ಕಲಬುರಗಿ: ಇದು ಪಕ್ಕಾ ಬಡತನವೇ ಉಂಡುಟ್ಟ ಸ್ಲಂ ಬಾಲೆಯರ ಕುಟುಂಬದ ಕಥಾನಕ. ಅನಾಲೆಟಿಕಲ್ ಕೆಮೆಸ್ಟ್ರಿಯಲ್ಲಿ ಗುಲ್ಬರ್ಗ ವಿವಿಯಲ್ಲಿ ಸ್ಮರಣಾರ್ಥ ಕೊಡಮಾಡಿದ ಬಂಗಾರದ ಪದಕ ಕೊರಳಿಗೆ ಹಾಕಿಕೊಂಡ ಸಾಧಕಿಯ ಪರಿಚಯವಿದು. ಅಚ್ಚರಿ ಎಂದರೆ ಅಕ್ಕ-ತಂಗಿಯರಿಬ್ಬರೂ ಒಂದೇ ವಿಷಯ ಆಯ್ಕೆ ಮಾಡಿಕೊಂಡಿದ್ದಾರೆ. ಒಬ್ಬರು ಬಂಗಾರ ಬಾಚಿದ್ದರೆ, ಇನ್ನೊಬ್ಬರು ಹೆಚ್ಚು ಅಂಕ ಗಳಿಸಿ ಗಮನ ಸೆಳೆದಿದ್ದಾರೆ.
ಕಲಬುರಗಿ ನಗರದ ಪಕ್ಕಾ ಸ್ಲಂ ಪ್ರದೇಶ ಖಾನಾಪುರ ಬಡಾವಣೆ ನಿವಾಸಿಗಳಾದ ದಶರಥ ಕಣ್ಣಿ ಮತ್ತು ಮಂಜುಳಾ ಕಣ್ಣಿ ದಂಪತಿಯ ಪುತ್ರಿಯರಾದ ಶೃತಿ ಕಣ್ಣಿ ಮತ್ತು ರಜನಿ ಕಣ್ಣಿ ಇಂತಹ ಸಾಧನೆ ಮಾಡಿದ್ದಾರೆ. ಶೃತಿ ಅನಾಲೆಟಿಕಲ್ ಕೆಮೆಸ್ಟ್ರಿಯಲ್ಲಿ ಬಂಗಾರದ ಪದಕ ಕೊರಳಿಗೆ ಹಾಕಿಕೊಂಡರೆ, ತಾನೇನು ಕಮ್ಮಿ ಇಲ್ಲ ಎನ್ನುವಂತೆ ರಜನಿ ಹೆಚ್ಚು ಅಂಕ ಗಳಿಸಿದ್ದಾಳೆ. ಇಬ್ಬರ ಸಾಧನೆಗೆ ಆಸರೆಯಾದದ್ದು ಮಾತ್ರ ಒಂದೇ ಸೇವಾ ಕೇಂದ್ರ!.
ವಿದ್ಯಾ ವಿಕಾಸ ಕೇಂದ್ರ: ಈ ಇಬ್ಬರೂ ಸಹೋದರಿಯರಿಗೆ ಆಸರೆಯಾಗಿ ನಿಂತದ್ದು ಮಾತ್ರ ಸೇವಾ ಭಾರತಿ ಟ್ರಸ್ಟ್ ನಡೆಸುತ್ತಿರುವ ವಿದ್ಯಾ ವಿಕಾಸ ಕೇಂದ್ರ. ಈ ಕೇಂದ್ರದಲ್ಲಿ ಜ್ಞಾನ ಜತೆಯಲ್ಲಿ ಮೌಲ್ಯ-ಸಂಸ್ಕಾರಗಳನ್ನು ಕಲಿಸಿಕೊಟ್ಟಿದ್ದರೆ ಪರಿಣಾಮ ಇಂದು ಮೊದಲ ಮೈಲುಗಲ್ಲು ಮುಟ್ಟಿದಂತಾಗಿದೆ ಎನ್ನುತ್ತಾಳೆ ರಜನಿ.
