ಹಗರಿಬೊಮ್ಮನಹಳ್ಳಿ: ಸರ್ಕಾರ ಅಂಗವಿಕಲರಿಗೆ, ವಿಧವೆಯರಿಗೆ ಸೇರಿ ಇತರೆ ಫಲಾನುಭವಿಗಳಿಗೆ ಸಾಮಾಜಿಕ ಭದ್ರತೆ ಯೋಜನೆಯಡಿ ನೀಡಲಾಗುವ ಮಾಸಾಶನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗವಿಕಲ ಮತ್ತು ಪಾಲಕರ ಒಕ್ಕೂಟದ ಪದಾಧಿಕಾರಿಗಳು ತಾಲೂಕು ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಉಸ್ಮಾನ್‌ಬಾಷಾ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚುನಾವಣೆ ಪೂರ್ವದಲ್ಲಿ ಮಾಸಾಶನ ಹೆಚ್ಚಿಸುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಮಾತು ತಪ್ಪಿವೆ.
ಸರ್ಕಾರಗಳು ಕೂಡಲೇ ಎಚ್ಚೆತ್ತು ಸಾಮಾಜಿಕ ಭದ್ರತೆ ಯೋಜನೆಯಡಿ ನೀಡುವ ಮೊತ್ತವನ್ನು ಹೆಚ್ಚಿಸಿ ಫಲಾನುಭವಿಗಳಿಗೆ ಆಸರೆಯಾಗಬೇಕು. ಶೇ.40ರಿಂದ 74ರಷ್ಟು ಅಂಗವಿಕಲತೆ ಹೊಂದಿದವರಿಗೆ 3 ಸಾವಿರ ರೂ.ಮಾಸಾಶನ ನೀಡಬೇಕು. ವಿಧವೆಯರು, ಹಿರಿಯ ನಾಗರಿಕರು, ಮಂಗಳಮುಖೀಯರು ಮತ್ತು ವಿಚ್ಛೇತರಿಗೆ 3 ಸಾವಿರ ರೂ.ಗೆ ಹೆಚ್ಚಿಸಿ,ಆ ತಿಂಗಳ ಮೊದಲ ವಾರದೊಳಿಗೆ ಮೊತ್ತವನ್ನು ನೀಡಬೇಕು. ಅಂಗವಿಕಲರಿಗೆ ಸಹಕಾರಿಯಾಗಿ ಮೇಲ್ಮಡಿಯಲ್ಲಿನ ಸರ್ಕಾರಿ ಕಚೇರಿ ಮತ್ತು ಬ್ಯಾಂಕ್ ಗಳನ್ನು ಕೆಳಭಾಗದ ಕಟ್ಟಡಕ್ಕೆ ಸ್ಥಳಾಂತರಿಸಬೇಕು.
ಅಂಗವಿಕಲರಿಗೆ ವಿವಿಧ ಸೌಲಭ್ಯ ಹೊಂದಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವುದನ್ನು ಕೂಡಲೇ ಕೈ ಬಿಡಬೇಕೆಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ಸಂಘದ ಪದಾಧಿಕಾರಿಗಳು ಹಾಗೂ ಫಲಾನುಭವಿಗಳು ಪಟ್ಟಣದ ಈಶ್ವರ ದೇವಸ್ಥಾನದಿಂದ ಬಸವೇಶ್ವರ ಬಜಾರಿನಲ್ಲಿ ಬೃಹತ್ ಮೆರವಣಿಗೆ ಮಾಡುವ ಮೂಲಕ ಸರ್ಕಾರಗಳನ್ನು ಎಚ್ಚರಿಸಿದರು.
ಪ್ರಾಂತರೈತ ಸಂಘದ ಕೊಟಿಗಿ ಮಲ್ಲಿಕಾರ್ಜುನ, ಬರಹಗಾರ ಮೇಟಿ ಕೊಟ್ರಪ್ಪ, ಜನವಾದಿ ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷೆ ಸರ್ದಾರ್ ಹುಲಿಗೆಮ್ಮ, ಕಾರ್ಯದರ್ಶಿ ಜಿ.ಸರೋಜ ಮಾತನಾಡಿದರು. ಉಪ ತಹಶೀಲ್ದಾರ್ ನಾಗರಾಜಗೆ ಒಕ್ಕೂಟದ ತಾಲೂಕು ಅಧ್ಯಕ್ಷ ಜವಳಿ ಕೊಟ್ರೇಶಪ್ಪ ಮನವಿ ಸಲ್ಲಿಸಿದರು. ಒಕ್ಕೂಟದ ಚಾಂದ್ ಬಿ, ಡಿ.ಬಸವರಾಜ, ರೇಣುಕಮ್ಮ, ಹುಲುಗಪ್ಪ, ಕಮ್ಮಾರ್ ಬಸವರಾಜ, ರಾಜಾ, ಶಂಕರಮ್ಮ, ನಾಗರತ್ನಮ್ಮ, ಕವಿತಾ, ವಿದ್ಯಾ ಇದ್ದರು.