Advertisement

14 ಗಂಟೆ ತ್ರಿಫೇಸ್‌ ವಿದ್ಯುತ್‌ ಕೊಡಿ

07:07 AM Jan 17, 2019 | |

ಹರಿಹರ: ನಿರಂತರ 14 ಗಂಟೆ ತ್ರಿಫೇಸ್‌ ವಿದ್ಯುತ್‌ ನೀಡಲು ಆಗ್ರಹಿಸಿ ನಗರದಲ್ಲಿ ಬುಧವಾರ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪಕ್ಕೀರಸ್ವಾಮಿ ಮಠದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ರೈತರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬಿ.ಪಿ.ಹರೀಶ್‌, ಕೃಷಿಗೆ ಕೇವಲ 4-5 ತಾಸು ವಿದ್ಯುತ್‌ ನೀಡಲಾಗುತ್ತಿದ್ದು, ಅದನ್ನೂ ಸಹ ಸಮರ್ಪಕವಾಗಿ ಪೂರೈಸುತ್ತಿಲ್ಲ. ಪದೇ ಪದೆ ಲೋಡ್‌ ಶೆಡ್ಡಿಂಗ್‌ ಆಗುವುದರಿಂದ ಅರ್ಧ ಎಕರೆ ಜಮೀನಿಗೂ ನೀರು ಹಾಯುತ್ತಿಲ್ಲ. ಈಗಾಗಲೇ ಸತತ ಬರದಿಂದ ಕಂಗಾಲಾಗಿರುವ ರೈತರು ವಿದ್ಯುತ್‌ ಅಭಾವದಿಂದ ಪ್ರಸಕ್ತ ಹಂಗಾಮಿನ ಬೆಳೆಯನ್ನೂ ಕಾಣದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ನೆರವಾಗುವುದಾಗಿ ಹೇಳುವ ಸರ್ಕಾರ, ಕೃಷಿಗೆ ಕನಿಷ್ಟ ಪ್ರಮಾಣದ ವಿದ್ಯುತ್‌ ಸಹ ಪೂರೈಸುತ್ತಿಲ್ಲ. ಸಾಲ ಮಾಡಿ ಬಂಡವಾಳ ಹಾಕಿ ನಾಟಿ ಮಾಡಿರುವ ರೈತರು ವಿದ್ಯುತ್‌ ಕೊರತೆಯಿಂದ ಸಂಕಷ್ಟ ಎದುರಿಸಬೇಕಾಗಿದೆ. ಒಂದು ಕಡೆ ಸಾಲ ಮನ್ನಾ ಮಾಡಿದ್ದಾಗಿ ಕೊಚ್ಚಿಕೊಳ್ಳುವ ಸರ್ಕಾರ ಮತ್ತೂಂದು ಕಡೆ ರೈತರ ಮೇಲೆ ಬರೆ ಎಳೆಯುತ್ತಿದೆ ಎಂದು ಟೀಕಿಸಿದರು.

ತಾಲೂಕಿನ ನೀರಾವರಿ ಇಲಾಖೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಅಧಿಕಾರಿಗಳಿಲ್ಲ. ಮಲೆಬೆನ್ನೂರು ವಿಭಾಗ ವ್ಯಾಪ್ತಿಯಲ್ಲಿ ಕೇವಲ ಒಬ್ಬ ಇಂಜಿನಿಯರ್‌ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದಲ್ಲಿರುವ ತಾಲೂಕಿನ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಜಲಾಶಯದಲ್ಲಿ ನೀರಿದ್ದರೂ ಮೇಲುಸ್ತುವಾರಿ ಇಲ್ಲದ್ದರಿಂದ ನಮ್ಮ ಜಮೀನುಗಳಿಗೆ ತಲುಪುತ್ತಿಲ್ಲ. ಕೂಡಲೆ ಸಂಬಂಧಪಟ್ಟವರು ನೀರಾವರಿ ಇಲಾಖೆಗೆ ಅಗತ್ಯ ಅಧಿಕಾರಿ, ಸಿಬ್ಬಂದಿ ನೇಮಿಸಬೇಕು. ರೈತರಿಗೆ 14 ತಾಸು ನಿರಂತರ ವಿದ್ಯುತ್‌ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಓಂಕಾರಪ್ಪ ಮಾತನಾಡಿ, ನಿರಂತರ ಜ್ಯೋತಿ ನೆಪದಲ್ಲಿ ಸರ್ಕಾರ ಕೇವಲ 7 ತಾಸು ವಿದ್ಯುತ್‌ ನೀಡುತ್ತಿದ್ದು, ಗ್ರಾಮಗಳಲ್ಲಿ ಕುಡಿವ ನೀರು ತುಂಬಿಸಿಕೊಳ್ಳಲೂ ಸಹ ಇದು ಸಾಕಾಗುತ್ತಿಲ್ಲ. ಕೈಗಾರಿಕೆಗಳಿಗೆ ಎಗ್ಗಿಲ್ಲದೆ ವಿದ್ಯುತ್‌ ನೀಡುತ್ತಿರುವ ಇಲಾಖೆ ದುಡಿಯುವ ಅನ್ನದಾತನಿಗೆ ವಿದ್ಯುತ್‌ ಕೊಡುತ್ತಿಲ್ಲ ಎಂದರು.

