ಉಡುಪಿ: ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಕೇವಲ ಪುಣ್ಯಗ್ರಂಥವಲ್ಲ. ಅದು ನಾವು ಎದುರಿಸುವ ಸಮಸ್ಯೆಗಳ ನಿವಾರಣೆಗೆ ಮಾರ್ಗೋಪಾಯ ಬೋಧಿಸುವ ಗ್ರಂಥ. ಆದ್ದರಿಂದ ವಿದ್ಯಾರ್ಥಿಗಳು ಗೀತಾಧ್ಯಯನವನ್ನು ಅಗತ್ಯವಾಗಿ ನಡೆಸಬೇಕು ಎಂದು ಭಾವೀ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಎಂಜಿಎಂ ಕಾಲೇಜಿನ ನವೀಕೃತ ಮುದ್ದಣ ಮಂಟಪವನ್ನು ಶನಿವಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಪಾದರು, ವಿದೇಶಗಳಲ್ಲಿ ಮಹಾ ಭಾರತವನ್ನು ಪಠ್ಯವಾಗಿ ಕಲಿಸುತ್ತಾರೆ. ಇದನ್ನು ಭಾರತದಲ್ಲಿಯೂ ಜಾರಿಗೊಳಿಸುವ ಕಾರ್ಯವಾಗಬೇಕು ಎಂದರು.
ಗೀತೆಯಲ್ಲಿ ಹೇಳಿದಂತೆ ಜೀವನದಲ್ಲಿ ಅನುಸರಿಸಿದರೆ ಶ್ರೀಕೃಷ್ಣನಿಗೆ ಪ್ರಿಯವಾಗುತ್ತದೆ. ಹೀಗಾಗಿಯೇ ನಾವು ಚತುರ್ಥ ಪರ್ಯಾಯದಲ್ಲಿ ಕೋಟಿ ಜನರಿಂದ ಗೀತೆಯನ್ನು ಬರೆಸುವ ಮಹತ್ವಾಕಾಂಕ್ಷಿ ಯೋಜನೆಗೆ ಸಂಕಲ್ಪಿಸಿ ದ್ದೇವೆ. ಜಗತ್ತಿನ ವಿವಿಧೆಡೆಯ ಜನರು ಈಗಾಗಲೇ ಗೀತಾ ಲೇಖನಯಜ್ಞವನ್ನು ಆರಂಭಿಸಿದ್ದು ಅವರಿಗಾದ ಸಕಾರಾತ್ಮಕ ಅನುಭವವೂ ನಮಗೆ ತಲುಪುತ್ತಿದೆ. ಆಧುನಿಕ ಕಾಲದ ಜಿಪಿಎಸ್ ಇದ್ದಂತೆ ಗೀತೆ ನಮ್ಮ ಜೀವನದಲ್ಲಿದ್ದರೆ ಅದು ಸದಾ ನಮಗೆ ಮಾರ್ಗದರ್ಶನ ತೋರುತ್ತದೆ. ಎಂಜಿಎಂ ಕಾಲೇಜು ಉಡುಪಿಯ ಹೆಮ್ಮೆಯ ಸಂಸ್ಥೆ ಎಂದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷ, ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಅವರು ಮಾತನಾಡಿ, ಡಾ| ಟಿಎಂಎ ಪೈಯವರ ದೂರದರ್ಶಿತ್ವ ಮತ್ತು ಪ್ರಯತ್ನದಿಂದ 1949ರಲ್ಲಿ ಮಹಿಳೆಯರ ಸಹಶಿಕ್ಷಣ ಪದ್ಧತಿ ಜಾರಿಗೆ ಬಂತು. ಈಗ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮವಾಗಿದ್ದು ಇದರ ಅಂಗವಾಗಿ ಮುದ್ದಣ ಮಂಟಪವನ್ನು ನವೀಕರಿಸಲಾಗಿದೆ. ಇದೇ ಸ್ಥಳದಲ್ಲಿ ಡಾ| ಶಿವರಾಮ ಕಾರಂತ, ಕೆ.ಕೆ.ಹೆಬ್ಟಾರ್, ಬಿ.ವಿ.ಕಾರಂತರಂತಹ ದಿಗ್ಗಜರ ಕಾರ್ಯಕ್ರಮಗಳು ಜರಗಿವೆ ಎಂದರು.
ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ಅಧ್ಯಕ್ಷತೆ ವಹಿಸಿದ್ದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ|ಲಕ್ಷ್ಮೀನಾರಾಯಣ ಕಾರಂತ ಸ್ವಾಗತಿಸಿ, ಪ.ಪೂ.ಕಾಲೇಜು ಪ್ರಾಂಶುಪಾಲೆ ಮಾಲತಿದೇವಿ ವಂದಿಸಿದರು. ಗಣಕವಿಜ್ಞಾನ ವಿಭಾಗದ ಪ್ರಾಧ್ಯಾ ಪಕಿ ದೀಪಾಲಿ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಎಂಜಿಎಂ ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ ನಾಯ್ಕ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ| ಪುತ್ತಿ ವಸಂತಕುಮಾರ್ ಪರಿಚಯಿಸಿದರು. ಸ್ವಾಮೀಜಿಯವರು ಕಾಲೇಜಿನ ಸಿಬಂದಿ, ವಿದ್ಯಾರ್ಥಿಗಳಿಗೆ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ನೀಡಿದರು.