Advertisement
2017ರ ಸೂಪರ್ ವುಮೆನ್1. ನಂದಿನಿ ಕೆ.ಆರ್.
ಕೇಂದ್ರ ಆಡಳಿತ ಸೇವಾ ಆಯೋಗ (ಯುಪಿಎಸ್‌ಸಿ)ದ ಪರೀಕ್ಷೆಯಲ್ಲಿ ಪಾಸ್ ಆಗಲು ಹರಸಾಹಸ ಪಡಬೇಕು. ವರ್ಷಾನುಗಟ್ಟಲೆ ಶ್ರದ್ಧೆಯಿಂದ ಓದಿದರೆ ಮಾತ್ರ ಫಲಿತಾಂಶ ಸಿಹಿಯಾಗಿರುತ್ತದೆ. ಹೀಗಿರುವಾಗ ಕನ್ನಡತಿ ನಂದಿನಿ ಕೆ. ಆರ್. ಅವರು 2016ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ಮೊದಲಿಗರಾಗಿ ಬಂದರು. ಸಾಧಿಸುವ ಛಲವೊಂದಿದ್ದರೆ ಬೇರೆ ಯಾವ ಸಂಗತಿಯೂ ಲೆಕ್ಕಕ್ಕೆ ಬರುವುದಿಲ್ಲ ಎಂಬುದಕ್ಕೆ ಕೋಲಾರ ಜಿಲ್ಲೆಯ ಕೆಂಬೋಡಿ ಎಂಬ ಸಣ್ಣ ಹಳ್ಳಿಯ ನಂದಿನಿ ಅವರೇ ಸಾಕ್ಷಿ. ಅವರ ಈ ಸಾಧನೆ ಎಲ್ಲ ಗ್ರಾಮೀಣ ಹೆಣ್ಣುಮಕ್ಕಳಿಗೆ ಮಾದರಿಯಾಗಲಿ.
ಭಾರತಕ್ಕೆ ಸೌಂದರ್ಯದ ಮುದ್ರೆ ಒತ್ತಿದ ವರ್ಷವಿದು. ಇಡೀ ಜಗತ್ತೇ ನಮ್ಮ ನೆಲದ ಹೆಣ್ಣನ್ನು “ವಿಶ್ವ ಸುಂದರಿ’ ಎಂದು ಘೋಷಿಸಿ, ಕಿರೀಟ ತೊಡಿಸಿತು. 17 ವರ್ಷಗಳ ನಂತರ “ವಿಶ್ವ ಸುಂದರಿ’ ಪಟ್ಟ ಭಾರತದ ಪಾಲಾಗಿದ್ದು, ಅಂಥ ಹೆಮ್ಮೆ, ಅಭಿಮಾನಕ್ಕೆ ಪಾತ್ರರಾದವರು ಹರಿಯಾಣದ ಮಾನುಷಿ ಛಿಲ್ಲರ್. ಆ ಮೂಲಕ ಅವರು “ವಿಶ್ವ ಸುಂದರಿ’ ಸ್ಪರ್ಧೆಯಲ್ಲಿ ಗೆದ್ದ 6ನೇ ಭಾರತೀಯ ಮಹಿಳೆಯಾಗಿದ್ದಾರೆ. ಮೆಡಿಕಲ್ ಓದುತ್ತಿರುವ ಮಾನುಷಿ, ಭಾರತದ “ಟಾಪ್ ಟ್ರೆಂಡಿಂಗ್ ಗೂಗಲ್ ಸರ್ಚ್ ಪರ್ಸನಾಲಿಟಿ’ ಕೂಡ ಹೌದು. 3. ಮಿಥಾಲಿ ರಾಜ್
ಈ ಬಾರಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಪಂದ್ಯವನ್ನು ಪುರುಷರ ಕ್ರಿಕೆಟ್ ಎಂಬಂತೆ ನೋಡಿದ್ದರು ಭಾರತೀಯರು. ಈ ಪವಾಡ ಸೃಷ್ಟಿಸಿದ್ದು ಮಿಥಾಲಿ ರಾಜ್ ಪಡೆ. ಕೂದಲೆಳೆ ಅಂತರದಲ್ಲಿ ಗೆಲುವು ಕೈ ತಪ್ಪಿದರೂ, ಮಿಥಾಲಿ ಪಡೆ ಕ್ರಿಕೆಟ್ ಅಭಿಮಾನಿಗಳ ಹೃದಯ ಗೆದ್ದಿದ್ದು ಸುಳ್ಳಲ್ಲ. ಶ್ರದ್ಧೆಯಿಂದ ತಂಡವನ್ನು ಕಟ್ಟಿದ್ದಷ್ಟೇ ಅಲ್ಲದೇ, ನಾಯಕಿ ಮಿಥಾಲಿ ರಾಜ್, ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮಹಿಳಾ ಕ್ರಿಕೆಟರ್ ಆದ ಹೆಮ್ಮೆಗೂ ಪಾತ್ರರಾದರು. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಪಾಠ ಮಾಡಲು ಬಂದವನ ವಿರುದ್ಧವೂ ದಿಟ್ಟತನದಿಂದ ಬ್ಯಾಟಿಂಗ್ ಮಾಡಿ ಬಾಯಿ ಮುಚ್ಚಿಸಿದ್ದಾರೆ.
