ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಆದಿವಾಸಿಗಳ ಪ್ರಮುಖ ಕುಂಡೆ ಹಬ್ಬವನ್ನು ತಾಲೂಕಿನ ನೇರಳಕುಪ್ಪೆ, ಹೆಬ್ಬಳ್ಳ ಸೇರಿದಂತೆ ಹಾಡಿಗಳ ಕಾಡಕುಡಿಗಳು ವಿವಿಧ ವೇಷ ಭೂಷಣ ಧರಿಸಿ, ಕುಣಿದು-ಕುಪ್ಪಳಿಸಿ ದಾರಿಹೋಕರನ್ನು ಜೇನು ನುಡಿಯಲ್ಲಿ ಅಣಕಿಸುತ್ತಾ, ಕೀಟಲೆ ಮಾಡುವ ಮೂಲಕ ಹಬ್ಬಕ್ಕೆ ಕಿಚ್ಚು ಹಚ್ಚಿ, ದೇವಪುರಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಹಾಡಿಗೆ ವಾಪಾಸಾದರು.
ಬೈಯ್ಯುವುದೇ ವಿಶೇಷ: ಕೊಡಗಿನ ಕಾಫಿ ಎಸ್ಟೇಟ್‌ಗಳಲ್ಲಿ ಕೆಲಸ ಮಾಡುವ ಆದಿವಾಸಿಗಳು ಮಾಲಿಕರಿಂದ ಬೈಸಿಕೊಳ್ಳುವುದರ ವಿರುದ್ಧ ಆಚರಿಸುವುದೇ ಕುಂಡೆ ಹಬ್ಬ. ಹಬ್ಬದ ದಿನವಿಡೀ ದಾರಿಯಲ್ಲಿ ಸಿಕ್ಕವರಿಗೆ, ಮಾಲಿಕರಿಗೆ ಹೀಗೆ ಎಲ್ಲರನ್ನೂ ತಮ್ಮ ಭಾಷೆಯಲ್ಲೇ ಬೈಯುವುದು, ಹಣ ಪೀಕುವುದು, ಕೊಡದಿದ್ದಲ್ಲಿ ಮತ್ತಷ್ಟು ಬೈಯ್ಯುವುದು. ಆದರೆ, ಹಬ್ಬ ಆಚರಿಸುವ ವೇಳೆ ಬೈಯುವ ಆದಿವಾಸಿಗಳನ್ನು ಯಾರೂ ಪ್ರಶ್ನಿಸುವಂತಿಲ್ಲ.
ಕೊನೆಗೆ ಕ್ಷಮೆಯಾಚನೆ: ಗಿರಿಜನ ಸಮುದಾಯಕ್ಕೆ ಸೇರಿದ ಬೆಟ್ಟಕುರುಬ, ಜೇನುಕುರುಬ, ಬುಡಕಟ್ಟು ಸಮುದಾಯಕ್ಕೆ ಸೇರಿದವರು ಆಚರಿಸುವ ಹಬ್ಬವಿದು. ಕಾಡಿನೊಳಗೆ ಪೂಜೆ ಸಲ್ಲಿಸುವಾಗ ಇತರರಿಗೆ ಇಲ್ಲಿಗೆ ಪ್ರವೇಶವಿಲ್ಲ. ಹಬ್ಬದಂದು ಸಂಗ್ರಹವಾಗುವ ಹಣ ಮತ್ತಿತರ ವಸ್ತುಗಳಿಂದ ದೇವರಕಾಡಿನಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಭಿಕ್ಷೆ ಬೇಡಿದ್ದ ಹಣದಲ್ಲಿಯೇ ಅಡುಗೆ ತಯಾರಿಸಿ ಎಲ್ಲರಿಗೂ ಉಣಬಡಿಸಿ, ಕ್ಷಮೆ ಕೇಳಿ ಕೋಪ ತಣಿಸಿಕೊಳ್ಳುವುದೇ ಈ ಕುಂಡೆ ಹಬ್ಬದ ವಿಶೇಷ.
