Advertisement

ಗೀತಾ ಷಟ್ಪದಿ ಪುಸ್ತಕ ಬಿಡುಗಡೆ 

04:15 PM Jun 08, 2018 | |

ಬಂಟ್ವಾಳ : ಗೀತೆಯನ್ನು ಜರೆಯುವ, ಯುದ್ಧಪ್ರೇರಣೆ ನೀಡುವ ಗ್ರಂಥವೆಂದು ವ್ಯಾಖ್ಯಾನ ಮಾಡಿಕೊಳ್ಳುವ ಬುದ್ಧಿªಜೀವಿಗಳಿಗೆ ಗೀತೆಯ ಸಮಗ್ರಅರ್ಥ ತಿಳಿದಿಲ್ಲ. ಗೀತೆಯನ್ನು ಜಗತ್ತಿನ ಎಲ್ಲ ವಿದ್ವಾಂಸರು ಒಪ್ಪಿಕೊಂಡರೂ ನಮ್ಮಲ್ಲಿಯೇ ಕೆಲವರು ಅಪಸ್ವರವನ್ನು ಎತ್ತುತ್ತಿದ್ದಾರೆ. ನಾನು ಬಂಟ ಸಮಾಜದ ಅಧ್ಯಕ್ಷನಾಗಿ ಕೆಲಸ ಮಾಡಿದಾಗ ಟೀಕಿಸಲಿಲ್ಲ. ವಿಹಿಂಪ ಅಧ್ಯಕ್ಷನಾದಾಗ ಜಾತಿವಾದಿ ಎಂದು ದೂರಲಾರಂಭಿಸಿದರು. ಎಲ್ಲ ಜಾತಿ- ಮತಗಳನ್ನು ಒಟ್ಟಾಗಿ ಕೊಂಡು ಹೋಗುವ ಸಾಮರ್ಥ್ಯ ಹಿಂದೂ ಧರ್ಮಕ್ಕಿದೆ ಎಂದು ಭಾರತ ಸಂಸ್ಕೃತಿ ಪ್ರತಿಷ್ಠಾನದ ಕುಲಪತಿ ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹೇಳಿದರು.

Advertisement

ಅವರು ಜೂ. 5ರಂದು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಪ್ರಹ್ಲಾದ ಮಂಟಪದಲ್ಲಿ ಜಿಲ್ಲಾ ಕಸಾಪ, ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಅಬ್ಬೆಯ ಮಜಲು ನರಿಕೊಂಬು ಸಹಯೋಗದಲ್ಲಿ ವೇ| ಮೂ| ಅನಂತ ಭಟ್‌ ಅವರ ಗೀತಾ ಷಟ್ಪದಿ ಕನ್ನಡ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ವೇದಗಳು ಇಡೀಯ  ಜಗತ್ತಿಗೆ ಒಳ್ಳೆಯದನ್ನು ಸಾರುವ ಧರ್ಮಗ್ರಂಥಗಳು. ಗೀತೆಯ ಬಗ್ಗೆ ಅನೇಕ ಹೊಸ ವ್ಯಾಖ್ಯಾನಗಳು ಬಂದಿವೆ ಎಂದು ಅವರು ಹೇಳಿದರು.

ಮನುಷ್ಯನ ಬೆಲೆ ಅವನ ಸಾಧನೆಯಲ್ಲಿ
ಕೃತಿಯು ಭಾಮಿನಿ ಷಟ್ಪದಿಯಲ್ಲಿ ಇದೆ. ಗದ್ಯದಲ್ಲಿ ಬರೆದಾಗ ಸಿಗುವ ಸಾಹಿತ್ಯ ರಸಕ್ಕಿಂತ ಪದ್ಯದಲ್ಲಿ ದೊರೆಯುವ ಸ್ವಾದ ಹೆಚ್ಚು.ಮನುಷ್ಯನ ಬೆಲೆ ಅವನ ಸಾಧನೆಯಲ್ಲಿ ಇದೆ. ಟೀಕಿಸುವುದರಲ್ಲಿ ಯಾರೂ ದೊಡ್ಡವರಾಗುವುದಿಲ್ಲ ಎಂದರು. ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢ ಸಂಚಾಲಕ ವೇ| ಮೂ| ಜನಾರ್ದನ ಭಟ್‌ ಮಾತನಾಡಿ, ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ನಿರಂತರವಾಗಿ ಒಂದು ಕಲೆಯ ಬೆಳವಣಿಗೆಗಾಗಿ ನಿರಂತರ ಶ್ರಮಿಸುತ್ತಿದೆ. ಮಕ್ಕಳಲ್ಲಿ ಕಲಾಭಿರುಚಿ ಸೃಷ್ಟಿಸಿ ಅವರನ್ನು ವೇದಿಕೆಗೆ ಕರೆತರುವ ಕೆಲಸ ಮಾಡುತ್ತಿದೆ. ಕಲೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಎಸ್‌. ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಗೀತೆಯೂ ಯಾವುದೇ ಜಾತಿ-ಮತಕ್ಕೆ ಸೀಮಿತವಲ್ಲ. ಒಳ್ಳೆಯ ಸಾಹಿತ್ಯದ ಮೂಲಕ ಮನಸ್ಸು ಅರಳುತ್ತದೆ. ಗೀತೆ ಮನುಕುಲಕ್ಕೆ ಮಾರ್ಗದರ್ಶಿ ಎಂದರು. ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಎ.ವಿ. ನಾವಡ, ಕೃತಿಕರ್ತ ಪೊಳಲಿ ವೇ| ಮೂ| ಅನಂತ ಭಟ್‌ ಮಾತನಾಡಿದರು. ಇದೇ ಸಂದರ್ಭ ಎಸ್‌ಎಸ್‌ ಎಲ್‌ಸಿ, ಪಿಯುಸಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಲಾಯಿತು. ಗೀತಾ ಗಾಯನ ನಡೆಯಿತು.  ಕಲಾಕೇಂದ್ರ ಅಧ್ಯಕ್ಷ ಪಿ. ಕೃಷ್ಣರಾಜ ಭಟ್‌ ಸ್ವಾಗತಿಸಿ, ನಿರೂಪಿಸಿದರು. ಯತೀಶ್‌ ಶೆಟ್ಟಿ ವಂದಿಸಿದರು. ಡಾ| ಸುಬ್ರಹ್ಮಣ್ಯ ಭಟ್‌ ಮತ್ತು ವೆಂಕಟೇಶ್‌ ರಾವ್‌ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next