Related Articles
ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಚೋಪ್ರಾ ಸದಾ ಸುದ್ದಿಯಲ್ಲಿರುವವರೇ. ಇತ್ತೀಚೆಗೆ, ಏಷ್ಯಾದ ಸೆಕ್ಸಿಯಸ್ಟ್ ಮಹಿಳೆಯ ಪಟ್ಟ ಅವರಿಗೆ ಸಿಕ್ಕಿದೆ. 5 ಬಾರಿ ಈ ಬಿರುದು ಪಡೆದು ಹೊಸ ದಾಖಲೆ ನಿರ್ಮಿಸಿದ್ದಾರೆ. ಲಂಡನ್ ಮೂಲದ ವೀಕ್ಲಿ ನ್ಯೂಸ್ ಪೇಪರ್ “ಈಸ್ಟರ್ನ್ ಐ’ ಏಷ್ಯಾದ 50 ಸೆಕ್ಸಿಯಸ್ಟ್ ಮಹಿಳೆಯರ ಪಟ್ಟಿಗೆ ಸಮೀಕ್ಷೆ ನಡೆಸಿತ್ತು. ಪ್ರಿಯಾಂಕಾ ಅಭಿನಯದ ಹಾಲಿವುಡ್ ಸಿನಿಮಾ “ಬೇವಾಚ್’ ಕೂಡ ಇದೇ ವರ್ಷ ತೆರೆ ಕಂಡಿತು. ಹಾಗೆಯೇ ಈ ವರ್ಷ “ಮದರ್ ಥೆರೇಸಾ ಮೆಮೊರಿಯಲ್ ಅವಾರ್ಡ್’ ಕೂಡ ಅವರಿಗೆ ಲಭಿಸಿದೆ.