ಆಚರಣೆ ಹೇಗೆ: ಗಿರಿಜನರು ತಮ್ಮ ಆರಾಧ್ಯದೈವ ಭದ್ರಕಾಳಿ, ಅಯ್ಯಪ್ಪದೇವರ ಹೆಸರಿನಲ್ಲಿ ನಡೆಯುವ ಈ ಹಬ್ಬಕ್ಕೆ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿರುವ 35ಕ್ಕೂ ಹೆಚ್ಚು ಹಾಡಿಯ ಗಿರಿಜನರು ಕಾಡಿನಲ್ಲಿ ಸಿಗುವ ಸೊಪ್ಪು, ಹರಿದ ಬಟ್ಟೆ ಹಾಗೂ ಗೋಣಿ ಚೀಲಗಳಿಂದ ವಿವಿಧ ವೇಷಗಳನ್ನು ತೊಟ್ಟು, ಒಣಗಿದ ಸೋರೇಕಾಯಿ ಬುರುಡೆ, ಪ್ಲಾಸ್ಟಿಕ್ ಡಬ್ಬಿ ಹಾಗೂ ಟಿನ್‌ಗಳನ್ನು ಡೋಲಿನಂತ ತಯಾರಿಸಿ ಆಕರ್ಷಕವಾಗಿ ಕುಣಿಯುತ್ತಾ, ಸಿಕ್ಕ ಸಿಕ್ಕವರನ್ನು ಕೆಟ್ಟ ಪದಗಳಿಂದ ನಿಂದಿಸುತ್ತಾ ಬಿûಾಟನೆ ಮಾಡುತ್ತಾ ಸಂಭ್ರಮಿಸುತ್ತಾರೆ.
ಪ್ರತಿ ವರ್ಷದ ಮೇ ತಿಂಗಳ ಕೊನೆಯ ಬುಧವಾರದಂದು ಈ ಹಬ್ಬ ಆಚರಿಸಲಾಗುವುದು. ದೇವರ ಮೇಲೆ ಭಕ್ತಿ, ಗೌರವದಿಂದ ಪ್ರಾರ್ಥನೆ ಮಾಡಿ ವೇಷ ಹಾಕುತ್ತಾರೆ. ಬಳಿಕ ಕಾಲ್ನಡಿಗೆಯಲ್ಲೇ ಸುತ್ತ-ಮುತ್ತಲ ಹಳ್ಳಿಗಳಿಗೆ ಸುತ್ತಾಡಿ ಹಾಗೂ ಮೈಸೂರು-ಕೇರಳ ರಾಜ್ಯ ಹೆದ್ದಾರಿಯಲ್ಲಿ ಬರುವ ವಾಹನ ಸವಾರರಿಂದ ಭಿಕ್ಷೆ ಬೇಡುತ್ತಾರೆ.
ದೇವರಪುರದಲ್ಲಿ ಪೂಜೆ: ಹನಗೋಡು ಭಾಗದಿಂದ ಕಾಡಿನ ದಾರಿಯಲ್ಲೇ ಬರಿಗಾಲಿನಲ್ಲಿ ತೆರಳಿ ಹಣ ಮತ್ತು ದವಸ-ಧಾನ್ಯ ತಂದು, ತಿತಿಮತಿ ಬಳಿಯ ದೇವರಪುರದಲ್ಲಿರುವ ಅಯ್ಯಪ್ಪಹಾಗೂ ಭದ್ರಕಾಳಿ ದೇವಾಲಯಗಳಲ್ಲಿ ಅರ್ಪಿಸಿ ದೇವರ ಉತ್ಸವದಲ್ಲಿ ಪಾಲ್ಗೊಂಡು ತಾವು ಮಾಡಿದ ತಪ್ಪಿಗಾಗಿ ದೇವರಲ್ಲಿ ಕ್ಷಮೆಯಾಚಿಸಿ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಕುಟುಂಬ ಸಮೇತರಾಗಿ ಊಟ ಮಾಡಿ ಹಾಡಿಗಳಿಗೆ ವಾಪಾಸಾಗುವ ಮೂಲಕ ಹಬ್ಬ ಸಮಾರೋಪಗೊಳ್ಳುತ್ತದೆ.
* ಸಂಪತ್‌ಕುಮಾರ್ ಹುಣಸೂರು