ ಅನುಮಾನ ಎನ್ನುವ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ನಾಡಿನ ಯಾವ ಮಗುವಿಗೂ “ಕನ್ನಡವನ್ನು ನಂಬಿ ಬೀದಿಗೆ ಬಂದೆ’ ಎನ್ನುವ ಹತಾಶ ಭಾವ ಹುಟ್ಟಬಾರದು. ಸರಕಾರಿ, ಖಾಸಗಿ ಸಂಸ್ಥೆಗಳ ನೇಮಕಾತಿಯಲ್ಲಿ ಕನ್ನಡದಲ್ಲಿ ವ್ಯಾಸಂಗ ಮಾಡಿದವರಿಗೆ ಹೆಚ್ಚು ಆದ್ಯತೆ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದೇ?