ಹೇಗಾದರೂ ಮಾಡಿ ಪರ್ಸ್‌ನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಬೇಕೆಂದು ನಿರ್ಧರಿಸಿದೆ. ಮಾರನೆ ದಿನ ಅವರನ್ನು ಹುಡುಕಿಕೊಂಡು ಆ ಖಾಸಗಿ ಕಂಪನಿಗೆ ಹೋಗಿ ವಿಚಾರಿಸಿದಾಗ ಅದು ಹಿರಿಯ ಜೀವವೆಂದು ತಿಳಿಯಿತು.
ಅಂದು ಸೂರ್ಯದೇವ ಸದ್ದಿಲ್ಲದೆ ನೆತ್ತಿಯ ಮೇಲೇರಿದ್ದ. ಗಡಿಯಾರದ ಚಿಕ್ಕಮುಳ್ಳು ಒಂಬತ್ತನ್ನು ಬಿಗಿದಪ್ಪಿಕೊಂಡಿತ್ತು. ಕಾಲೇಜಿಗೆ ಹೋಗೋ ಅವಸರದಲ್ಲಿ ಹೆಗಲಿಗೆ ಬ್ಯಾಗೇರಿಸಿ ಬಸ್ ಹಿಡಿದು ಕೂತೆ. ಇಪ್ಪತ್ತು ಕಿ.ಮೀ ಕ್ರಮಿಸಿದ್ದೇ ಗೊತ್ತಾಗಲಿಲ್ಲ. ಇನ್ನೇನು ಇಳಿಯಬೇಕೆನ್ನುವಷ್ಟರಲ್ಲಿ, ಸೀಟಿನ ಹಿಂಬದಿಯಲ್ಲಿ ಪರ್ಸೊಂದು ಸಿಕ್ಕಿತು. ಅದನ್ನು ಮೆಲ್ಲನೆ ಜೇಬಿನಲ್ಲಿಟ್ಟುಕೊಂಡು ಕೆಳಗಿಳಿದೆ.
ಕೆಲ ಹೆಜ್ಜೆಗಳ ನಂತರ ಪರ್ಸ್‌ನ್ನ ತೆರೆದಾಗ ಎರಡು ಸಾವಿರ ರೂಪಾಯಿಯ ನೋಟು ಕಾಣಿಸಿತು. ಕಾಂಚಾಣ ಅನ್ನೋದು ಯಾರಿಗೆ ಬೇಡ ಹೇಳಿ? ಹಣ ಅಂದರೆ ಹೆಣವೂ ಬಾಯಿ ಬಿಡೋ ಕಾಲವಲ್ಲವೇ ಇದು. ಅನಾಯಾಸವಾಗಿ ತಿಂಗಳಿನ ಖರ್ಚಿಗೆ ದಾರಿಯಾಯಿತು ಎಂದು ಲೆಕ್ಕಾಚಾರ ಹಾಕುತ್ತಾ ಕ್ಲಾಸ್ ಸೇರಿಕೊಂಡೆ. ಸಂಜೆ ತರಗತಿ ಮುಗಿಸಿ ಪುನಃ ನನ್ನೂರಿನ ಬಸ್ ಹತ್ತಿದೆ.
