ಬಾಗಲಕೋಟೆ: ದೌರ್ಜನ್ಯ ಪ್ರಕರಣಗಳಡಿ ನೊಂದ ಮಹಿಳೆಯರಿಗೆ ವಿಶೇಷ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತ್ರೆಯಲ್ಲಿ ಗೆಳತಿ ವಿಶೇಷ ಚಿಕಿತ್ಸೆ ಘಟಕ ಸ್ಥಾಪಿಸಿದ್ದು, ಈ ವರೆಗೆ 36 ಜನರಿಗೆ ಚಿಕಿತ್ಸೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನದ ಕುರಿತು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ತ್ತೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ, ಕಾನೂನು ನೆರವು, ಪೊಲೀಸ್ ನೆರವು, ಸಮಾಲೋಚನೆ ಮುಂತಾದ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಗೆಳತಿ ವಿಶೇಷ ಚಿಕಿತ್ಸಾ ಘಟಕದ ಮೂಲಕ ದಾಖಲಾದ ಪ್ರಕರಣಗಳ ಸಂತ್ರಸ್ತರ ಮಕ್ಕಳು, ಮಹಿಳೆಯರಿಗೆ ಸೂಕ್ತ ಮತ್ತು ಅವಶ್ಯಕ ನೆರವು ನೀಡಲಾಗುತ್ತಿದೆ. ಈಗಾಗಲೇ ಗೆಳತಿ ವಿಶೇಷ ಚಿಕಿತ್ಸಾ ಘಟಕದಲ್ಲಿ 36 ವಿವಿಧ ಪ್ರಕರಣಗಳು ದಾಖಲಾಗಿದ್ದು, ಸೌಲಭ್ಯ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರಕಾರ ದೌರ್ಜನ್ಯ ಪ್ರಕರಣಗಳ ತಡೆಗೆ ಕಾಯ್ದೆ ಜಾರಿಗೆ ತಂದಿದ್ದು, ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಿದೆ. ಕಾನೂನುಗಳ ಸಂಪೂ ರ್ಣ ಮಾಹಿತಿಯನ್ನು ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯವರು ತಿಳಿದುಕೊಂಡಿರಬೇಕು ಎಂದು ತಿಳಿಸಿದರು.
ದೌರ್ಜನ್ಯ ಪ್ರಕರಣಗಳು ನಡೆಯದಂತೆ ಹಾಗೂ ದೌರ್ಜನ್ಯಕ್ಕೆ ಒಳಗಾಗಿ ಮಹಿಳೆಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಾಗಿದೆ. ಅಲ್ಲದೇ ದೌರ್ಜನ್ಯಕ್ಕೆ ಒಳಪಟ್ಟ ಮಹಿಳೆಯರಿಗೆ ತಕ್ಷಣ 25 ಸಾವಿರ ರೂ. ನೀಡಲಾಗುತ್ತಿದೆ. ಆ ನಂತರ ಚಿಕಿತ್ಸೆಯ ತೀವ್ರತೆಯ ಆಧಾರದ ಮೇಲೆ ಗರಿಷ್ಠ 2 ಲಕ್ಷ ರೂ.ವರೆಗೆ ನೀಡಲಾಗುತ್ತಿದೆ. ಈ ಯೋಜನೆಯಡಿ ಮುಧೋಳ, ಬಾಗಲಕೋಟೆ ಮತ್ತು ಹುನಗುಂದ ತಾಲೂಕಿನ ತಲಾ ಒಬ್ಬ ಸಂತ್ರಸ್ತರಿಗೆ ತಲಾ 1 ಲಕ್ಷ ರೂ.ಗಳಂತೆ ಒಟ್ಟು 3 ಲಕ್ಷ ರೂ. ನೀಡಲಾಗಿದೆ. ಅಲ್ಲದೇ ಕಾನೂನು ಸೇವಾ ಪ್ರಾಧಿಕಾರದಿಂದಲೂ ದೌರ್ಜನ್ಯದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ಲಕ್ಷ ರೂ.ದಿಂದ 10 ಲಕ್ಷ ರೂ.ಗಳ ವರೆಗೆ ಚಿಕಿತ್ಸೆ ವೆಚ್ಚ ನೀಡಲಾಗುತ್ತಿದೆ ಎಂದು ತಿಳಿಸಿದರು. ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ತುರ್ತು ಇತ್ಯರ್ಥಕ್ಕೆ ಸಂಬಂಧಿಸಿದ ಆಯಾ ತಾಲೂಕಾ ಸಿಡಿಪಿಒಗಳು ಕ್ರಮ ಕೈಗೊಳ್ಳಬೇಕು. ಈ ಯೋಜನೆಯಡಿ ಬಾದಾಮಿಯಲ್ಲಿ ಮಾತ್ರ ಸಂರಕ್ಷಣಾಧಿಕಾರಿಗಳ ಹುದ್ದೆ ಮಂಜೂರಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಉಳಿದ ತಾಲೂಕುಗಳಲ್ಲಿ ಸಂರಕ್ಷಣಾಧಿಕಾರಿಗಳ ಹುದ್ದೆಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಈ ಯೋಜನೆಯಡಿ ಒಟ್ಟು ದಾಖಲಾದ 316 ಪ್ರಕರಣಗಳ ಪೈಕಿ 55 ಪ್ರಕರಣ ಇತ್ಯರ್ಥಪಡಿಸಲಾಗಿದ್ದು, 261 ಬಾಕಿ ಉಳಿದಿವೆ ಎಂದು ಸಭೆಗೆ ತಿಳಿಸಲಾಯಿತು.
ವಿಧವಾ ಕೋಶ ಸ್ಥಾಪನೆ: ಜಿಲ್ಲಾ ಮಟ್ಟದಲ್ಲಿ ವಿಧವಾ ಕೋಶವನ್ನು ತೆರೆಯಲಾಗಿದ್ದು, ವಿಧವೆಯರು ಈ ಕೋಶದಲ್ಲಿ ನೊಂದಣಿ ಮಾಡಿದಲ್ಲಿ ಸರಕಾರದಿಂದ ಸೌಲಭ್ಯಗಳ ಒದಗಿಸಲಾಗುತ್ತಿದೆ. ಸ್ವಾಧಾರ ಗೃಹದಲ್ಲಿ ದಾಖಲಾದ 75 ವಿಧವೆಯರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಪ್ರಸ್ತುತ 7 ವಿಧವೆಯರು ಸ್ವಾಧಾರ ಗೃಹದಲ್ಲಿ ಇದ್ದಾರೆ ಎಂದು ಸಭೆಗೆ ತಿಳಿಸಲಾಯಿತು.
ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗುವ ಉದ್ದೇಶದಿಂದ 3 ಸ್ವಾಧಾರಗೃಹದಲ್ಲಿದ್ದ 120 ಮಹಿಳೆಯರು, 44 ಮಕ್ಕಳು ಪುನರ್ವಸತಿ ಪಡೆದುಕೊಂಡಿದ್ದಾರೆ. ಸದ್ಯ 82 ಮಹಿಳೆಯರು ಸ್ವಾಧಾರ ಕೇಂದ್ರದಲ್ಲಿ ದಾಖಲಾಗಿದ್ದಾರೆಂದು ಸಭೆಗೆ ತಿಳಿಸಿದಾಗ ಸ್ವಾಧಾರ ಕೇಂದ್ರದಲ್ಲಿರುವ ಮಹಿಳೆ, ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ, ಜಿಪಂ ಉಪ ಕಾರ್ಯದರ್ಶಿ ದುರ್ಗೇಶ ರುದ್ರಾಕ್ಷಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ, ನಿರ್ದೇಶಕ ಕೆ.ವೈ. ಉಕ್ಕಲಿ ಉಪಸ್ಥಿತರಿದ್ದರು.
ದೌರ್ಜನ್ಯ ನಡೆದರೆ ಕರೆ ಮಾಡಿ:
ದೌರ್ಜನ್ಯ ಪ್ರಕರಣಗಳಿಗಾಗಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರದಲ್ಲಿ 6 ಜನ ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಪ್ರಕರಣಗಳು ನಡೆದಲ್ಲಿ ನೇರವಾಗಿ ಮೊ: 9480803900 ಹಾಗೂ ದೂ:08354-235279ಗೆ ಕರೆ ಮಾಡಬಹುದಾಗಿದೆ. •ಅಭಿನವ ಖರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