Advertisement

ಮನವಿ ಸ್ವೀಕರಿಸಿದ ಬೆಸ್ಕಾಂ ಅಧಿಕಾರಿಗಳು ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ತಹಶೀಲ್ದಾರ್‌ ರೆಹನ್‌ಪಾಷಾ, ಎಇಇ ರಮೇಶ್‌, ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿದ್ದರು.

ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಪ್ರಭುಗೌಡ, ಮುಖಂಡರಾದ ಎಂ.ಬಿ. ಪಾಟೀಲ್‌, ಮಹೇಶ್ವರಪ್ಪ ದೊಗ್ಗಳ್ಳಿ, ಹುಲಿಗಿನೊಳೆ ರುದ್ರೇಶ್‌, ಚಂದ್ರಪ್ಪ, ಹರೀಶ್‌, ಕುಬೇರಗೌಡ, ಅಂಜಿನಪ್ಪ ಹಾಲಿವಾಣ, ಹನುಮಂತಪ್ಪ, ಮಂಜಪ್ಪ, ಕೆ.ಎನ್‌.ಹಳ್ಳಿ ರುದ್ರಗೌಡ, ಎಳೆಹೊಳೆ ರಾಮು ಮತ್ತಿತರರಿದ್ದರು.

18ರಂದು ಮತ್ತೆ ರೈತರ ಪ್ರತಿಭಟನೆ
ಮಲೇಬೆನ್ನೂರು:
ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 12 ಗಂಟೆ ತ್ರಿಫೇಸ್‌ ವಿದ್ಯುತ್‌ ಪೂರೈಕೆ ಹಾಗೂ ಭದ್ರಾ ನಾಲೆಯ ಕೊನೆಯ ಭಾಗದ ಜಮೀನುಗಳಿಗೆ ಸಮರ್ಪಕವಾಗಿ ನೀರು ಒದಗಿಸುವಂತೆ ಒತ್ತಾಯಿಸಿ ಜ. 18ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಹರಿಹರ ತಾಲೂಕಿನ ಕೊನೆಭಾಗದ ರೈತರು ಎಚ್ಚರಿಸಿದ್ದಾರೆ. ಮಲೇಬೆನ್ನೂರು ನೀರಾವರಿ ನಿಗಮದ ಆವರಣದಲ್ಲಿ ರೈತ ಮುಖಂಡ ಡಿ. ಷಣ್ಮುಖಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.18ರಂದು ಬೆಳಗ್ಗೆ ನಂದಿಗುಡಿ ರಸ್ತೆಯಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದಿಂದ ಬೆಸ್ಕಾಂ ಮತ್ತು ನೀರಾವರಿ ಇಲಾಖೆಯವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು ತಿಳಿಸಿದರು. ಈಗ ಹಾಲಿ 7 ತಾಸು ವಿದ್ಯುತ್‌ ನೀಡುತ್ತಿದ್ದು, ಅದೂ ನಿರಂತರವಾಗಿ ಪೂರೈಕೆಯಾಗುತ್ತಿಲ್ಲ. ಇದರಿಂದ ಹೊಲಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರೈತರ ಪಂಪ್‌ಸೆಟ್‌ಗಳಿಗೆ 12 ಗಂಟೆ ನಿರಂತರವಾಗಿ ತ್ರಿಫೇಸ್‌ ವಿದ್ಯುತ್‌ ನೀಡಬೇಕು.

ಇದಲ್ಲದೇ ಬೆಸ್ಕಾಂನಿಂದ ಕಳಪೆ ಪರಿಕರ ಬಳಕೆ, ಸಮರ್ಪಕ ನೀರು ನಿರ್ವಹಣೆ, ಸಿಬ್ಬಂದಿ ನೇಮಕ, ಅಕ್ರಮ ಪಂಪ್‌ಸೆಟ್‌ಗಳ ತೆರವು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.18ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಷಣ್ಮುಖಯ್ಯ ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿಂಡಸಘಟ್ಟದ ಪಿ. ನಿಜಗುಣ, ವಾಸನದ ಕೆ. ಮಲ್ಲಪ್ಪ, ಟಿ.ಪಿ. ಬಸವರಾಜ್‌, ಪಿ.ಬಿ. ಸಂಗಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next