ಉಜ್ಜಯಿನಿ: ಇಲ್ಲಿನ ದೇವಸ್ಥಾನದ ಆವರಣದಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಚಿತ್ರೀಕರಣದ ಮಾಡಿದ ಯುವತಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಮಂಗಳವಾರ ಈ ಬಗ್ಗೆ ಆದೇಶಿಸಿದ್ದಾರೆ.
ಉಜ್ಜಯಿನಿಯ ಪುರಾಣ ಪ್ರಸಿದ್ದ ಮಹಾಕಾಲ್ ದೇವಸ್ಥಾನದ ಪ್ರಾಂಗಣ ಮತ್ತು ಗರ್ಭಗುಡಿಯ ಬಳಿ ಬಾಲಿವುಡ್ ಹಾಡನ್ನು ಬಳಸಿ ಈ ಯುವತಿ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ಭಾರೀ ವೈರಲ್ ಆಗಿತ್ತು.
ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮತ್ತು ಎಸ್ ಪಿಗೆ ಸೂಚಿಸಿದ್ದೇನೆ. ಯಾವುದೇ ರೀತಿಯ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.
ಈ ಯುವತಿಯು ದೇವಾಲಯದ ಗರ್ಭಗುಡಿಯಲ್ಲಿ ಜಲಾಭಿಷೇಕ ನಡೆಯುವಾಗ ಅದನ್ನೂ ವಿಡಿಯೋ ಮಾಡಿಕೊಂಡಿದ್ದಾರೆ. ಮತ್ತೊಬ್ಬ ಯುವತಿ ದೇವಸ್ಥಾನದ ಆವರಣದಲ್ಲಿ ಸುತ್ತಾಡುತ್ತಿದ್ದಾಗ ವಿಡಿಯೋ ಚಿತ್ರೀಕರಿಸಿದ್ದಾರೆ.
ಇದನ್ನೂ ಓದಿ:ಶಾಸಕ ಸಂಜಯ್ ಶಿರ್ಸಾತ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು
ಈ ರೀಲ್ಸ್ ವೈರಲ್ ಆದ ಬಳಿಕ ಮಹಾಕಾಲ್ ದೇವಸ್ಥಾನದ ಅರ್ಚಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಸನಾತನ ಧರ್ಮದ ವಿರುದ್ಧ ಮತ್ತು ಧರ್ಮವನ್ನು ಅವಹೇಳನ ಮಾಡುವಂತಿದೆ. ಇಂತಹ ವಿಡಿಯೋಗಳಿಂದ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ” ಎಂದಿದ್ದಾರೆ.