Advertisement
5. ಅಪ್ಷನ್ ಆಶಿಕ್ಕಾಶ್ಮೀರದಲ್ಲಿ ಪೊಲೀಸರೊಂದಿಗೆ ಗಲಭೆ ವೇಳೆ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರುತ್ತಿದ್ದ ಕಾಲೇಜು ಹುಡುಗಿಯ ಫೋಟೊ ವೈರಲ್ ಆಗಿತ್ತು. ಆ ಚೆಲುವೆಯೇ ಅಪ್ಷನ್ ಆಶಿಕ್. ಆದರೆ, ಅಪ್ಷನ್ ಕಲ್ಲು ಎಸೆಯುವ ಗುಂಪಿಗೆ ಸೇರಿದವಳಾಗಿರಲಿಲ್ಲ. ಗಲಭೆಯ ವೇಳೆ ವಿದ್ಯಾರ್ಥಿಗಳ ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಾಗ ಆಕೆ ಪೊಲೀಸರತ್ತ ಕಲ್ಲೆಸೆದಿದ್ದಳು. ಅದೇ ಅಪ್ಷನ್ ಈಗ ಕಾಶ್ಮೀರದ ಮೊದಲ ಮಹಿಳಾ ಫುಟ್ಬಾಲ್ ತಂಡದ ನಾಯಕಿ ಆಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಕ್ರೀಡಾ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದಾರೆ. 6. ಪಿ.ವಿ.ಸಿಂಧು
ವಿಶ್ವ ಬ್ಯಾಡ್ಮಿಂಟನ್ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿರುವ ಸಿಂಧು, 2016ರ ಒಲಿಂಪಿಕ್‌ನಲ್ಲಿ ಪದಕ ಪಡೆದ ನಂತರ ಈಕೆ ತಿರುಗಿ ನೋಡಿಲ್ಲ. ಆಗಸ್ಟ್‌ನಲ್ಲಿ ನಡೆದ ಗ್ಲಾಸೊYà ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, ಇಂಡಿಯನ್ ಓಪನ್ ಸೂಪರ್ ಸೀರಿಸ್ ಹಾಗೂ ವಿಕ್ಟರ್ ಕೊರಿಯ ಓಪನ್ ಸೂಪರ್ ಸೀರಿಸ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಹಾಂಕಾಂಗ್ ಓಪನ್ಸ್‌ನಲ್ಲಿ ರನ್ನರ್ ಅಪ್, ದುಬೈ ವರ್ಲ್ಡ್ ಸೂಪರ್ ಸಿರೀಸ್‌ನಲ್ಲಿ ಬೆಳ್ಳಿ ಪದಕ ಪಡೆದು ಸಾಧನೆಯ ಸಾರ್ಥಕ ವರ್ಷ ಕಳೆದಿರುವ ಅವರಿಗೆ ಭವಿಷ್ಯದಲ್ಲಿ ಇನ್ನಷ್ಟು ಯಶಸ್ಸು ಸಿಗಲಿ. 7. ಕವಿತಾ ದೇವಿ
ಡಬ್ಲ್ಯುಡಬ್ಲ್ಯುಇ ನಲ್ಲಿ ಭಾರತೀಯ ಮಹಿಳೆಯೊಬ್ಬಳು ಮೊದಲ ಬಾರಿಗೆ ಪಂಚ್ ಇಟ್ಟ ವರ್ಷವಿದು! ಅಂತಾರಾಷ್ಟ್ರೀಯ ಮಹಿಳಾ ಡಬ್ಲ್ಯುಡಬ್ಲ್ಯುಇ ಪಂದ್ಯಾವಳಿಯಲ್ಲಿ ಭಾಗವಹಿಸಿದ ಹರಿಯಾಣದ ಕವಿತಾ ದೇವಿ ಸುದ್ದಿಯಾಗಿದ್ದು, ಅವರು ಧರಿಸಿದ್ದ ಬಟ್ಟೆಯ ಕಾರಣದಿಂದ. ಸಲ್ವಾರ್ ಕಮೀಜ್‌ನಲ್ಲಿ ಅಖಾಡಕ್ಕಿಳಿದ ಅವರು, ಎದುರಾಳಿಯನ್ನು ಮಣ್ಣು ಮುಕ್ಕಿಸದಿದ್ದರೂ ಜನರ ಮನಸ್ಸು ಗೆದ್ದರು. ಸಲ್ವಾರ್ ಧರಿಸಿ “ಕುಸ್ತಿ’ ಅಖಾಡಕ್ಕಿಳಿದ ಮೊದಲ ಮಹಿಳೆ ಕೂಡ ಇವರೇ. 8. ನಿರ್ಮಲಾ ಸೀತಾರಾಮನ್
ಚೀನಾ, ಪಾಕಿಸ್ತಾನದ ಜೊತೆಗೆ ಗಡಿ ಹಂಚಿಕೊಂಡಿರುವ ಭಾರತ ರಕ್ಷಣೆಯ ವಿಚಾರದಲ್ಲಿ ಎಷ್ಟು ಜಾಗರೂಕವಾಗಿದ್ದರೂ ಕಡಿಮೆಯೇ. ಇನ್ನು ರಕ್ಷಣಾ ಇಲಾಖೆಯ ಜವಾಬ್ದಾರಿ ಹೊರುವುದು ಅಷ್ಟು ಸುಲಭದ್ದಲ್ಲ. ಅಂಥ ಬಹುದೊಡ್ಡ ಜವಾಬ್ದಾರಿಗೆ ಈ ವರ್ಷ ಸ್ತ್ರೀ ಶಕ್ತಿಯೊಂದು ಹೆಗಲು ಕೊಟ್ಟಿದೆ. ನಿರ್ಮಲಾ ಸೀತಾರಾಮನ್ ದೇಶದ ಎರಡನೇ ಮಹಿಳಾ ರಕ್ಷಣಾ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದು ನಿಜಾರ್ಥದಲ್ಲಿ ಮಹಿಳಾ ಸಬಲೀಕರಣಕ್ಕೆ ಉದಾಹರಣೆಯಾಗಿದೆ. 9. ನೀಲಮಣಿ ರಾಜು
ರಾಜ್ಯ ಪೊಲೀಸ್ ಇಲಾಖೆಯ ಅತ್ಯುನ್ನತ ಹುದ್ದೆಯ ಚುಕ್ಕಾಣಿ ಹಿಡಿದಿರುವವರೂ ಒಬ್ಬ ಮಹಿಳೆಯೇ ಅನ್ನೋದು ಇನ್ನೊಂದು ಹೆಮ್ಮೆಯ ವಿಚಾರ. ನೀಲಮಣಿ ಎನ್. ರಾಜು ಅವರು ಇದೇ ನವೆಂಬರ್‌ನಲ್ಲಿ ಡಿಜಿ- ಐಜಿಪಿ ಹುದ್ದೆಯನ್ನಲಂಕರಿಸಿದ್ದಾರೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪೊಲೀಸ್ ಇಲಾಖೆಯ ಜವಾಬ್ದಾರಿ ಹೊತ್ತಿರುವುದು. 10. ಕೆ. ರತ್ನಪ್ರಭಾ
ಒಬ್ಬ ಐಎಎಸ್ ಅಧಿಕಾರಿಗೆ ರಾಜ್ಯ ಮಟ್ಟದಲ್ಲಿ ಸಿಗಬಹುದಾದ ಅತ್ಯುನ್ನತ ಹುದ್ದೆ ಮುಖ್ಯ ಕಾರ್ಯದರ್ಶಿ ಹುದ್ದೆ. ಇತ್ತೀಚೆಗೆ ಕರ್ನಾಟಕದಲ್ಲಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭಾ ಅವರು ಆ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ. ಆ ಮೂಲಕ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಏರಿದ ಮೂರನೇ ಮಹಿಳೆ ಅವರಾಗಿದ್ದಾರೆ. ಈ ಮೊದಲು ಥೆರೇಸಾ ಭಟ್ಟಾಚಾರ್ಯ ಹಾಗೂ ಮಾಲತಿ ದಾಸ್ ಆ ಜವಾಬ್ದಾರಿ ನಿಭಾಯಿಸಿದ್ದರು. ಸಪ್ತಪದಿ ತುಳಿದ ತಾರೆಯರು
1. ಅನುಷ್ಕಾ ಶರ್ಮಾ- ವಿರಾಟ್ ಕೊಹ್ಲಿ
ಹಲವು ವರ್ಷಗಳ ಕಾಲ ಪ್ರಣಯ ಪಕ್ಷಿಗಳಾಗಿ ಓಡಾಡಿ, ಮುನಿಸಿಕೊಂಡು ದೂರಾಗಿ, ಮತ್ತೆ ಒಂದಾಗಿದ್ದ ಅನುಷ್ಕಾ- ವಿರಾಟ್ ಕೊನೆಗೂ ವರ್ಷಾಂತ್ಯದಲ್ಲಿ ಸಪ್ತಪದಿ ತುಳಿದರು. ಇಟಲಿಯಲ್ಲಿ, ಆಪ್ತ ವಲಯದ ಸಮ್ಮುಖದಲ್ಲಿ ಇವರ ವಿವಾಹ ಜರುಗಿತು. 2. ಪ್ರಿಯಾಮಣಿ- ಮುಸ್ತಾಫ ರಾಜ್
ದಕ್ಷಿಣ ಭಾರತೀಯ ಭಾಷಾ ಚಿತ್ರರಂಗದಲ್ಲಿ ಪ್ರಿಯಾಮಣಿಯವರ ಹೆಸರನ್ನು ಕೇಳದವರು ಕಡಿಮೆ. ಆಗಸ್ಟ್‌ನಲ್ಲಿ ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಬಹುಕಾಲದ ಗೆಳೆಯ ಮುಸ್ತಾಫ ರಾಜ್‌ರೊಂದಿಗೆ ನೂತನ ಬದುಕಿಗೆ ಮುನ್ನುಡಿ ಬರೆದರು. 3. ಅಮೂಲ್ಯ- ಜಗದೀಶ್
ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿಯೊಂದು ಕೊಟ್ಟರು. ಅದು ಅವರ ಮದುವೆ ಸಂಗತಿ. ಮೇನಲ್ಲಿ ಉದ್ಯಮಿ ಜಗದೀಶ್ ಆರ್. ಚಂದ್ರ ಅವರ ಕೈ ಹಿಡಿದರು ಅಮೂಲ್ಯ. 4. ಸಮಂತಾ- ನಾಗಚೈತನ್ಯ
ತೆಲುಗು ನಟಿ ಸಮಂತಾ ಅವರು ನಟ ನಾಗಚೈತನ್ಯ ಅವರ ಬಾಳಸಂಗಾತಿಯಾಗಿ, ಸಪ್ತಪದಿ ತುಳಿದರು. ಅಕ್ಟೋಬರ್‌ನಲ್ಲಿ ಹಿಂದೂ- ಕ್ರಿಶ್ಚಿಯನ್ ಶೈಲಿಯಲ್ಲಿ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆಯಿತು. 5. ಸಾಗರಿಕಾ- ಜಹೀರ್
ಬಾಲಿವುಡ್- ಕ್ರಿಕೆಟ್ ಕುಟುಂಬಗಳು ತಾಂಬೂಲ ಬದಲಾಯಿಸಿಕೊಳ್ಳೋದು ಹೊಸತೇನಲ್ಲ. ಎರಡೂ ಕುಟುಂಬಗಳ ಸಂಬಂದವನ್ನು “ಚಕ್ ದೇ ಇಂಡಿಯಾ’ ಖ್ಯಾತಿಯ ನಟಿ ಸಾಗರಿಕಾ ಘಾಟೆY ಮತ್ತು ಜಹೀರ್ ಖಾನ್ ಜೋಡಿ ಮತ್ತಷ್ಟು ಬಲಪಡಿಸಿದೆ.
– – –
ಹ್ಯಾಶ್ ಟ್ಯಾಗ್ ಸಂಚಲನ
1. ಮಿ ಟೂ
ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ಸ್‌ಟೈನ್ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯದ ಆರೋಪ “ಮಿ ಟೂ’ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿ ವಿಶ್ವಾದ್ಯಂತ ಸದ್ದು ಮಾಡಿತು. ಈ ಕಿಡಿಗೆ ಬೆಂಕಿ ಹಚ್ಚಿದ್ದು ಹಾಲಿವುಡ್ ನಟಿ ಅಲಿಸ್ಸಾ ಮಿಲಾನೊ. ಸಾವಿರಾರು ಮಹಿಳೆಯರು ತಮಗಾದ ಅನ್ಯಾಯದ ಬಗ್ಗೆ ಮುಕ್ತವಾಗಿ ಬರೆದುಕೊಂಡರು. ಸಾಮಾನ್ಯರಷ್ಟೇ ಅಲ್ಲದೆ, ಸೆಲೆಬ್ರಿಟಿಗಳು ಕೂಡ ತಾವು ಅನುಭವಿಸಿದ ಕಿರುಕುಳದ ಕತೆ ಹಂಚಿಕೊಂಡು ಈ ಹೋರಾಟವನ್ನು ಬೆಂಬಲಿಸಿದರು. 2. ನಾನೂ ಗೌರಿ
ಸೆಪ್ಟೆಂಬರ್‌ನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆಯಿತು. ದಿಟ್ಟ ಪತ್ರಕರ್ತೆ, ವಿಚಾರವಾದಿ ಎನಿಸಿಕೊಂಡಿದ್ದ ಗೌರಿ ಅವರ ಹತ್ಯೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿ, ಸಾಮಾಜಿಕ ಜಾಲತಾಣಗಳಲ್ಲಿ “ನಾನೂ ಗೌರಿ’ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಸೃಷ್ಟಿಯಾಗಿತ್ತು. ಅವರ ಮೇಲೆ ಕವನಗಳೂ ಹುಟ್ಟಿಕೊಂಡವು.
ಇವರದ್ದೇ ಸುದ್ದಿ…
1. ಗುರ್‌ವೆುಹರ್ ಕೌರ್
ಗುರ್‌ವೆುಹರ್ ಕೌರ್, ರಾತ್ರಿ ಬೆಳಗಾಗುವುದರೊಳಗೆ ಭಾರೀ ಫೇಮಸ್ ಆದ ವಿದ್ಯಾರ್ಥಿನಿ. “ನನ್ನ ಅಪ್ಪನನ್ನು ಪಾಕಿಸ್ತಾನ ಕೊಲ್ಲಲಿಲ್ಲ, ಯುದ್ಧ ಕೊಂದಿತು’ ಎಂಬ ಪ್ಲಕಾರ್ಡ್‌ಗಳನ್ನು ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾದಳು. ಎಬಿವಿಪಿ ವಿರುದ್ಧ ಹೇಳಿಕೆಗಳಿಂದಲೂ ಗುರ್‌ವೆುಹರ್ ಗುರುತಿಸಿಕೊಂಡಿದ್ದರು. ವಿರೋಧಗಳ ನಡುವೆಯೂ ಈಕೆ ವಿದ್ಯಾರ್ಥಿ ನಾಯಕಿಯಾಗಿ ಹೊರಹೊಮ್ಮಿದಳು. 2. ಎಮಾನ್ ಅಹ್ಮದ್
ವಿಶ್ವದ ಅತ್ಯಂತ ತೂಕದ ಮಹಿಳೆ, ದುಬೈನ ಎಮಾನ್ ಅಹ್ಮದ್ ಈ ವರ್ಷ ಚಿಕಿತ್ಸೆಗೆಂದು ಮುಂಬೈಗೆ ಬಂದಿದ್ದರು. ಮುಂಬೈನ ಸೈಫೀ ಆಸ್ಪತ್ರೆಯಲ್ಲಿ 500 ಕೆ.ಜಿ. ತೂಕದ ಎಮಾನ್‌ಗೆ ಸಕಲ ವ್ಯವಸ್ಥೆಗಳನ್ನೂ ಮಾಡಿಕೊಡಲಾಯ್ತು. ಆದರೆ, ಚಿಕಿತ್ಸೆಯ ನಂತರ ಎಮಾನ್ ಸೋದರಿ ಹಾಗೂ ಆಸ್ಪತ್ರೆಯವರ ಮಧ್ಯೆ ಜಟಾಪಟಿ ನಡೆದದ್ದು ಸುದ್ದಿಯಾಗಿತ್ತು. ಎಲ್ಲ ಪ್ರಯತ್ನಗಳ ನಂತರ ಸೆಪ್ಟೆಂಬರ್‌ನಲ್ಲಿ ಎಮನ್ ಕೊನೆಯುಸಿರೆಳೆದದ್ದು ಬೇಸರದ ಸಂಗತಿ. 3. ಡಿಐಜಿ ರೂಪಾ ಮೌದ್ಗಲ್
ಪರಪ್ಪನ ಅಗ್ರಹಾರ ಜೈಲಿನೊಳಗೆ ನಡೆಯುತ್ತಿರುವ ಅವ್ಯವಹಾರಗಳನ್ನು ಬಯಲಿಗೆಳೆಯುವ ದಿಟ್ಟತನ ತೋರಿದರು ಡಿಐಜಿ ರೂಪಾ. ಸೆಂಟ್ರಲ್ ಜೈಲಿನಲ್ಲಿ ಎಐಎಡಿಎಂಕೆ ನಾಯಕಿ ಶಶಿಕಲಾರಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಡಿಜಿಪಿ ಸತ್ಯನಾರಾಯಣ್ ರಾವ್ ಅವರು ಲಂಚ ಸ್ವೀಕರಿಸಿದ್ದಾರೆ ಎಂದು ರೂಪಾ ಆರೋಪಿಸಿದ್ದರು. ಒಬ್ಬ ಹೆಣ್ಣಾಗಿ ಅವ್ಯವಸ್ಥೆ ಮತ್ತು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ರೂಪಾ ಅವರ ಧೈರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೊನೆಗೆ ಅವರನ್ನು ಟ್ರಾಫಿಕ್ ಮತ್ತು ರಸ್ತೆ ಸುರಕ್ಷೆ ಇಲಾಖೆಗೆ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರದ ಬಗ್ಗೆಯೂ ಜನ ಸಿಡಿಮಿಡಿಗೊಂಡರು. 4. ಮಾಳವಿಕಾ
ಈ ವರ್ಷ ಹೊಸ ತೆರಿಗೆ ಪದ್ಧತಿಯಾಗಿ ಜಿಎಸ್‌ಟಿ ಜಾರಿಗೆ ಬಂತು. ಆನಂತರ ಕೆಲವು ವಸ್ತುಗಳ ದರ ಹೆಚ್ಚಾಗಿದ್ದು, ಅವುಗಳಲ್ಲಿ ಸ್ಯಾನಿಟರಿ ಪ್ಯಾಡ್‌ಗಳು ಕೂಡ ಒಂದು. ಈ ಕುರಿತು ಮಹಿಳೆಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಬಿಜೆಪಿಯ ಮಾಳವಿಕಾ ಅವರು, ಪ್ಯಾಡ್ ಬದಲಿಗೆ, ಬಟ್ಟೆ ಬಳಸಿ ಎಂಬರ್ಥದ ಹೇಳಿಕೆ ನೀಡಿ ಟೀಕೆಗೊಳಗಾದರು. 5. ಡಾ. ಎಸ್. ಜಾನಕಿ
ಸಂಗೀತಪ್ರಿಯರಿಗೆ 2017 ಬೇಸರ ಮೂಡಿಸಿದ ವರ್ಷ ಎನ್ನಬಹುದು. ಏಕೆಂದರೆ, ಗಾನಕೋಗಿಲೆ ಎಸ್. ಜಾನಕಿ ಅವರು ತಾವು ಇನ್ಮುಂದೆ ಹಾಡುವುದಿಲ್ಲ ಎಂದು ನಿವೃತ್ತಿ ಘೋಷಿಸಿದರು. ಜಾನಕಿಯಮ್ಮನ ಸ್ವರಕ್ಕೆ ಯಾವತ್ತಿಗೂ ವಯಸ್ಸಾಗುವುದಿಲ್ಲ, ಅವರು ಇನ್ನಷ್ಟು ಹಾಡುಗಳನ್ನು ಹಾಡಬೇಕು ಎಂಬುದೇ ಎಲ್ಲ ಅಭಿಮಾನಿಗಳ ಆಸೆಯಾಗಿತ್ತು. 6. ಸನ್ನಿ ಲಿಯೋನ್
ವರ್ಷಾಂತ್ಯಕ್ಕೆ ಸನ್ನಿ ಲಿಯೋನ್ ಬೆಂಗಳೂರಿಗೆ ಬಂದೇಬಿಟ್ಟಳು ಎಂದು ಬಹಳಷ್ಟು ಮಂದಿ ಒಳಗೊಳಗೇ ಖುಷಿ ಪಟ್ಟಿದ್ದರು. ಆದರೆ, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆಯಬೇಕಿದ್ದ “ಸನ್ನಿ ನೈಟ್ ಇನ್ ಬೆಂಗಳೂರು’ ಕಾರ್ಯಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯ್ತು. ಭದ್ರತೆಯ ನೆಪ ನೀಡಿ ಸರ್ಕಾರ ಕಾರ್ಯಕ್ರಮಕ್ಕೆ ಒಪ್ಪಿಗೆ ಕೊಡಲಿಲ್ಲ. ಸನ್ನಿಯಿಂದಾಗಿ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡುವಂತಾಯ್ತು. 7. ಇವಾಂಕಾ ಟ್ರಂಪ್
