ಬೆಂಗಳೂರು: ನಗರದಲ್ಲಿ ನಡೆದ ಎರಡು ರಸ್ತೆ ಅಪಘಾತ ಪ್ರಕರಣದಲ್ಲಿ ಮಹಿಳಾ ಟೆಕ್ಕಿ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಟೈಯರ್ ಗಾಳಿ ಕಡಿಮೆಯಿದ್ದ ದ್ವಿಚಕ್ರ ವಾಹನ ವೇಗವಾಗಿ ಹೋಗುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳಾ ಟೆಕ್ಕಿ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇಟ್ಟಮಡು ನಿವಾಸಿ ಸುಲೋಚನಾ (29) ಮೃತ ಯುವತಿ.
ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯ ನೈಸ್ ರಸ್ತೆಯ ಪಿಇಎಸ್ ಕಾಲೇಜು ಸಮೀಪ ಭಾನುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಈಕೆಯ ಸ್ನೇಹಿತ ಅನಂತ್ ಕುಮಾರ್ ಎಂಬಾತ ಗಾಯಗೊಂಡಿದ್ದಾರೆ ಎಂದು ಸಂಚಾರ ಠಾಣೆ ಪೊಲೀಸರು ಹೇಳಿದರು.
ಕೋರಮಂಗದಲ್ಲಿರುವ ಸಾಫ್ಟ್ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಸುಲೋಚನಾ ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಸ್ನೇಹಿತ ಅನಂತ್ ಕುಮಾರ್ ಜತೆ ನೈಸ್ ರಸ್ತೆಯ ಸೋಂಪುರ ಟೋಲ್ ಕಡೆಯಿಂದ ಪಿಇಎಸ್ ಕಾಲೇಜು ಕಡೆ ಅತೀವೇಗ ಮತ್ತು ಅಜಾಗರೂಕತೆಯಿಂದ ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದ ಹಿಂಬದಿ ಟೈಯರ್‌ನ ಗಾಳಿ ಸಂಪೂರ್ಣ ಹೋಗಿದ್ದು, ನಿಯಂತ್ರಣ ಕಳೆದುಕೊಂಡ ವಾಹನ ಕೆಳಗೆ ಬಿದ್ದಿದೆ. ಘಟನೆಯಲ್ಲಿ ಸುಲೋಚನಾ ತಲೆ, ಮೈ, ಕೈಗೆ ತೀವ್ರ ಗಾಯವಾಗಿದ್ದು, ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಇನ್ನು ಗಾಯಗೊಂಡಿರುವ ಅನಂತ್ ಕುಮಾರ್‌ಗೆ ಚಿಕಿತ್ಸೆ ಮುಂದುವರಿದಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಅರ್ಧ ಹೆಲ್ಮೆಟ್ ತಂದ ಆಪತ್ತು: ಹಿಂಬದಿ ಕುಳಿತಿದ್ದ ಸುಲೋಚಾನಾ ಅರ್ಧ ಹೆಲ್ಮೆಟ್ ಧರಿಸಿದ್ದರು. ಕೆಳಗೆ ಬಿದ್ದ ಕೂಡಲೇ ಹೆಲ್ಮೆಟ್ ಹಾರಿ ಹೋಗಿತ್ತು. ಆದರಿಂದ ತಲೆಗೆ ಗಂಭೀರ ಪೆಟ್ಟು ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಅದರಿಂದಲೇ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಗಾಳಿ ಕಡಿಮೆ ಇತ್ತು: ದ್ವಿಚಕ್ರ ವಾಹನದ ಹಿಂಬದಿ ಟೈಯರ್‌ನಲ್ಲಿ ಗಾಳಿ ಕಡಿಮೆ ಇತ್ತು. ಆದರೂ ಸವಾರ ಅನಂತ್ ಕುಮಾರ್ ಅತೀವೇಗವಾಗಿ ಚಾಲನೆ ಮಾಡಿದ್ದರಿಂದ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವರ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದುಸಂಚಾರ ಪೊಲೀಸರು ಹೇಳಿದರು. ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಣಮಟ್ಟದ ಪೂರ್ಣ ಹೆಲ್ಮೆಟ್ ಬಳಸಿ : ಈ ಹಿಂದೆ ಚಾಲಕ ಮಾತ್ರವಲ್ಲ, ಹಿಂಬದಿ ಸವಾರರು ಕೂಡ ಪೂರ್ಣ ಹೆಲ್ಮೆಟ್ ಧರಿಸಬೇಕು. ಅದರಿಂದ ವಾಹನ ಅವಘಡಗಳು ಕಡಿಮೆ ಆಗಲಿವೆ ಎಂದು ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದರು. ಆದರೆ, ಕೆಲವೆಡೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಮತ್ತೂಂದೆಡೆ ವಾಹನ ಸವಾರರೇ ಕಳಪೆ ಗುಣಮಟ್ಟದಅರ್ಧ ಹೆಲ್ಮೆಟ್ ಧರಿಸುತ್ತಿದ್ದಾರೆ. ಹೀಗಾಗಿ ಸಾಧ್ಯವಾದಷ್ಟು ಉತ್ತಮ ಕಂಪನಿಯ (ಐಎಸ್‌ಐ) ಮಾರ್ಕ್‌ನ ಹೆಲ್ಮೆಟ್ ಧರಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.