ಪ್ರತಿ ದಿನವೂ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ವಿದ್ಯಾ ವಿಕಾಸ ಕೇಂದ್ರದಲ್ಲಿ ಗುರುಗಳು ಹೇಳಿಕೊಡುವ ಮೌಲಿಕ ಶಿಕ್ಷಣ ಈ ಸಹೋದರಿಯ ಜೀವನದ ವೇಗ-ಗತ್ತು ಬದಲಿಸಿದೆ. ಅಪ್ಪ ದಶರಥ ಕಣ್ಣಿ ಅವರ ಅಕ್ಕರೆಯಲ್ಲಿ ಬೆಳೆದ ಹೆಣ್ಣು ಮಕ್ಕಳು, ಅವ್ವ ಮಂಜುಳಾ ಕಣ್ಣಿಯ ಕಣ್ಣಿನ ಬೆಳಕಾಗಿದ್ದಾರೆ. ಇವತ್ತಿನ ಆರ್ಥಿದ ದುಬಾರಿ ದುನಿಯಾದಲ್ಲಿ ದಶರಥ ಮನೆಗಳಿಗೆ ಸುಣ್ಣ, ಬಣ್ಣ ಬಳಿದು ಬಂದ ಹಣದಲ್ಲಿ ಇಬ್ಬರೂ ಹೆಣ್ಣು ಮಕ್ಕಳ ಬದುಕು ಕಾಮನಬಿಲ್ಲಿನಂತೆ ಸಿಂಗರಿಸಿದ್ದಾರೆ. ಸಿಕ್ಕ ಎಲ್ಲ ಅವಕಾಶಗಳನ್ನು ಮಕ್ಕಳ ಗೆಲುವಿಗಾಗಿ ಜೋಪಾನ ಮಾಡಿದ ತಂದೆ ಇಬ್ಬರ ಸಹೋದರಿಯರ ಪಾಲಿಗೆ ನಿಜವಾದ ಹೀರೋ. ಇಬ್ಬರೂ ತಂದೆ-ತಾಯಿ ಕುರಿತು ಗೌರವ ವ್ಯಕ್ತಪಡಿಸುತ್ತಾರಲ್ಲದೆ, ಇಂತಹ ಪಾಲಕರು ಸಿಕ್ಕಿದ್ದು ನಮ್ಮ ಭಾಗ್ಯ ಎನ್ನುತ್ತಾರೆ ಶೃತಿ-ರಜನಿ.
ಸರಕಾರಿ ಶಾಲೆ ಮಕ್ಕಳು: ಇಬ್ಬರೂ ಆರಂಭದಿಂದ ಪಿಯುಸಿ ಮುಗಿಯುವವರೆಗೂ ಸರಕಾರಿ ಶಾಲೆ, ಕಾಲೇಜುಗಳಲ್ಲೇ ಓದಿದ್ದಾರೆ. ಇಬ್ಬರ ಆಸಕ್ತಿಯೂ ಒಂದೇ. ಆದರ್ಶ ನಗರದ ಸರಕಾರಿ ಶಾಲೆ, ಪಿಯುಸಿಯನ್ನು ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಮುಗಿಸಿದ್ದಾರೆ. ಸರೋಜಿನಿ ನಾಯ್ಡು ಮಹಿಳಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿದ್ದಾರೆ. ಗುವಿವಿಯಲ್ಲಿ ಕೆಮೆಸ್ಟ್ರೀ( ಅನಾಲೆಟಿಕಲ್) ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬಿಇಡಿ ಮಾಡಿ ಶಿಕ್ಷಕಿಯರಾಗಬೇಕು ಎಂದು ಕೊಂಡಿದ್ದಾರೆ.
ಇಬ್ಬರೂ ನಮ್ಮ ವಿದ್ಯಾ ವಿಕಾಸ ಕೇಂದ್ರದ ವಿದ್ಯಾರ್ಥಿನಿಯರು ಎನ್ನುವುದು ಹೆಮ್ಮೆ. ತುಂಬಾ ಶಿಸ್ತಿನ ಸಹೋದರಿಯರು. 9 ವರ್ಷಗಳಿಂದ ಸೇವಾ ಭಾರತಿ ಟ್ರಸ್ಟ್ ನಡೆಸುತ್ತಿರುವ ವಿದ್ಯಾ ವಿಕಾಸ ಕೇಂದ್ರದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರ ಸಾಧನೆ ಎಲ್ಲ ಮಕ್ಕಳಿಗೆ ಮಾದರಿಯಾಗಲಿ.
-ಶೀಲಾ ಖಾನಾಪುರ, ಕೇಂದ್ರದ ಶಿಕ್ಷಕಿ
ನಮ್ಮಪ್ಪ ನಮಗೆ ಕೊರತೆ ಎನ್ನುವ ಶಬ್ದವನ್ನೇ ಪರಿಚಯಿಸಿಲ್ಲ. ಸ್ಲಂನಲ್ಲಿದ್ದೇವೆ ಎನ್ನುವುದೊಂದು ಸಮಸ್ಯೆ ಅಂತಾ ನಮಗನಿಸಿಲ್ಲ. ಶ್ರಮ ನಿಂತ ನೀರಿಲ್ಲ. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಅಂತ ಅಮ್ಮ-ಅಪ್ಪಾ ತಿಳಿವು ಕೊಟ್ಟಿದ್ದಾರೆ. ಅದರಂತೆ ನಾವು ವಿದ್ಯಾ ವಿಕಾಸ ಕೇಂದ್ರದಲ್ಲಿ ಓದಿ ಸಾಧನೆ ಮಾಡಿ ಗಮನಸೆಳೆಯುವಂತಾಗಿದೆ. ಥ್ಯಾಂಕ್ಸ್ ಟು ಸೇವಾ ಭಾರತಿ ಟ್ರಸ್ಟ್ . –
ರಜನಿ ಕಣ್ಣಿ , ವಿದ್ಯಾರ್ಥಿನಿ
-ಸೂರ್ಯಕಾಂತ ಎಂ.ಜಮಾದಾರ