ಹೈದರಾಬಾದ್‌ನಲ್ಲಿ ನಡೆದ ಜಿ.ಇ.ಎಸ್. (ಗ್ಲೋಬಲ್ ಎಂಟ್ರಪ್ರಿನಿವರ್‌ಶಿಪ್ ಸಮ್ಮಿತ್)ನಲ್ಲಿ ಪಾಲ್ಗೊಳ್ಳಲು ಇವಾಂಕಾ ಟ್ರಂಪ್ ಮುತ್ತಿನ ನಗರಿಗೆ ಬಂದಿಳಿದರು. ಅಮೆರಿಕ ಅಧ್ಯಕ್ಷ ಟ್ರಂಪ್‌ನ ಪುತ್ರಿ ಬಂದು ಹೋಗುವವರೆಗೆ, ಎಲ್ಲೆಡೆಯೂ ಆಕೆಯದ್ದೇ ಸುದ್ದಿ. ಆಕೆ ಭೇಟಿ ನೀಡುವ ಸ್ಥಳಗಳನ್ನು ತಿಕ್ಕಿ ತಿಕ್ಕಿ ತೊಳೆದು, ಮುತ್ತಿನಂತೆ ಹೊಳೆಯುವ ಹಾಗೆ ಮಾಡಿದ್ದರು. 8. ದೀಪಿಕಾ ಪಡುಕೋಣೆ
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ “ಪದ್ಮಾವತಿ’, ರಜಪೂತ ರಾಣಿ ಪದ್ಮಿನಿ ಕಥೆಯನ್ನಾಧರಿಸಿದ ಚಿತ್ರ. ಇದರಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿಯ ಪಾತ್ರ ಮಾಡಿದ್ದಾರೆ. ನೈಜ ಕತೆಯನ್ನು ವಿರೂಪಗೊಳಿಸಲಾಗಿದೆ ಎಂದು ಕೆಲವು ಸಂಘಟನೆಗಳು ಸಿನಿಮಾ ಬಿಡುಗಡೆಗೆ ತಡೆಯೊಡ್ಡಿದವು. ಬಿಜೆಪಿ ನಾಯಕ ಸೂರಜ್ ಪಾಲ್ ಅಮು ಎಂಬವರು ನಟಿಯ ತಲೆ ಕಡಿದವರಿಗೆ 10 ಕೋಟಿ ರೂ. ಬಹುಮಾನ ತೀವ್ರ ವಿವಾದಕ್ಕೆ ಗುರಿಯಾದರು. 9. ಝೈರಾ ವಾಸಿಂ
“ದಂಗಲ್’ ಸಿನಿಮಾದ ಮೂಲಕ ಖ್ಯಾತಿ ಪಡೆದ ಕಾಶ್ಮೀರದ ನಟಿ ಝೈರಾ ವಾಸಿಂ, ಆ ಚಿತ್ರದಲ್ಲಿ ಕಾಮುಕ ಹುಡುಗನಿಗೆ ಚೆನ್ನಾಗಿ ಥಳಿಸಿ ಬುದ್ಧಿ ಕಲಿಸಿದರು. ಆದರೆ, ನಿಜ ಜೀವನದಲ್ಲಿ, ವಿಮಾನದಲ್ಲಿ ಪಯಣಿಸುವಾಗ, ಒಬ್ಬ ಕಾಮುಕ ಝೈರಾ ಜತೆ ಅಸಭ್ಯವಾಗಿ ವರ್ತಿಸಿದರೂ, ಅದನ್ನು ಸಹಿಸಿಕೊಂಡೇ ಬಂದರು. ಕೊನೆಗೆ ಪೊಲೀಸರಿಗೆ ದೂರು ನೀಡಿ, ಆ ಕಾಮುಕನಿಗೆ ಶಾಸ್ತಿ ಮಾಡಿಸಿದರು.