ಊರು ಹತ್ತಿರವಾಗುತ್ತಿದ್ದಂತೆ ಕುತೂಹಲದಿಂದ ಪರ್ಸ್‌ನ್ನು ತಡಕಾಡಿದಾಗ ಸಿಕ್ಕಿದ್ದು ಖಾಸಗಿ ಕಂಪನಿಯ ಐಡಿ ಕಾರ್ಡ್ ಮತ್ತು ಸ್ಯಾಲರಿ ಸ್ಲಿಪ್ ಮಾತ್ರ. ಪರ್ಸ್‌ನ ಮಾಲೀಕ, ನಗರದ ಖಾಸಗಿ ಕಂಪನಿಯೊಂದರ ಸೆಕ್ಯೂರಿಟಿ ಗಾರ್ಡ್ ಎಂಬುದು ಐಡಿ ಕಾರ್ಡ್‌ನಿಂದ ತಿಳಿಯಿತು. ಸ್ಯಾಲರಿ ಸ್ಲಿಪ್‌ನತ್ತ ದೃಷ್ಟಿ ನೆಟ್ಟಾಗ ಅದರಲಿದ್ದದ್ದು ಕೇವಲ ಐದು ಸಾವಿರ ರೂಪಾಯಿ. ಪಾಪ, ಆತನ ಪೇಮೆಂಟ್ ಅಷ್ಟೇ ಇರಬೇಕು ಅನ್ನಿಸಿ ಯಾಕೋ ಮನಸ್ಸು ಹೊಯ್ದಾಡಲು ಆರಂಭಿಸಿತು.
ಬೆಳಗ್ಗೆ ಮೂಡಿದ ಸಂತೋಷ ಈಗ ಮಾಯವಾಗಿತ್ತು. ಹೇಗಾದರೂ ಮಾಡಿ ಪರ್ಸ್‌ನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸಬೇಕೆಂದು ನಿರ್ಧರಿಸಿದೆ. ಮಾರನೆ ದಿನ ಅವರನ್ನು ಹುಡುಕಿಕೊಂಡು ಆ ಖಾಸಗಿ ಕಂಪನಿಗೆ ಹೋಗಿ ವಿಚಾರಿಸಿದಾಗ ಅದು ಹಿರಿಯ ಜೀವವೆಂದು ತಿಳಿಯಿತು. ಅವರನ್ನು ಕಂಡು, “ಅಜ್ಜಾ, ನಿಮ್ಮ ಪರ್ಸ್ ಸಿಕ್ಕಿದೆ. ತಗೊಳ್ಳಿ’ ಎಂದು ಹೇಳುವಷ್ಟರಲ್ಲಿ ಪಟ್ಟನೆ ಕೈಯಿಂದ ಪರ್ಸ್ ಕಸಿದುಕೊಂಡು ನೋಟು ಇರುವದನ್ನು ಖಾತ್ರಿ ಪಡಿಸಿಕೊಂಡರು.
ನಂತರ ನನ್ನನ್ನು ಬಿಗಿದಪ್ಪಿಕೊಂಡು, “ಪುಣ್ಯಾ ಬರ್ಲಿ ರೀ ನಿಮಗ. ಈ ರೊಕ್ಕಾ ಮಗಳ ಫೀ ಕಟ್ಟಾಕ ತಂದದ್ದು’ ಎಂದು ಕಾಲು ಹಿಡಿಯಲು ಬಂದರು. ಕುರ್ಚಿ ಹಾಕಿ ಕೂರಿಸಿ, ಗಿರ್ಮಿಟ್ ಮಿರ್ಚಿ ತಂದು ಉಪಚರಿಸಿ, “ಈಗಿನ ಕಾಲದಾಗ ನಿಮ್ಮಂತವ್ರು ಸಿಗೋದು ಭಾಳ ಅಪರೂಪ ಐತೀ , ನಿಮ್ಮನ್ನ ಆ ದೇವರು ಚೆನ್ನಾಗಿಡಲಿ ಸರ್’ ಎಂದು ಹೇಳುವಾಗ ಆತನ ಕಂಗಳು ಹನಿಗೂಡಿದ್ದವು. ಈ ಭಾವುಕತೆಯ ನಡುವೆಯೇ ಕೈ ಹಿಡಿದು ರೋಡ್ ದಾಟಿಸಿ, “ಹೋಗಿ ಬರ್ರಿ ಸರ್’ ಎಂದು ನಗುನಗುತ್ತಾ ಹೇಳಿ ಬೀಳ್ಕೊಟ್ಟರು.
* ಮಾಲತೇಶ ಖ. ಅಗಸರ